ಬೆಂಗಳೂರು,ಮಾರ್ಚ್,20,2021(www.justkannada.in) : ಮಾನವೀಯತೆಯ ಸಾಕರಮೂರ್ತಿಗಳು ಮಹಿಳೆಯರು. ಹೆಣ್ಣು ಮಕ್ಕಳು ಕುಟುಂಬ ಹಾಗೂ ಸಮಾಜದ ಕಣ್ಣು. ಹೀಗಾಗಿ, ಬೆಂಗಳೂರಿನ ಸೂರ್ಯನಗರದಲ್ಲಿ 600ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು ಇಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ,ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸೆಂಟರ್ ಫಾರ್ ಆಡ್ವೋಕೆಸಿ ಮತ್ತು ರಿಸರ್ಚ್ ಸಿ.ಎಫ್.ಆರ್.ಐ ಮತ್ತು ಗೋವಿಂದರಾಜನಗರ ಮಂಡಲ ಮಹಿಳಾ ಮೋರ್ಚಾ ಸಹಯೋಗದಲ್ಲಿ ವತಿಯಿಂದ ಆಯೋಜಿಸಿದ್ದ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಹಾಗೂ ಪಡಿತರ ಚೀಟಿ ,ವೃದ್ದಾಪ್ಯ ವೇತನ ಪ್ರಮಾಣಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಸಿಗಬೇಕಾದ ಸವಲತ್ತು ಬಡವರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಗು ಹುಟ್ಟಿದರೆ ತಾತ್ಸರದಿಂದ ನೋಡುವ ಕಾಲ ಹೋಯಿತು. ಮಹಿಳೆಯರು ಪುರುಷರಷ್ಟೆ ಶಕ್ತಿವಂತರು ಎಂದು ರೂಪಿಸಿದ್ದಾರೆ. ಬಡತನ ರೇಖೆಯಿಂದ ಕೆಳಗೆ ಇರುವವರ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅವರ ವಿದ್ಯಾಭ್ಯಾಸಕ್ಕೆ ಹಣಕಾಸಿನ ಮುಗ್ಗಟ್ಟು ಬರಬಹುದು ಹತ್ತು ಹಲವು ಅತಂಕದಿಂದ ಕುಟುಂಬ ನಲುಗುತ್ತದೆ ಎಂದರು.
ಹೆಣ್ಣು ಮಗು ಹೆತ್ತ ತಾಯಿ, ತಂದೆಗೆ ಯಾವುದೇ ಹೊರೆಯಾಗದೇ ಮತ್ತು ಹೆಣ್ಣು ಶಿಶುಗಳ ಜನನ ಮತ್ತು ಪಾಲನೆಗೆ ಉತ್ತೇಜನ ನೀಡಲು ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರಮೋದಿರವರು ಬಡವರಿಗೆ ತಲುಪುವ ಸೌಲಭ್ಯಗಳು ತತ್ ಕ್ಷಣ ತಲುಪುವಂತೆ ಮಾಡಬೇಕು ಎಂಬ ಆಶಯ ಇಟ್ಟುಕೊಂಡಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರು ,ಇತರೆ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಿಂದ ಉಚಿತ ಬಸ್ ಪಾಸ್ ಸೌಲಭ್ಯ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯ ಯೋಜನೆಗಳು ಮತ್ತು ಸಾಲ, ವಸತಿ ಸೌಲಭ್ಯಗಳು ಸಿಗುತ್ತದೆ. ಹಲವಾರು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಕಾರ್ಮಿಕ ಆಯುಕ್ತ ನರಸಿಂಹಮೂರ್ತಿ ಉಪ ತಹಶೀಲ್ದಾರ್ ಕಲಾವತಿ, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಶೀಲಾ, ಮಾಜಿ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಶಾಂತಕುಮಾರಿ, ಮೋಹನ್ ಕುಮಾರ್, ರಾಮಪ್ಪ, ವಾಗೀಶ್, ದಾಸೇಗೌಡ ,ಜಯರತ್ನ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಮಹಿಳಾ ಮೋರ್ಚಾ ಅಧ್ಯಕ್ಷರಾದ ರತ್ನಂ ಭಾಗವಹಿಸಿದ್ದರು.
key words : Department-Housing-50%-Site-Reserve-Women-Minister V. Somanna