ಮೈಸೂರು,ಜನವರಿ,5,2020(www.justkannada.in): ಕೃತಕವಾಗಿ ನಿರ್ಮಾಣವಾಗಲಿರುವ ಕಾಡಿನ ನಡುವೆ ತೆರೆದ ವಾಹನದಲ್ಲಿ ಸಫಾರಿ ನಡೆಸುವ ಆಫ್ರಿಕನ್ ಸಫಾರಿಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ಹೇಳಿದರು.
ಈ ಬಗ್ಗೆ ಇಂದು ಮಾತನಾಡಿದ ಎಲ್.ಆರ್ ಮಹಾದೇವಸ್ವಾಮಿ, ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. 116 ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ರೇಸ್ ಕೋರ್ಸ್‌ವರೆಗೂ ಮೃಗಾಲಯದ ಆವರಣವನ್ನು ವಿಸ್ತರಿಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಬಾರಿ ನಡೆದ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೇಸ್ ಕೋರ್ಸ್‌ನ ಗುತ್ತಿಗೆ ಅವಧಿ 2021ರ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ರೇಸ್‌ಕೋರ್ಸ್ ಸ್ಥಳವನ್ನು ಮೃಗಾಲಯ ವಿಸ್ತರಣೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಮೃಗಾಲಯದಲ್ಲಿನ ಪ್ರಾಣಿ-ಪಕ್ಷಿಗಳ ಸಂಖ್ಯೆ ಹಿಮ್ಮಡಿಯಾಗುವುದಲ್ಲದೇ ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿದೆ. ರೇಸ್‌ಕೋರ್ಸ್ ಆವರಣಕ್ಕೆ ಮೃಗಾಲಯದಿಂದಲೇ ಸಂಪರ್ಕ ಕಲ್ಪಿಸಲು ನಿರ್ಧಾರ ಮಾಡಲಾಗದ್ದು, ಅಂಡರ್‌ಪಾಸ್ ಅಥವಾ ಮೇಲ್ಸೆತುವೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ಮಾಹಿತಿ ನೀಡಿದರು.
Key words: Decision – expand -Mysore Zoo –Campus-African safari -thinking.