ಶಿವಮೊಗ್ಗ,ಫೆಬ್ರವರಿ,21,2022(www.justkannada.in): ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಇಂದು ಶಾಲಾಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಭದ್ರಾವತಿಯಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದ್ದು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಯಾವುದೇ ಶಾಂತಿ ಸಭೆ ಆಯೋಜನೆ ಮಾಡಿಲ್ಲ ಶವಯಾತ್ರೆ ನಡೆಸುವ ಬಗ್ಗೆ ಮಾಹಿತಿ ಇಲ್ಲ ಎಂದು ಡಿಸಿ ಸೇಲ್ವಮಣಿ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಭಜರಂಗದಳದ ಕಾರ್ಯಕರ್ತನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಹರ್ಷ ಬರ್ಬರ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ. ಅಪರಿಚಿತ ವ್ಯಕ್ತಿಗಳಿಂದ ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿದ್ದ ಹರ್ಷರನ್ನ ಸ್ನೇಹಿತರು ಆಸ್ಪತ್ರೆಗೆ ರವಾನಿಸಿದ್ದು ಆದರೆ ಚಿಕಿತ್ಸೆ ಫಲಿಸದೆ ಹರ್ಷ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಹರ್ಷನ ಶವ ಇರುವ ಮೆಗ್ಗಾಂವ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಲೆ ಆರೋಪಿಗಳ ಸುಳಿವು ಸಿಕ್ಕಿದ್ದು, ಕೂಡಲೇ ಬಂಧಿಸಲಾಗುವುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಜನರು ಶಾಂತರೀತಿಯಿಂದ ವರ್ತಿಸಬೇಕೆಂದು ಕೋರಿದ್ದರು.
Key words: Declaration – leave – school – Shimoga