ಬೆಂಗಳೂರು, ಜೂ,11,2020(www.justkannada.in): ರಾಜ್ಯದಲ್ಲಿ ಒಂದೇ ಒಂದು ಮುಕ್ತ ವಿವಿ ತರಲು ನಿರ್ಧಾರ ಮಾಡಲಾಗಿದೆ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರವೇ ಅಧಿಕೃತ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ರಾಜ್ಯದಲ್ಲಿ ಒಂದೇ ಒಂದು ಮುಕ್ತ ವಿವಿ ತರಲು ನಿರ್ಧಾರ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರವೇ ಅಧಿಕೃತ. ಇದು ಅಧಿಕೃತ ಮುಕ್ತ ವಿವಿಯಾಗಿ ಕೆಲಸ ಮಾಡಲಿದೆ. ಎಲ್ಲಾ ವಿವಿಗಳನ್ನ ಸೇರಿಸಿ ಒಂದೇ ವಿವಿ ಮಾಡುತ್ತೇವೆ ಎಂದು ತಿಳಿಸಿದರು.
ವಿವಿ ಮಸೂದೆ ತಿದ್ದುಪಡಿಗೆ ನಿರ್ಧಾರ ಮಾಡಲಾಗಿದೆ. ಹಾಗೆಯೇ ಬೆಂಗಳೂರು ಸೆಂಟ್ರಲ್ ವಿವಿ ಬದಲಿಗೆ ಬೆಂಗಳೂರು ಸಿಟಿ ವಿವಿ ಎಂದು ನಾಮಕರಣ ಮಾಡಲಾಗುತ್ತದೆ. ವಿವಿಗಳಿಗೆ ವಿಶೇಷಾಧಿಕಾರಿಗಳ ನೇಮಕಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮಹಾರಾಣಿ ಕ್ಲಷ್ಟರ್, ಮಂಡ್ಯ ಕ್ಲಸ್ಟರ್ ವಿವಿಗೆ ನೇಮಕ ಮಾಡಲಾಗುತ್ತದೆ. ಇನ್ನು ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ರೂಪ ಕೊಡುತ್ತೇವೆ. ನೃಪತುಂಗ ವಿವಿ ಎಂದು ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.
Key words: Decision – Cabinet meeting – one –open university-minister- Madhuswamy