ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ- ಶಾಸಕ ಜಿ.ಟಿ.ದೇವೇಗೌಡ ಸೂಚನೆ

ಮೈಸೂರು,ಜುಲೈ,11,2024 (www.justkannada.in): ಡೆಂಗ್ಯೂ ನಿಯಂತ್ರಣಕ್ಕೆ ಜನಜಾಗೃತಿ ಹಾಗೂ ಸಾರ್ವಜನಿಕರ ಸಹಭಾಗಿತ್ವ ಬಹು ಮುಖ್ಯ. ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.

ಮೈಸೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಶಾಸಕ ಜಿಟಿ ದೇವೇಗೌಡರು  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾ ಪಂ ಅಧಿಕಾರಿಗಳ ಸಭೆ ನಡೆಸಿದರು. ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಾಗಿದೆ. ಡೆಂಗ್ಯು ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು, ಮನೆಯ ಸುತ್ತಮುತ್ತ ನೀರು ನಿಲ್ಲದೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಶಾಸಕ ಜಿ.ಟಿ ದೇವೇಗೌಡ ತಿಳಿಸಿದರು.

ರಸ್ತೆ ಬದಿಯಲ್ಲಿ ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು, ಕಸವನ್ನು ಪ್ರತಿ ಮನೆಗಳಿಂದ ಸಂಗ್ರಹಿಸುವ ಕೆಲಸವಾಗಬೇಕು ಎಂದರು. ಯಾವುದೇ ಜ್ವರ ಅಥವಾ ಡೆಂಗ್ಯೂ ಪಾಸಿಟಿವ್ ಕಂಡು ಬಂದರೆ ಸ್ವಯಂ ಪ್ರೇರಿತವಾಗಿ ಚಿಕಿತ್ಸೆಯನ್ನು ಪಡೆಯದೆ, ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು.

ಸಾರ್ವಜನಿಕರು ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್, ಬಕೆಟ್‌ ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ, ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಡನೆ ಸೇರಿ ಕ್ರಮ ಕೈಗೊಳ್ಳಬೇಕು ತಿಳಿಸಿದರು. ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನಂತರ ಶಾಸಕ ಜಿಟಿ ದೇವೇವೇಗೌಡ ಜಲಜೀವನ ಮಿಷನ್ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ದೊಡ್ಡಮಾರಗೌಡನಹಳ್ಳಿ, ಧನಗಳ್ಳಿ, ಇಲವಾಲ ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತ ಜೆ.ಜೆ.ಎಂ. ಅನುಷ್ಠಾನಗೊಂಡಿದ್ದು, ಪೂರ್ಣಪ್ರಮಾಣದಲ್ಲಿ ಕಾಮಗಾರಿಗಳು ಕೈಗೊಂಡಿಲ್ಲವೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಸಕರಿಗೆ ತಿಳಿಸಿದರು.

ನಂತರ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ,  ಸ್ಥಳದಲ್ಲಿಯೇ ಹಾಜರಿದ್ದ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಕ್ಷೇತ್ರದಲ್ಲಿ ಯಾವ ಯಾವ ಗ್ರಾಮದಲ್ಲಿ ಜೆ.ಜೆ.ಎಂ. ಕಾಮಗಾರಿಗಳು ಪೂರ್ಣಗೊಂಡಿಲ್ಲವೆಂಬ ವರದಿಯನ್ನು ನೀಡುವಂತೆ ಹಾಗೂ ಕ್ಷೇತ್ರದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿಯನ್ನು ವರದಿ ಮಾಡುವಂತೆ ಸೂಚಿಸಿದರು. ಹಾಗೂ ಉದ್ಬೂರು ಗ್ರಾಮದಲ್ಲಿ ಹೆಚ್ಚುವರಿಯಾಗಿ 2ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಟ್ಯಾಂಕ್ ನಿರ್ಮಾಣ ಮಾಡಲು ಕಲ್ಯಾಣಿ ನಗರ, ಪುಟ್ಟೇಗೌಡ ಬಡಾವಣೆ, ರವಿಶಂಕರ್ ಬಡಾವಣೆಗಳಲ್ಲಿ ಸ್ಥಳ ನೀಡುವಂತೆ ಮೂಡಾ ಆಯುಕ್ತರಿಗೆ ದೂರವಾಣಿ ಮೂಲಕ ತಿಳಿಸಿದರು.

ಸಭೆಯಲ್ಲಿ ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ಕಾರ್ಯನಿರ್ವಹಣಾಧಿಕಾರಿಗಳಾದ ಗಿರಿಧರ್, ತಾಲ್ಲೂಕು ಆರೋಗ್ಯಾಧಿಕಾರಿಯಾದ ಡಾ. ಪುಟ್ಟತಾಯಮ್ಮ, ಪ.ಪಂಚಾಯಿತಿ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಇಇ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.

Key words: dengue, control, MLA, GT Deve Gowda, meeting