ಬೆಂಗಳೂರು,ಸೆಪ್ಟಂಬರ್,23,2021(www.justkannada.in) ಸೇವೆಗಾಗಿ ಬದುಕನ್ನು ಇಟ್ಟಾಗ ಸಿಗುವ ಆನಂದವನ್ನ ಅನುಭವಿಸಿಯೇ ನೋಡಬೇಕು. ಇತರರ ಬಗೆಗೆ ಯೋಚಿಸುವುದು. ಇತರರಿಗಾಗಿ ಬದುಕುವುದು. ಬದುಕಿನ ಸಾರ್ಥಕತೆ ಅಷ್ಟೇ ಅಲ್ಲ, ಆಗ ಮಾತ್ರ ಬದುಕಿದ್ದು ಸಾರ್ಥಕ ಎಂದು ಲೇಖಕ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನುಡಿದರು.
ಕ್ಯಾನ್ಸರ್ ನಿಂದ ಬಳಲುತ್ತಿರುವವರ ಕುಟುಂಬಗಳಿಗೆ ಭಾವನಾತ್ಮಕವಾಕ ಬೆಂಬಲ ನೀಡುತ್ತಿರುವ ಲಕ್ಷ್ಮೀಶ ಫೌಂಡೇಶನ್ ನ ವಾರ್ಷಿಕೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿದರು.
ಸೇವೆಗಾಗಿ ಭಗವಂತ ನಮ್ಮನ್ನು ಆರಿಸಿಕೊಂಡಿದ್ದಾನೆ ಎನ್ನುವ ಧನ್ಯತೆಯಿಂದ ಕಾರ್ಯ ನಿರ್ವಹಿಸಿದಾಗ ಅದೊಂದು ಬಹುದೊಡ್ಡ ಹೆಮ್ಮೆಯಾಗುತ್ತದೆ. ನೋವು ಮರೆತು ಇತರರ ಕಣ್ಣೀರು ಹೊರೆಸುವ ಮಹಾನ್ ಕಾರ್ಯದಲ್ಲಿ ತೊಡಗುವುದು ಬಹುದೊಡ್ಡ ಕೆಲಸ. ಅಂತಹ ಕೆಲಸಕ್ಕೆ ಮುಂದಾದ ಲಕ್ಷ್ಮೀಶ ಫೌಂಡೇಶನ್ ಸ್ಥಾಪಕರಾದ ಉಷಾ ನಾರಾಯಣ್ ಅವರನ್ನ ಚಕ್ರವರ್ತಿ ಸೂಲಿಬೆಲೆ ಅಭಿನಂದಿಸಿದರು.
ಆಹಾರ ತಜ್ಞೆ ಲೇಖಕಿ ಡಾ. ಹೆಚ್.ಎಸ್ ಪ್ರೇಮಾ ಮಾತನಾಡಿ, ಹೇಗೆ ಇಂಟರ್ ನೆಟ್ ಗಳನ್ನು ನೋಡಿ ಆಹಾರ ಕೊಳ್ಳುವವರು ಅರಿವಿಲ್ಲದೆ ನಮ್ಮದಲ್ಲದ ಆಹಾರ ಪದ್ಧತಿಗೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ಎಳೆ ಎಳೆಯಾಯಾಗಿ ಉದಹಾರಣೆ ಸಹಿತ ವಿವರಿಸಿದರು. ನಮ್ಮದು ಕೇವಲ ಹೊಟ್ಟೆ ತುಂಬಿಸುವ ವಿಧಾನವಲ್ಲ. ನಮ್ಮದು ಆಹಾರ ಸಂಸ್ಕೃತಿ ಎಂದು ಹೇಳುವ ಮೂಲಕ ದೇಶಿಯ ಆಹಾರದ ಮಹತ್ವವನ್ನು ಅರ್ಥ ಮಾಡಿಸಿದರು.
ನಟ ನಿರ್ದೇಶಕ ಎಂ.ಡಿ ಕೌಶಿಕ್ ಅವರು ಮ್ಯಾಜಿಕ್ ಮೂಲಕ ಮಂಕು ತಿಮ್ಮನ ಕಗ್ಗದ ಸಾರವನ್ನು ಪ್ರಸ್ತುತ ಪಡಿಸಿ, ನಮ್ಮ ಬದುಕು ಹೇಗಿರಬೇಕು ಎನ್ನುವುದನ್ನ ವಿವರಿಸಿದರು. ಆರಂಭದಲ್ಲಿ ಲಕ್ಷ್ಮೀಶ ಫೌಂಡೇಶನ್ ಒಂದು ವರ್ಷದ ಅವಧಿಯಲ್ಲಿ ಹಮ್ಮಿಕೊಂಡ ಶಿಕ್ಷಣಕ್ಕೆ ನೆರವು ಆಪ್ತ ಸಲಹೆ, ಬಟ್ಟೆ ಪಾತ್ರೆಗಳ ವಿತರಣೆ, ಕೊರೋನಾ ಕಾಲದಲ್ಲಿ ಆಹಾರದ ಕಿಟ್ ನೀಡಿಕೆ ಹೀಗೆ ಹಲವಾರು ಕಾರ್ಯಕ್ರಮಗಳ ಬಗೆಗೆ ಕಿರು ವಿವರ ನೀಡುವ ವಿವರ ಪ್ರದರ್ಶನ ಏರ್ಪಡಿಸಲಾಯಿತು. ಮೊದಲಿಗೆ ಲಕ್ಷ್ಮೀಶ ಫೌಂಡೇಶನ್ ನ ಕಾರ್ಯದರ್ಶಿ ಕೆ.ವಿ ಮೋಹನ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಫೌಂಡೇಶನ್ ಸ್ಥಾಪಕಿ ಉಷಾ ನಾರಾಯಣ್ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದರು.
ಕಲಾದೇಗುಲ ಶ್ರೀನಿವಾಸ್ ಅವರ ಅತ್ಯುತ್ತಮ ನಿರೂಪಣೆಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿತು.
Key words: dedicate- your life – service- enjoy – pleasure-chakravarthi sulibele