ಮೈಸೂರು,ಜುಲೈ,15,2022(www.justkannada.in): ಆಷಾಢಮಾಸದ ಮೂರನೇ ಶುಕ್ರವಾರ ಹಿನ್ನೆಲೆ, ಅಪಾರ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.
ನಾಡಿನ ಅಧಿದೇವತೆಗೆ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರುತ್ತಿದ್ದು, ತಾಯಿ ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಬೆಳಗಿನ ಜಾವ 3:30 ರಿಂದಲೇ ವಿಶೇಷ ಪೂಜಾ ಕೈಂಕರ್ಯ ಆರಂಭವಾಗಿದ್ದು, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಮಹಾಮಂಗಳಾರತಿ ನೆರವೇರಿತು.
ತಾಯಿ ಚಾಮುಂಡೇಶ್ವರಿ ದೇವಾಲಯ ವಿವಿಧ ಬಗೆಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಬೆಳಗಿನ ಜಾವ 5:30 ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಶಕ್ತಿ ದೇವತೆಯ ದರ್ಶನ ಪಡೆಯಲು ಮೂರನೇ ವಾರವೂ ಭಕ್ತಸಾಗರ ಹರಿದು ಬರುತ್ತಿದ್ದು, ಮೆಟ್ಟಿಲುಗಳ ಮೂಲಕ ಭಕ್ತರು ಚಾಮುಂಡಿ ಬೆಟ್ಟವನ್ನೇರಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಬೆಟ್ಟಕ್ಕೆ ತೆರಳಲು ನೀಡಿದ್ದ ಪಾಸ್ ರದ್ದು ಮಾಡಲಾಗಿದೆ. ಪಾಸ್ ಗಳಿಂದಾಗಿ ಬೆಟ್ಟದಲ್ಲಿ ಖಾಸಗಿ ವಾಹನಗಳು ಓಡಾಡುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗಿತ್ತು. ಭಕ್ತರಿಗೆ ದೇವಿಯ ದರ್ಶನಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಚಾಮುಂಡಿ ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಪಾಸ್ ರದ್ದು ಮಾಡಲಾಗಿದೆ.
Key words: Devotees – Chamundi Hill -3rd Ashada- Friday