ಬೆಂಗಳೂರು, ಜೂನ್,23,2023(www.justkannada.in): ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಪಂಚಮಸಾಲಿ ಸಮುದಾಯವನ್ನು ರಾಜ್ಯ 2ಎ ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿ ಶಾಸಕರ ನಿಯೋಗವು ಇಂದು ಅವರನ್ನು ಭೇಟಿ ಮಾಡಿ ಮನವಿ ಮಾಡಿತು.
ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದಲ್ಲಿ ಅವರೂ ಮುಖ್ಯ ವಾಹಿನಿಗೆ ಬರಲು ಅನುಕೂಲ ವಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದ ಸಿಎಂ ಸಿದ್ಧರಾಮಯ್ಯ, ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ವಿನಯ್ ಕುಲಕರ್ಣಿ, ಮುಸ್ಲಿಂ ಸಮುದಾಯದ ಪಾಲಿನ ಮೀಸಲಾತಿಯನ್ನು ಕಿತ್ತು ಕೊಟ್ಟಿದ್ದನ್ನು ನಾವುಗಳು ಅವತ್ತೇ ವಿರೋಧಿಸಿದ್ದೆವು ಎಂದರು.
ಸಭೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ನುಡಿದಂತೆ ನಡೆದವರು ನೀವು..
ಚರ್ಚೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, “ನುಡಿದಂತೆ ನಡೆದ ಮುಖ್ಯಮಂತ್ರಿಗಳು ನೀವು. ಬಸವಣ್ಣ ಅವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದವರು, ರಾಣಿ ಚನ್ನಮ್ಮ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಿದವರು ಎಂದು ಜಯಮೃತ್ಯುಂಜಯ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರದಲ್ಲಿ ಕಾಟಾಚಾರ ಮಾಡಲ್ಲ.
ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು. ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕೇ ನ್ಯಾಯಾಲಯಕ್ಕೆ ಹೋದರೆ ಬಿದ್ದೋಗುವ ರೀತಿಯಲ್ಲಿ ಕಾಟಾಚಾರಕ್ಕೆ ಕೊಟ್ಟರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜತೆ ಚರ್ಚಿಸಿ ಗೊಂದಲ ಬಗೆಹರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
Key words: Decision – reservation – 2A – Panchmasali – CM Siddaramaiah-promise