ಬೆಂಗಳೂರು,ಜ,5,2020(www.justkannada.in): ರಾಮನಗರದ ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಲಿ ಇಲ್ಲದಿದ್ರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ರಾಮನಗರದ ಹೆಸರು ಬದಲಾಯಿಸುವ ಸರ್ಕಾರದ ನಿರ್ಧಾರದ ಕುರಿತು ಎಚ್.ಡಿ ಕುಮಾರಸ್ವಾಮಿ ಅವರ ಪತ್ರಿಕಾ ಪ್ರಕಟಣೆ ಮತ್ತು ಟ್ವೀಟ್ ಮಾಡಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ರಾಮನಗರ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವುದಿಷ್ಟು…..
ಪಕ್ಕದಲ್ಲೇ ಕಾವೇರಿ ನದಿ ಇದೆ, ಇಗ್ಗಲೂರಿನಲ್ಲಿ ‘ದೇವೇಗೌಡ ಬ್ಯಾರೇಜ್’ ಇದೆ. ಮಾಗಡಿಗೆ ಹೇಮೆ ಹರಿಯಲಿದ್ದಾಳೆ, ಚಿನ್ನದಂಥ ಭೂಮಿ ಇದೆ, ಮುಗ್ಧ ಜನರಿದ್ದಾರೆ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ.
ರಾಮನಗರವನ್ನು ಅಭಿವೃದ್ಧಿ ಮಾಡುವ ಇಚ್ಛೆ ನಿಮಗಿದೆಯೇ ಬಿಎಸ್ವೈ ಅವರೇ? ಹಾಗಿದ್ದರೆ ಜಿಲ್ಲೆಗೆ ನಾನು ನನ್ನ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಪ್ರಾಮಾಣಿಕವಾಗಿ ಬಿಡುಗಡೆ ಮಾಡಿ ಸಾಕು. ಅದನ್ನೂ ಮೀರಿದ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ನಿಮಗೆ ನನ್ನ, ನನ್ನ ಜನ ಸಹಕಾರ ಸದಾ ಇರಲಿದೆ. ಆದರೆ ಹೆಸರು ಬದಲಿಸಿ ಜಿಲ್ಲೆ ಸಂಸ್ಕೃತಿ, ಅಸ್ಮಿತೆಗೆ ಬೆಂಕಿ ಇಡಬೇಡಿ ಎಂದು ಸಿಎಂ ಬಿಎಸ್ ವೈಗೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಇನ್ನು ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೆ ಗಡಿ ಗೋಪುರ ಕಟ್ಟಿದ್ದರು. ಆದರೆ ನಾವು ಅದನ್ನೆಲ್ಲ ಎಂದೋ ದಾಟಿದೆವು. ಕೆಂಪೇಗೌಡರ ಇಚ್ಛೆ ಮೀರಿದೆವು. ಕೆರೆ ಕಾಲುವೆ ಮುಚ್ಚಿದೆವು ಪರಿಣಾಮ ಬೆಂಗಳೂರು ಇಂದು ಸಮಸ್ಯೆಗಳ ಕೂಪ.
ಅಭಿವೃದ್ಧಿಯ ಹೆಸರಲ್ಲಿ ಇದೇ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಇಲ್ಲಿಗೆ ಕೋಟಿ ಕುಳಗಳು ಬರದಿದ್ದರೂ ಬೇಡ. ಭೂಮಿ ಲೂಟಿಯಾಗದೇ ಇರಲಿ. ಕೆರೆಗಳು ಮುಚ್ಚದೇ ಇರಲಿ. ಸಮೃದ್ಧ ಜನಪದ ಸಂಸ್ಕೃತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದೇ ಇರಲಿ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಹೆಸರಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ದಕ್ಷಿಣ ಕನ್ನಡಕ್ಕೆ? ಎಂದು ಹೆಚ್.ಡಿಕೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಹೊಂದಬೇಕು ಎಂಬುದು ಇಂದಿನ ಹಣವಂತರ ಬಯಕೆ. ಇದರಲ್ಲಿ ಉತ್ತರಭಾರತೀಯರೇ ಹೆಚ್ಚು. ಹಾಗಾಗಿಯೇ ಸಾಕಷ್ಟು ಭೂಮಿ ಫಾರಂ ಹೌಸ್ಗಳಿಗೆ ಬಲಿಯಾಗಿವೆ. ಕೃಷಿಯಿಂದ ಹಿಮ್ಮುಖವಾಗಿವೆ. ರಾಮನಗರದ ಹೆಸರು ಬದಲಾವಣೆ ಇಂಥವರಿಗಾಗಿಯೇ ಹೊರತು ರೈತರಿಗೆ ಅಲ್ಲ ಎಂದು ಹೆಚ್.ಡಿಕೆ ಟೀಕಿಸಿದ್ದಾರೆ.
ರಾಮನಗರ ಹೆಸರು ಬದಲಾಯಿಸಿವುದು ಕೆಂಗಲ್ ಹನುಮಂತಯ್ಯರಿಗೆ ಮಾಡಿದ ಅಪಮಾನ…
ರಾಮನಗರ ತಾಲ್ಲೂಕು ಮೊದಲು ‘ಕ್ಲೋಸ್ ಪೇಟೆ’ ಎಂದು ಇತ್ತು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ರಾಮನಗರ ತಾಲ್ಲೂಕು ಮಾಡಿದರು. ಅದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ ಎಂದು ಹೆಚ್.ಡಿಕೆ ಕಿಡಿಕಾರಿದರು.
ಈ ಜಿಲ್ಲೆ ಗಂಗರು ಆಳಿದ ನಾಡು. ಬಾಲಗಂಗಾಧರನಾಥರ, ಶಿವಕುಮಾರ ಶ್ರೀಗಳ ಜನ್ಮಭೂಮಿ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಇದೆ ಹೆಸರನ್ನು ಬೆಂಗಳೂರು ಎಂದು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ.
ರಾಮನಗರ ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೇ ರಾಮದೇವರ ಬೆಟ್ಟ. ಅದಕ್ಕಾಗಿಯೇ ರಾಮನಗರ ತಾಲ್ಲೂಕು ಆಗಿದೆ. ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ. ಇದನ್ನು ಮೀರಿ ಹೆಸರು ಬದಲಿಸಿದರೆ ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಹೆಸರಿಗೆ ಆಗುವ ಅಪಮಾನ. ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
Key words: decision -change -name – Ramanagaram- Former CM H.D kumaraswamy-warning- government