ಬೆಂಗಳೂರು, ಜುಲೈ 21, 2021 (www.justkannada.in): ಬಿಜೆಪಿ ಆಡಳಿತ ಇರುವಂತಹ ಉತ್ತರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಒಂದು ಕುಟುಂಬಕ್ಕೆ ಎರಡೇ-ಮಕ್ಕಳು ಎಂಬ ಕಾನೂನನ್ನು ಜಾರಿಗೆ ತರಲು ಹೊರಟಿವೆ. ಅದೇ ರೀತಿ ಜನಸಂಖ್ಯೆಯಲ್ಲಿ ದೇಶದಲ್ಲಿ ೮ನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯವೂ (೬.೫ ಕೋಟಿ) ಸಹ ಜನಸಂಖ್ಯಾ ನಿಯಂತ್ರಣ ಕ್ರಮವನ್ನು ಹೇರಲು ಯೋಚಿಸುತ್ತಿದೆ. ಇತ್ತೀಚೆಗೆ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು, ಒಟ್ಟು ಸಂತಾನೋತ್ಪತ್ತಿ ಪ್ರಮಾಣವನ್ನು 2026 ವೇಳೆಗೆ 2.1 ಹಾಗೂ 2030ರ ವೇಳೆಗೆ 1.9ಕ್ಕೆ ಇಳಿಸುವ ಉತ್ತರ ಪ್ರದೇಶದ ಕರಡು ಕಾನೂನನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿರುವುದಾಗಿ ತಿಳಿಸಿದರು.
ಆದರೆ ಕೆಲವು ವಿಷಯ ತಜ್ಞರ ಪ್ರಕಾರ ಕರ್ನಾಟಕದಲ್ಲಿ ಅಂತಹ ಕ್ರಮ ಕೈಗೊಳ್ಳುವ ಅಗತ್ಯವಿಲ್ಲವಂತೆ. ಏಕೆಂದರೆ ನಮ್ಮ ರಾಜ್ಯದಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗುತ್ತಿದೆ, ಅಂದರೆ ಓರ್ವ ಮಹಿಳೆ ಸಂತಾನೋತ್ಪತ್ತಿ ಶಕ್ತಿ ಹೆಚ್ಚಾಗಿರುವ ವಯಸ್ಸಿನಲ್ಲಿ ಮಕ್ಕಳನ್ನು ಹೆರುವ ಸಂಖ್ಯೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ಹೆಚ್ಎಫ್ಎಸ್) ಪ್ರಕಾರ, ೧೯೮೧ರಲ್ಲಿ ೩.೬ರಷ್ಟಿದ್ದ ಈ ಸಂಖ್ಯೆ ೨೦೨೦ರಲ್ಲಿ ೧.೭ಕ್ಕೆ ಇಳಿಕೆಯಾಗಿದೆಯಂತೆ. ಅಂದರೆ ನಮ್ಮ ರಾಜ್ಯದಲ್ಲಿ ಮಹಿಳೆಯರು ಮಕ್ಕಳ ಹೆರುವ ಪ್ರಮಾಣ ಕಡಿಮೆಯಾಗಿದೆಯಂತೆ.
ಎನ್ಎಫ್ ಹೆಚ್ ಎಸ್ ದತ್ತಾಂಶವನ್ನು ತೋರಿಸುತ್ತಾ ಸಂತಾನೋತ್ಪತ್ತಿ ಹಾಗೂ ಫಲವತ್ತತೆ ತಜ್ಞ ವೈದ್ಯರಾದ ಡಾ. ಇಂದ್ರಾಣಿ ಕೆ. ಅವರು, “ರಾಜ್ಯದ ಜನಸಂಖ್ಯೆ ಸ್ಥಿರವಾಗಿರಲು ಒಟ್ಟು ಸಂತಾನೋತ್ಪತ್ತಿ ಅಥವಾ ಫಲವತ್ತತೆ ಪ್ರಮಾಣ ೨.೧ರಷ್ಟಿರಬೇಕು. ಆದರೆ ಕರ್ನಾಟಕ ಅದಕ್ಕಿಂತ ಬಹಳ ಕೆಳಮಟ್ಟದಲ್ಲಿದೆ. ೨೦೩೦ರ ವೇಳೆಗೆ ಈ ಪ್ರಮಾಣ ೧.೫ಕ್ಕೆ ಇಳಿಕೆಯಾಗುವ ಸಂಭವವಿದ್ದು, ಇದು ಅಪಾಯಕಾರಿ ಪ್ರವೃತ್ತಿಯಾಗಿದೆ,” ಎನ್ನುತ್ತಾರೆ.
ಜನಸಂಖ್ಯೆ ನಿಯಂತ್ರಣ ಕ್ರಮಗಳು ಭವಿಷ್ಯದಲ್ಲಿ ಅಸಮತೋಲನದ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು ಎನ್ನುವುದು ಸಮಾಜಶಾಸ್ತçಜ್ಞ ಎನ್. ಪುಷ್ಪರಾಜ್ ಅವರ ಅನಿಸಿಕೆ. ಚೀನಾದ ಒಂದು ಉದಾಹರಣೆಯನ್ನು ನೀಡುವ ಪುಷ್ಪರಾಜ್ ಅವರು, “ಚೀನಾ ದೇಶದಲ್ಲಿ ೧೯೮೦ರ ದಶಕದಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಇರಬೇಕು ಎಂಬ ಕಾನೂನನ್ನು ಜಾರಿಗೆ ತರಲಾಯಿತು. ಆದರೆ ಸ್ವಲ್ಪ ಸಮಯದ ನಂತರ ಅವಲಂಭಿತ ಹಿರಿಯ ನಾಗರಿಕರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾದ ಕಾರಣದಿಂದಾಗಿ, ಕೆಲಸ ಮಾಡುವ ಜನರ ಕೊರತೆ ಹಾಗೂ ದುಬಾರಿ ವೈದ್ಯಕೀಯ ಆರೈಕೆಯ ಕಾರಣಗಳಿಂದಾಗಿ ಕಾನೂನನ್ನು ಕೈಬಿಡಲಾಯಿತು,” ಎನ್ನುತ್ತಾರೆ.
ಜೊತೆಗೆ ಎರಡೇ-ಮಕ್ಕಳು ಎನ್ನುವ ಕಾನೂನಿಂದಾಗಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಅಸುರಕ್ಷಿತ ಗರ್ಭಪಾತಗಳಂತಹ ಸಮಸ್ಯೆಗಳು ಹೆಚ್ಚಾಗಬಹುದು. ಸರ್ಕಾರ ಈ ಕುರಿತು ಜನರನ್ನು ಸಂವೇದನಾಶೀಲರನ್ನಾಗಿಸಲು ಪ್ರಯತ್ನಿಸುತ್ತಿದೆ. ಆದರೆ ಈ ಅಭ್ಯಾಸ ಅವಿರತವಾಗಿ ಮುಂದುವರೆದಿದೆ. ಪ್ರಸ್ತುತ ಲಿಂಗ ಅಸಮತೋಲನದ ವಿಷಯದಲ್ಲಿ ಕರ್ನಾಟಕ ದೇಶದಲ್ಲಿ 8ನೇ ಸ್ಥಾನದಲ್ಲಿದೆ.
“ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿಸುವುದು ಹಾಗೂ ವಿಶೇಷವಾಗಿ ಯುವಜನರಿಗೆ ಶಿಕ್ಷಣವನ್ನು ಕಲ್ಪಿಸುವ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು ಜನಸಂಖ್ಯೆ ನಿಯಂತ್ರಣದ ಅತ್ಯಂತ ಪರಿಣಾಮಕಾರಿಯಾದ ವಿಧಾನಗಳಲ್ಲಿ ಒಂದಾಗಿದೆ ಎನ್ನುವುದು ಈ ಹಿಂದಿನ ಅಧ್ಯಯನಗಳಲ್ಲಿ ತಿಳಿದು ಬಂದಿದೆ. ೧೯೭೦ರ ದಶಕದಲ್ಲಿ, ತುರ್ತು ಸಂದರ್ಭದ ನಂತರ, ಸರ್ಕಾರಗಳು ಹೆಣ್ಣು ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಿತು. ಎರಡು ದಶಕಗಳ ನಂತರ, ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯಗಳಲ್ಲಿ ಅದರ ಫಲಿತಾಂಶ ಗೋಚರಿಸಿತು. ಶಿಕ್ಷಣದ ಲಾಭ ಪಡೆದಂತಹವರು ಚಿಕ್ಕ ಕುಟುಂಬಗಳಿಗೆ ಆದ್ಯತೆ ನೀಡಲಾರಂಭಿಸಿದರು. ಜನಸಂಖ್ಯೆ ನಿಯಂತ್ರಿಸಲು ನಾವು ಅನುಸರಿಸಬೇಕಾಗಿರುವ ಮಾರ್ಗ ಇದು,” ಎನ್ನುತ್ತಾರೆ ಜಗ್ರನ್ ಲೇಕ್ ಸಿಟಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸಂದೀಪ್ ಶಾಸ್ತ್ರಿ.
ಆದರೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರು ರಾಜ್ಯದಲ್ಲಿ ಈ ನೀತಿಯ ಅನುಷ್ಠಾನವನ್ನು ಬಲವಾಗಿ ಬೆಂಬಲಿಸಿದ್ದಾರೆ. ಅನೇಕ ಪ್ರಮುಖ ಸಮಸ್ಯೆಗಳಿಗೆ ಅತಿಯಾದ ಜನಸಂಖ್ಯೆಯೇ ಕಾರಣ ಎನ್ನುತ್ತಾರೆ ಅವರು. ಅವರ ಪ್ರಕಾರ ಕರ್ನಾಟಕ ರಾಜ್ಯದ ಜನಸಂಖ್ಯೆ ಅತೀ ಶೀಘ್ರದಲ್ಲಿಯೇ 7 ಕೋಟಿ ದಾಟುತ್ತದೆ. ಇದರಿಂದ ಸಮಾಜದಲ್ಲಿ ಅಸಮಾನತೆ ಹಾಗೂ ಶಿಕ್ಷಣ ಮತ್ತು ಆರೋಗ್ಯ ವಲಯಗಳ ಮೇಲಿನ ಹೊರೆ ಹೆಚ್ಚಾಗುತ್ತದೆ ಎನ್ನುತ್ತಾರೆ.
“ಉತ್ತರ ಪ್ರದೇಶದ ಪ್ರಸ್ತಾಪಿತ ನೀತಿಯ ಅನುಸಾರ ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಾವಕಾಶ, ಬಡ್ತಿ ಅಥವಾ ಸರ್ಕಾರದಿಂದ ಒದಗಿಸಲಾಗುವ ಅನೇಕ ಅನುದಾನಗಳನ್ನು ನಿಲ್ಲಿಸಲಾಗುತ್ತದೆ. ಇಂತಹ ಕ್ರಮದಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ,” ಎನ್ನುವುದು ಸಿ.ಟಿ. ರವಿ ಅವರ ವಾದ.
ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ
Key words: declining -reproductive rate – Karnataka – last -four decades