ಬೆಂಗಳೂರು,ಫೆಬ್ರವರಿ,19,2021(www.justkannada.in): ಜಲ್ಲಿ-ಕ್ರಷರ್ ಮಿಷನ್ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಸರಳೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಲಬುರಗಿ ಜಿಲ್ಲಾ ಸ್ಟೋನ್ ಕ್ರಷರನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಗಣಿ ಸಚಿವ ಮುರುಗೇಶ್ ನಿರಾಣಿಗೆ ಮನವಿ ಪತ್ರ ಸಲ್ಲಿಸಿತು.
ಶುಕ್ರವಾರ ವಿಕಾಸಸೌಧ ಸಚಿವರ ಕೊಠಡಿಯಲ್ಲಿ ಜೇವರ್ಗಿ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಅಜಯ್ಸಿಂಗ್ ನೇತೃತ್ವದ ನಿಯೋಗವು ಸಚಿವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದ ಕಾರಣ ಪಟ್ಟ ಭೂಮಿ ಇಲ್ಲದೆ ಕಲ್ಲು ಗಣಿಗಾರಿಕೆ ಮಾಡಲು ಪಹಣಿ ಪತ್ರಿಕೆ ಹಾಗೂ ಭೂ ನಕಾಶೆ ಆಧಾರದ ಮೇಲೆ ಮೊದಲಿನಂತೆ ಪರವಾನಗಿ ಕೊಡುವುದು, ಗಣಿಗಾರಿಕೆಯ ಶೇ.90ರಷ್ಟು ರಾಯಲ್ಟಿ ಹಣ ಸರ್ಕಾರದ ಬಿಲ್ನಲ್ಲಿ ಕಡಿತವಾಗಿದೆ. ಆದರೆ ಗಣಿ ಮತ್ತು ಜಲ್ಲಿ ಕಂಕರ್ ಮಿಷನ್ ಮಾಲೀಕರ ಹತ್ತಿರ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಳನ್ನು ಅಳೆದು ರಾಯಲ್ಟಿ ಹಣ ವಸೂಲಿ ಮಾಡಿದಾರೆ ಎಂದು ಸಭೆಯ ಗಮನಕ್ಕೆ ತಂದರು.
ಜಲ್ಲಿ ಕಂಕರ್ ಮಿಷನ್ ಮಾಲೀಕರಿಂದ ಸರಬರಾಜು ಮಾಡಿದ ರಾಯಲ್ಟಿಯನ್ನು ಅವರ ಬಿಲ್ನಲ್ಲಿ ಕಡಿತ ಮಾಡಿದರೂ ಮಾಲೀಕರ ಗಣಿಯನ್ನು ಡ್ರೋಣ್ ಕ್ಯಾಮೆರದ ಮೂಲಕ ಅಳೆಯಲು ರಾಯಲ್ಟಿ ಭರಿಸಲು ಅಧಿಕಾರಿಗಳು ನೋಟೀಸ್ ಹೊರಡಿಸಿದ್ದಾರೆ. ಸರ್ಕಾರಿ ಉದ್ದೇಶಿತ ಕಾಮಗಾರಿ ಅಥವಾ ಸ್ವಂತ ಕಟ್ಟಡಕ್ಕಾಗಿ ಉಪಯೋಗಿಸಿದರೆ ಮಾತ್ರ ರಾಯಲ್ಟಿ ಭರಿಸಬೇಕೆಂಬ ನಿಯವಿದೆ ಎಂದು ನಿಯೋಗವು ಸಚಿವರಿಗೆ ಮನವರಿಕೆ ಮಾಡಿತು.
ಗುತ್ತಿಗೆದಾರರ ಬಿಲ್ನಲ್ಲಿ ಕಡಿತವಾದ ರಾಯಲ್ಟಿ ಹಣವನ್ನು ಜಲ್ಲಿ ಕಂಕರ್ ಸರಬರಾಜು ಮಾಡಿದ ಮಿಷನ್ ಮಾಲೀಕರ ರಾಯಲ್ಟಿ ಎಂದು ಪರಿಗಣಿಸುವುದು, ಜಲ್ಲಿಕಂಕರ ಅತಿ ಉಪಯುಕ್ತ ವಸ್ತು ಆಗಿರುವುದರಿಂದ ಅವಶ್ಯ ಸರಬರಾಜು ವಸ್ತು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.
ರಾಯಲ್ಟಿ ಭರಿಸಿದ ಹಣಕ್ಕಿಂತ ಹೆಚ್ಚಿಗೆ ಗಣಿಗಾರಿಕೆ ಮಾಡಿದರೂ ದಂಡವಿಲ್ಲದೆ ರಾಯಲ್ಟಿ ಹಣ ಭರಿಸಿಕೊಳ್ಳುವುದು, ಗಣಿ ಮಾಲೀಕರು ಹೆಚ್ಚು ರಾಯಲ್ಟಿ ಹಣ ಕಟ್ಟಿ ಕಡಿಮೆ ಗಣಿಗಾರಿಕೆ ಮಾಡಿದರೆ ಆ ರಾಯಲ್ಟಿ ಹಣವನ್ನು ಮುಂದಿನ ಲೆಕ್ಕ ಪರಿಶೋಧನೆ ಮಾಡುವಾಗ ದಂಡವಿಲ್ಲದೆ ಸರಿಪಡಿಸಿಕೊಳ್ಳಬೇಕೆಂದರು.
ಪಟ್ಟ ಭೂಮಿಗೆ ಡಿಎಂಎಫ್ ಹಣವನ್ನು ತೆಗೆದುಕೊಳ್ಳದಿರುವುದು, ಪಟ್ಟ ಭೂಮಿಗೆ ಎಟಿಟಿ ರದ್ದುಪಡಿಸುವುದು, ಐದು ಪಟ್ಟು ದಂಡ ಶುಲ್ಕ ರದ್ದು ಹಾಗೂ ಹೊರರಾಜ್ಯದಿಂದ ಸರಬರಾಜಾಗುವ ಜಲ್ಲಿ ಕಂಕರವನ್ನು ತಕ್ಷಣದಿಂದಲೇ ತಡೆ ಹಿಡಿಯಬೇಕೆಂದು ನಿಯೋಗವೂ ಒತ್ತಾಯ ಮಾಡಿತು.
ನಿಯೋಗದ ಬೇಡಿಕೆಗಳನ್ನು ಆಲಿಸಿದ ಸಚಿವ ನಿರಾಣಿ, ಈ ಸಂಬಂಧ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.
ನಿಯೋಗದಲ್ಲಿ ಗುಲ್ಬರ್ಗ ಜಿಲ್ಲಾ ಸ್ಟೋನ್ ಕ್ರಷರನ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠರಾವ್ .ಎಸ್. ಮುಳಗಿ, ಉಪಾಧ್ಯಕ್ಷ ಪ್ರಭುದೇವ್.ಎಸ್ ಕಲ್ಬುರ್ಗಿ, ಪ್ರಧಾನ ಕಾರ್ಯದರ್ಶಿ ಆರ್.ಜಿ.ಪಾಟೀಲ್, ಕಾರ್ಯದರ್ಶಿ ಮನೋಹರ್.ಜಿ ಗುತ್ತೇದಾರ, ಖಜಾಂಚಿ ಶಿವಯ್ಯ.ಬಿ ಗುತ್ತೇದಾರ್, ಜಂಟಿ ಕಾರ್ಯದರ್ಶಿ ಅಬ್ದುಲ್ ಶುಕಲ್ ಸಾಬ್ ಮಾಮು ಮತ್ತಿತರರು ಉಪಸ್ಥಿತರಿದ್ದರು.
Key words: delegation – met -Minister -Murugesh Nirani -appealed – simplification – mining