ಮೈಸೂರು,ಜೂ,12,2020(www.justkannada.in): ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಪಠ್ಯಕ್ರಮ ಅಳವಡಿಕೆ ನಿರ್ಧಾರ ಕೈಬಿಡಲಿ ಎಂದು ಸರ್ಕಾರಕ್ಕೆ ವಿಶ್ರಾಂತ ಕುಲಪತಿಗಳ ವೇದಿಕೆ ಆಗ್ರಹಿಸಿದೆ.
ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಪಠ್ಯಕ್ರಮ ಅಳವಡಿಕೆ ಸಲುವಾಗಿ ಸಮಿತಿ ರಚನೆ ಹಿನ್ನೆಲೆಯಲ್ಲಿ ಏಕರೂಪ ಪಠ್ಯಕ್ರಮ ಅಳವಡಿಕೆಯಿಂದ ಆಗಬಹುದಾದ ಅನಾನುಕೂಲ ಹಾಗೂ ದುಷ್ಪರಿಣಾಮ ಕುರಿತು ವಿಶ್ರಾಂತ ಕುಲಪತಿಗಳ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು.
ವಿವಿ ಕಾಯ್ದೆ ಪ್ರಕಾರ ಪ್ರತಿಯೊಂದು ವಿವಿಗಳಲ್ಲಿ ಎಲ್ಲಾ ವಿಷಯಕ್ಕೂ ಒಂದು ಅಧ್ಯಯನ ಮಂಡಳಿಯಿದೆ. ಜೊತೆಗೆ ವಿವಿಯಲ್ಲಿ ಫ್ಯಾಕಲ್ಟಿ, ಶಿಕ್ಷಣ ಮಂಡಳಿ ಮತ್ತು ಸಿಂಡಿಕೇಟ್ ಇವೆ. ವಿವಿಯ ಶೈಕ್ಷಣಿಕ ಸಂಗತಿಗಳೆಲ್ಲಾ ಈ ಸಾಂಸ್ಥಿಕ ಅಂಗ ಘಟಕಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾಗಬೇಕು. ಎಲ್ಲಾ ವಿವಿಗಳಲ್ಲಿ ಏಕರೂಪತೆ ಅಳವಡಿಸಿದರೆ ವಿವಿಗಳ ವೈವಿಧ್ಯತೆಗೆ ಧಕ್ಕೆಯಾಗುತ್ತದೆ. ಪ್ರತಿಯೊಂದು ವಿವಿಗಳಲ್ಲಿಯೂ ಬೋಧಿಸುವ ಶೈಕ್ಷಣಿಕ ವಿಷಯ, ಸಂಶೋಧನೆ ಮತ್ತು ಸಮಾಜಮುಖಿ ವಿಸ್ತರಣಾ ಕಾರ್ಯಕ್ರಮಗಳು ವೈವಿಧ್ಯಮಯವಾಗಿರಲೇಬೇಕು.
ಪ್ರಾಧ್ಯಾಪಕರ ಸ್ಪೆಷಲೈಜೇಷನ್ ತಕ್ಕಂತೆ ವಿವಿಯಲ್ಲಿ ವಿಷಯ ಬೋಧನೆ ಹಾಗೂ ಸಂಶೋಧನೆಗಳನ್ನು ರೂಪಿಸಬೇಕು. ಅಲ್ಲದೇ ವಿವಿಗಳ ಪ್ರಾಂತ್ಯವಾರು ಕೋರ್ಸ್ ಗಳನ್ನು ರೂಪಿಸಬೇಕಾಗುತ್ತದೆ ಮಂಗಳೂರು ವಿವಿ, ಕುವೆಂಪು ವಿವಿ, ಬಳ್ಳಾರಿ ವಿವಿ ಮತ್ತಿತರ ವಿವಿಗಳ ಪರಿಸರಗಳು ವಿಭಿನ್ನವಾಗಿದೆ. ಇವು ಏಕರೂಪತೆಗೆ ಪೂರಕವಾಗಿರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಏಕ ರೂಪದ ಶಿಕ್ಷಣ ತರುವ ಆತುರದ ನಿರ್ಧಾರವನ್ನು ಕೈಬಿಡಬೇಕು ಎಂದು ವಿಶ್ರಾಂತ ಕುಲಪತಿಗಳ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿಗಳ ವೇದಿಕೆಯ ಎಸ್. ಎನ್. ಹೆಗಡೆ, ವೆಂಕಟರಾಮ್, ರಾಮೇಗೌಡ ಸೇರಿದಂತೆ ಇತರರ ಉಪಸ್ಥಿತರಿದ್ದರು.
Key words: decision – adopt -curriculum –university-government – retired Chancellors.