ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮ ದಿನಾಚರಣೆ: ಪ್ರತೀ ವರ್ಷ ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಆಚರಿಸಲು ತೀರ್ಮಾನ.

ಬೆಂಗಳೂರು,ಜೂನ್,8,2022(www.justkannada.in): ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಇಂದು ಕರ್ನಾಟಕದ ಏಕೀಕರಣದ ಹೋರಾಟಗಾರರು, ಹಿರಿಯ ಸಾಹಿತಿಗಳಾದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ 107ನೇ ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಾಡೋಜ ಡಾ. ಕಯ್ಯಾರ ಕಿಂಇಣ್ಣರೈ ರವರು ಕೇರಳದಲ್ಲಿ ಮಾಡಿದ ಕನ್ನಡ ಪರ ಹೋರಾಟ ಹಾಗೂ ಸಾಧನೆಯ ಬಗ್ಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ,  ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರು ಕೇರಳದಲ್ಲಿ ಕನ್ನಡದ ಕಹಳೆಯನ್ನು ಊದಿದ ಅಪ್ರತಿಮ ಕನ್ನಡದ ಕಟ್ಟಾಳು ಆಗಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ದಿಸೆಯಲ್ಲಿ ಅವರು ಮಾಡಿದ ಹೋರಾಟ ಐತಿಹಾಸಿಕವಾದುದು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಕ್ರಿಯಾಶೀಲ ಪಾತ್ರ ವಹಿಸಿದ್ದ ಡಾ.ಕಯ್ಯಾರ ಕಿಂಇಣ್ಣ ರೈ ರವರ ಹೆಸರಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು  ಪ್ರಸ್ತುತ ಸಾಲಿನಿಂದ “ಗಡಿ ನಾಡ ಚೇತನ“ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿರುವ ಬಗ್ಗೆ ಪ್ರಸ್ತಾಪಿಸುತ್ತಾ ಮುಂದಿನ ವರ್ಷದಿಂದ ಕವಿ ಡಾ.ಕಯ್ಯಾರ ಕಿಞ್ಞಣ್ಣ ರೈ ರವರ ಜನ್ಮದಿನೋತ್ಸವವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಾಧಿಕಾರದಲ್ಲಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ವಿಶೇಷವಾಗಿ ಕರ್ನಾಟಕದ ಏಕೀಕರಣದ ಬಗ್ಗೆ ಅವರು ಬರೆದಂತಹ ಲೇಖನಗಳನ್ನು, ರಚಿಸಿದ ಕವನಗಳನ್ನು ಒಂದೆಡೆ ಸಂಗ್ರಹಿಸಿ ಪ್ರಾಧಿಕಾರದ ವತಿಯಿಂದ ಅದನ್ನು ಪ್ರಕಟಿಸುವುದಾಗಿಯೂ ತಿಳಿಸಿದರು”.

ಈ ಸಂದರ್ಭದಲ್ಲಿ ಪ್ರೊ. ಕೆ. ಇ ರಾಧಾಕೃಷ್ಣ ಅವರು ಡಾ.ಕಯ್ಯಾರ ಕಿಂಇಣ್ಣ ರೈ ರವರ ಬಗ್ಗೆ ಮಾತನಾಡಿದರು.  ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌ ಮತ್ತೀಹಳ್ಳಿ  ಸ್ವಾಗತಿಸಿ  ವಂದನಾರ್ಪಣೆ ಮಾಡಿದರು .ಈ ಸಮಾರಂಭದಲ್ಲಿ ಕನಕಪೀಠದ ಅಧ್ಯಕ್ಷರಾದ ಸತ್ಯನಾರಾಯಣ ಅವರ ಗಮಕ ವಾಚನ ಮತ್ತು ಗಾಯನ ಸುಗಮ ಸಂಗೀತ ಪರಿಷತ್ತಿನ ಕಿಕ್ಕೇರಿ ಕೃಷ್ಣಮೂರ್ತಿರವರಿಂದ  ಡಾ.ಕಯ್ಯಾರ ಕಿಂಇಣ್ಣ ರೈ ರವರು ರಚಿಸಿದ ಕವನಗಳ ವಾಚನ ಏರ್ಪಡಿಸಲಾಗಿತ್ತು.

Key words: Decision – Celebrate -every Year- Kaiyara kijnanna rai-Karnataka Border Development Authority