ಮೈಸೂರು,ಮಾರ್ಚ್,14,2022(www.justkannada.in): ರೈತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 19,20 ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ರೈತ ಪರಿಷತ್ ನಡೆಸಲು ರೈತ ಸಂಘಟನೆಗಳು ತೀರ್ಮಾನ ಮಾಡಿವೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಕಬ್ಬು ಬೇಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ರೈತ ಮುಖಂಡರು ಪರಿಷತ್ ನಲ್ಲಿ ಭಾಗಿಯಾಗಲಿದ್ದಾರೆ. ಕೃಷಿ ಕಾಯ್ದೆ ಹಿಂಪಡೆಯುವುದು, ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ರಸಗೊಬ್ಬರ, ಭಿತ್ತನೆ ಬೀಜದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರೈತರ ಮೇಲೆ ಹೊರೆ ಹೆಚ್ಚಾಗುತ್ತಿದೆ. ರೈತರ ಸಮಸ್ಯೆ ಬಗೆಹರಿಸುವಲ್ಲಿ ಇವರು ಚಿಂತನೆ ಮಾಡಿಲ್ಲ. ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ದುಂಡು ಮೇಜಿನ ರೈತ ಪರಿಷತ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅವರಿಗೆ ಮಾನ ಮರ್ಯಾದೆ ಇಲ್ಲ: ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಸಂಬಳ ಹೆಚ್ಚು ಮಾಡಿಕೊಂಡಿದ್ದಾರೆ.
ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಸಂಬಳ ಹೆಚ್ಚು ಮಾಡಿಕೊಂಡ ರಾಜಕಾರಣಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ಕುರುಬೂರು ಶಾಂತಕುಮಾರ್, ರಾಜ್ಯದ ರಾಜಕೀಯ ನಾಯಕರಿಗೆ ರೈತರ ಮೇಲೆ ಕಾಳಜಿ ಇಲ್ಲ. ಗಂಭೀರ ಸಮಸ್ಯೆ ಚರ್ಚೆ ಮಾಡುವುದನ್ನ ಬಿಟ್ಟು ತಮ್ಮ ಸಂಬಳ ಹೆಚ್ಚು ಮಾಡಿಕೊಂಡಿದ್ದಾರೆ. ವಿರೋಧ ಪಕ್ಷಗಳು ಈ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇವರು ತಮ್ಮ ಸಂಬಳ ಹೆಚ್ಚು ಮಾಡಿಕೊಂಡಿದ್ದಾರೆ. ಅವರ ಸ್ವ ಹಿತಾಸಕ್ತಿ ಮುಖ್ಯವಾಗಿದೆ. ಅವರಿಗೆ ಮಾನ ಮರ್ಯಾದೆ ಇಲ್ಲ. ಜನಪರ ಚಿಂತನೆಗಳು ರಾಜಕೀಯ ನಾಯಕರುಗಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತ ಮುಖಂಡರ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ.
ಕೋಡಿಹಳ್ಳಿ ಚಂದ್ರಶೇಖರ್ ರೈತ ರಾಜಕೀಯ ಪಕ್ಷ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ರೈತ ಮುಖಂಡ ಅಂತ ಹೇಳಿಕೊಳ್ಳುವ ವ್ಯಕ್ತಿ ರೈತರ ಪರಚಿಂತನೆ ಮಾಡೋದು ಕಡಿಮೆ. ರೈತ ಹೋರಾಟಕ್ಕಿಂತ ರಾಜಕೀಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದೆ ಹೆಚ್ಚು. ರೈತ ಮುಖಂಡರ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈ ರೀತಿ ಚಿಂತನೆ ಮಾಡೋದಾದ್ರೆ ಒಂದು ರಾಜಕೀಯ ಪಕ್ಷ ಸೇರಿ ಜನ ಪ್ರತಿನಿಧಿಯಾಗಿ ಜನರ ಸೇವೆ ಮಾಡಲಿ ಎಂದು ಸಲಹೆ ನೀಡಿದರು.
ದೆಹಲಿಯಲ್ಲಿ ಸಂಯುಕ್ತ ಕಿಶಾನ್ ಮೋರ್ಚಾ ಒಂದು ವರ್ಷಗಳ ಕಾಲ ಹೋರಾಟ ಮಾಡಿತ್ತು. ಆದರೆ ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಕಿಶಾನ್ ಮೋರ್ಚಾ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಒಂದೂ ಸೀಟ್ ಬಾರದೆ ಹೀನಾಯ ಸೋಲಾಯಿತು. ರೈತರು, ರೈತರ ಚಿಂತನೆಗಳಿಗೆ ಜನ ಬೆಲೆ ಕೊಡುತ್ತಾರೆ. ಆದರೆ ರಾಜಕೀಯಕ್ಕೆ ಹೋದರೆ ಬೆಲೆ ಕೊಡೋದಿಲ್ಲ. ರೈತ ಹೋರಾಟಗಳೇ ಬೇರೆ, ರಾಜಕಾರಣವೇ ಬೇರೆ, ಜನಪರ ಚಿಂತನೆಗಳೆ ಬೇರೆ, ಇದ್ಯಾವುದು ಹೊಂದಾಣಿಕೆ ಆಗುವುದಿಲ್ಲ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
Key words: demand-farmer-kurubur shanthakumar