ಬೆಂಗಳೂರು, ಜುಲೈ 13, 2022 (www.justkannada.in): ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬ್ರಿಟಿಷರಿಂದ ಮುಕ್ತಗೊಂಡು ೭೫ ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಭಾರತದ ೭೫ನೇ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಪ್ರಾಧಿಕಾರಗಳು, ದೇಶಕ್ಕಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದಂತ ಸ್ವತಂತ್ರ ಹೋರಾಟಗಾರರ ಸ್ಮರಣಾರ್ಥವಾಗಿ ಅಲ್ಲಲ್ಲಿ ಸ್ಥಾಪಿಸಿರುವ ಸ್ಮಾರಕಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.
ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಬಳಿ, ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಒಂದು ಸ್ಮಾರಕದ ಕುರಿತು ಅನೇಕರಿಗೆ ಗೊತ್ತಿಲ್ಲ. ಕ್ವಿಟ್ ಇಂಡಿಯಾ ಮೂವ್ಮೆಂಟ್ (ಬ್ರಿಟಿಷರೇ ದೇಶ ಬಿಟ್ಟು ತೊಲಗಿ) ಸಂದರ್ಭದಲ್ಲಿ ನಾಲ್ವರು ವಿದ್ಯಾರ್ಥಿಗಳು ಪೋಲಿಸರ ಗುಂಡೇಟಿನಿಂದ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಈ ನಾಲ್ವರು ವಿದ್ಯಾರ್ಥಿಗಳ ಸ್ಮರಣಾರ್ಥಕವಾಗಿ ಒಂದು ಸ್ಮಾರಕವನ್ನು ಸ್ಥಾಪಿಸಲಾಯಿತು. ಅದು ಈಗ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಶನಿದೇವರ ದೇವಾಲಯದ ಮುಂಭಾಗದಲ್ಲಿದೆ. ಈ ಸ್ಥಳದ ಸುತ್ತಮುತ್ತಲಿನಲ್ಲಿ ಹಲವು ಶೈಕ್ಷಣಿಕ ಸಂಸ್ಥೆಗಳಿವೆಯಾದರೂ ಸಹ ಬಹುಪಾಲು ವಿದ್ಯಾರ್ಥಿಗಳಿಗೆ, ಅಲ್ಲಿ ೧೯೭೨ರಲ್ಲಿ ಅಂದಿನ ಬೆಂಗಳೂರು ನಗರ ಪಾಲಿಕೆ ನಿರ್ಮಿಸಿರುವ ಸ್ಮಾರಕದ ಕುರಿತು ಅರಿವೇ ಇಲ್ಲ.
“ನಾವು ಆಗಸ್ಟ್ ೯ರಂದು ಕ್ವಿಟ್ ಇಂಡಿಯಾ ಮೂವ್ ಮೆಂಟ್ ಅನ್ನು ಆಚರಿಸಲಿದ್ದೇವೆ. ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಪ್ರಾಣತ್ಯಾಗ ಮಾಡಿದಂತಹ ವಿದ್ಯಾರ್ಥಿಗಳ ಸ್ಮರಣಾರ್ಥಕವಾಗಿ ದೇವಾಲಯದ ಆವರಣದಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ದುರಾದೃಷ್ಟಕರವೇ ಸರಿ. ನಾನು ದೇವಸ್ಥಾನದ ವಿರೋಧಿಯಲ್ಲ. ಆದರೆ ಸಂಬಂಧಪಟ್ಟ ಪ್ರಾಧಿಕಾರಗಳು ಈ ಸ್ಮಾರಕವನ್ನು ಜನರು ಸುಲಭವಾಗಿ ತಲುಪುವಂತೆ ಮಾಡಬೇಕೆಂಬುದು ನನ್ನ ಆಗ್ರಹ,” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಹೆಚ್.ಎಂ. ಇವರು ಮಾನ್ಯ ಮುಖ್ಯಮಂತ್ರಿಗಳು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಇತರೆ ಅಧಿಕಾರಿಗಳಿಗೆ ಈ ಸ್ಮಾರಕದ ಕುರಿತು ಅರಿವು ಮೂಡಿಸುವುದ ಹಾಗೂ ಅಭಿವೃದ್ಧಿಯ ಸಂಬಂಧ ಹಲವು ಬಾರಿ ಪತ್ರಗಳನ್ನೂ ಕಳುಹಿಸಿದ್ದಾರೆ.
ಶಾಮಣ್ಣ, ಗುಂಡಪ್ಪ, ಪ್ರಹ್ಲಾದ್ ಶೆಟ್ಟಿ ಹಾಗೂ ಜಿ.ವಿ. ತಿರುಮಲಯ್ಯ ಎಂಬ ಹೆಸರಿನ ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಕ್ವಿಟ್ ಇಂಡಿಯಾ ಮೂವೆಮೆಂಟ್ ಸಮಯದಲ್ಲಿ ಪೋಲಿಸರ ಗುಂಡೇಟಿನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಅವರ ಸ್ಮರಣಾರ್ಥಕವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕ ಎಲ್ಲರಿಗೂ ಕಾಣಲು ಸ್ಮಾರಕ ಇರುವ ಜಾಗದಲ್ಲಿ ಹುತಾತ್ಮರ ಗೋಪುರ ನಿರ್ಮಾಣ ಮಾಡಬೇಕು ಎನ್ನುವುದು, ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ವಿ.ಪಿ. ಅವರ ಅಭಿಪ್ರಾಯವಾಗಿದೆ.
“ಸ್ಮಾರಕ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳಿವೆ. ವಿದ್ಯಾರ್ಥಿಗಳಿಗೆ ನಮ್ಮ ಪೂರ್ವಜರ ಬಲಿದಾನದ ಕುರಿತು ತಿಳಿಯಬೇಕು, ಕ್ವಿಟ್ ಇಂಡಿಯಾ ಸಮಯದಲ್ಲಿ ಪ್ರಾಣತ್ಯಾಗ ಮಾಡಿದಂತ ವಿದ್ಯಾರ್ಥಿಗಳ ಕುರಿತು ಈಗಿನ ವಿದ್ಯಾರ್ಥಿಗಳಿಗೂ ಅರಿವಾಗಬೇಕು,” ಎನ್ನುವುದು ನನ್ನ ಅನಿಸಿಕೆ ಎಂದರು.
ಸ್ಮಾರಕಕ್ಕೆ ಹುತಾತ್ಮರ ಗೋಪುರ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಹಾಗೂ ಬಹುಮುಖ್ಯವಾಗಿ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ಲಭಿಸುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಪ್ರತಿ ನಿತ್ಯ ಈ ದೇವಾಲಯದ ಮುಂಭಾಗದಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಆದರೆ ಯಾರೂ ಸಹ ಈ ಸ್ಮಾರಕವನ್ನು ಗಮನಿಸುವುದಿಲ್ಲ. “ನಾನು ಓರ್ವ ವಕೀಲ. ಪ್ರತಿ ನಿತ್ಯ ನ್ಯಾಯಾಲಯಕ್ಕೆ ಈ ಕಡೆಯಿಂದಲೇ ಓಡಾಡುತ್ತೇನೆ. ಕಳೆದ ನಾಲ್ಕು ವರ್ಷಗಳಿಂದಲೂ ನಾನು ಇಲ್ಲೇ ಓಡಾಡುತ್ತಿದ್ದೇನೆ. ಆದರೆ ಈ ಸ್ಮಾರಕ ಇರುವ ಕುರಿತು ನನಗೆ ಮಾಹಿತಿಯೇ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಾರಕ ಎಲ್ಲರಿಗೂ ಕಣುವ ರೀತಿ ಗ್ರಿಲ್ ಗಳನ್ನು ತೆಗೆಯುವುದು ಅಥವಾ ದಿನಪೂರ್ತಿ ಗೇಟ್ ಗಳನ್ನು ತೆಗೆದಿಡುವಂತಹ ಯಾವುದಾದರೂ ಕ್ರಮ ಕೈಗೊಳ್ಳುವುದು ಒಳಿತು,” ಎನ್ನುವುದು ವಕೀಲ ಆರಿಫ್ ಅವರ ಅಭಿಪ್ರಾಯವಾಗಿದೆ.
ಈ ಕುರಿತು ಮಾತನಾಡಿದ ಶನಿದೇವಾಲಯದ ಅರ್ಚಕ ಗಣೇಶ್ ಆರ್. ಅವರು ಸ್ಮಾರಕವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ. “ನಾವು ಈ ಸ್ಮಾರಕದ ಬಳಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನಾಚರಣೆ ಮತ್ತು ಗಾಂಧಿ ಜಯಂತಿ ದಿನಾಚರಣೆಗಳಂದು ಸಮಾರಂಭಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಸ್ಮಾರಕವನ್ನು ಸಂರಕ್ಷಿಸಲು ಸುತ್ತಲೂ ಒಂದು ಗ್ರಿಲ್ ಅಳವಡಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ ೮.೦೦ ಗಂಟೆಯಿಂದ ಮಧ್ಯಾಹ್ನ ೧೨.೦೦ ಗಂಟೆಯವರೆಗೆ ಸಾರ್ವಜನಿಕರಿಗೆ ಭೇಟಿ ನೀಡಲು ಅವಕಾಶವನ್ನೂ ಸಹ ಕಲ್ಪಿಸಲಾಗಿದೆ,” ಎಂದು ವಿವರಿಸಿದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Demand – develop-memorial site -near -Majestic – Bangalore.