ಬೆಂಗಳೂರು, ನವೆಂಬರ್ 30, 2022(www.justkannada.in): ರಾಜ್ಯದ ಅತ್ಯಂತ ಹಳೆಯ ಉದ್ಯೋಗದಾತರ ಸಂಘವಾದ ಕರ್ನಾಟಕ ಎಂಪ್ಲಾರ್ಸ್ ಅಸೋಸಿಯೇಷನ್ (ಕೆಇಎ-ಕರ್ನಾಟಕ ಉದ್ಯೋಗದಾತರ ಸಂಘ)ನ ವಜ್ರ ಮಹೋತ್ಸವ ಸಮಾರಂಭ ಮಂಗಳವಾರದಂದು ನಡೆಯಿತು.
ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಿಪ್ರೋ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ನ ಅಧ್ಯಕ್ಷರಾಗಿರುವ ಪದ್ಮವಿಭೂಷಣ ಶ್ರೀ ಅಜೀಂ ಪ್ರೇಮ್ ಜಿ ಅವರನ್ನು ಅವರ ಅತ್ಯುನ್ನತ ಸಾಧನೆಗಳು ಹಾಗೂ ಕರ್ನಾಟಕದ ಆರ್ಥಿಕತೆಗೆ ಅವರು ನೀಡಿರುವ ಕೊಡುಗೆಗಳನ್ನು ಗುರುತಿಸಿ ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕೆಇಎದ ವಜ್ರ ಮಹೋತ್ಸವ ಸಮಾರಂಭ ಹಾಗೂ ಅದರ ಕೊಡುಗೆಯ ಕುರಿತು ಮಾತನಾಡಿದ ಪ್ರೇಮ್ ಜೀ ಅವರು, “ಸಂಪತ್ತನ್ನು ಸೃಷ್ಟಿಸಿದಂತಹ ನಾನು ಹಾಗೂ ನನ್ನಂತಹವರು ಆ ಸಂಪತ್ತನ್ನು ಸಾಮಾಜಿಕ ಉದ್ದೇಶಗಳಿಗೆ ವ್ಯಯಿಸುವುದು ನಮ್ಮ ಕರ್ತವ್ಯ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಇಎ ಕುರಿತು ಮಾತನಾಡಿದ ಅವರು, “ಕೆಇಎನ ಮೂಲಭೂತ ಗುಣಲಕ್ಷಣಗಳು ಕಳೆದ ೬೦ ವರ್ಷಗಳ ಅಸ್ತಿತ್ವದಲ್ಲಿ ಅನೇಕ ಪರೀಕ್ಷೆಗಳಿಗೆ ಒಳಪಟ್ಟು ಯಶಸ್ವಿಯಾಗಿದೆ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆಯುತ್ತಾ, ತನ್ನ ಕೆಲಸಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪಣತೊಟ್ಟು ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ,” ಎಂದರು.
ಆರೋಗ್ಯಕರ ಕೆಲಸದ ಸ್ಥಳದ ಕುರಿತು ಮೂರು ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ ಪ್ರೇಮ್ ಜಿ ಅವರು, ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ತಮ್ಮ ಪಾಲುದಾರರನ್ನಾಗಿ ಕಾಣುವಂತಹ ಸಂಸ್ಕೃತಿ ಹಾಗೂ ವ್ಯವಸ್ಥೆಯನ್ನು ನಿರ್ಮಿಸುವುದರಿಂದ ಹಿಡಿದು, ಅಲ್ಪಾವಧಿ ಹಾಗೂ ಗಿಗ್ ಆರ್ಥಿಕತೆ ಒಳಗೊಂಡಂತೆ ಪರಿಸರ ಹಾಗೂ ಮಾನವ ಸಂಪನ್ಮೂಲದಲ್ಲಿ ಆಗುತ್ತಿರುವ ಸಾಮಾಜಿಕ, ಬದಲಾವಣೆಗಳ ಕುರಿತು ಮಾತನಾಡಿದರು. ಈ ಎಲ್ಲಾ ಬದಲಾವಣೆಗಳ ಅಗತ್ಯವನ್ನು ತಿಳಿಸಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
“ಇಂತಹ ಪಾಲುದಾರಿಕೆಯ ಚೈತನ್ಯ ನಾವು ಎದುರಿಸುತ್ತಿರುವ ಜಾಗತಿಕ ಬದಲಾವಣೆಗಳ ಸಂದರ್ಭದಲ್ಲಿ ಬಹಳ ತುರ್ತು ಅಗತ್ಯವಾಗಿದ್ದು, ಈ ಸಂಬಂಧ ನಿರಂತರವಾಗಿ ಮಾತುಕತೆ ಆಡುವ ಮೂಲಕ ಸಾಧ್ಯವಾಗುತ್ತದೆ, ಎಂದರು. ಸಿಂಗಪೂರ್ ನ್ಯಾಷನಲ್ ಎಂಪ್ಲಾರ್ಸ್ ಫೆಡರೇಷನ್ ಗೆ ಸಮಾನವಾಗಿ ನಿಲ್ಲುವುದೂ ಒಳಗೊಂಡಂತೆ ಹೊಸ ತಲೆಮಾರಿನ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವ ಕೆಇಎದ ಉಪಕ್ರಮಗಳನ್ನು ತಿಳಿದು ಹರ್ಷವಾಗಿದೆ,” ಎಂದರು.
ಕೆಇಎ ಪಾಲಿಗೆ ಈ ಆಚರಣೆ ಕೆಇಎ ೨.೦ನ ಹೊಸ ಪಯಣದ ಆರಂಭದಂತಾಗಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಿದ್ಧಗೊಂಡಂತಿದೆ ಹಾಗೂ ಕರ್ನಾಟಕದಲ್ಲಿ ಉದ್ಯೋಗದಾತರ ಧ್ವನಿಯಾಗಿ ಮುನ್ನಡೆಸುವ ನಿಟ್ಟಿನಲ್ಲಿ ಸಿದ್ಧವಾಗಿದೆ.
“ಕೆಇಎ ಆವೃತ್ತಿ ೨.೦ ರೆಲೆವೆನ್ಸ್ (ಪೂರಕತೆ), ರೀಚ್ (ತಲುಪುವಿಕೆ) ಹಾಗೂ ರೈಸ್ (ಹೊರಹೊಮ್ಮುವಿಕೆ) ಈ ಮೂರು ಆರ್ ಗಳ ಕಡೆ ಗಮನ ಹರಿಸಲಿದೆ. ಸವಾಲಿನ ಅಂಶಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸೂಕ್ತವಾದ ಪರಿಹಾರಗಳನ್ನು ಒದಗಿಸಲು ಕ್ರಮಬದ್ಧವಾಗಿ ಮಾತುಕತೆಗಳು, ಚರ್ಚೆಗಳನ್ನು ನಡೆಸುವ ಮೂಲಕ ತನ್ನ ಎಲ್ಲಾ ಸದಸ್ಯರಿಗೆ ಕೆಇಎ ತನ್ನ ಪೂರಕತೆಯನ್ನು ಹೆಚ್ಚಿಸಿಕೊಳ್ಳಲಿದೆ. ಕೆಇಎ, ಕ್ಷೇತ್ರದಲ್ಲಿ ಒಂದು ವೇಗವರ್ಧಕದಂತಿದ್ದು, ನೀತಿ ಬದಲಾವಣೆಗಳ ಅನುಷ್ಠಾನಕ್ಕೆ ಪ್ರಭಾವ ಬೀರುವುದನ್ನು ಮುಂದುವರೆಸಲಿದೆ,” ಎಂದು ಕೆಇಎದ ಉಪಾಧ್ಯಕ್ಷರು ಹಾಗೂ ಗೌರವ ಸಿಓಓ ಆದ ಪೂಜಾ ಪ್ರಭಾಕರ್ ಅವರು ತಿಳಿಸಿದರು.
“ಬದಲಾವಣೆಯನ್ನು ಸಾಧ್ಯಗೊಳಿಸುವ ಸಂಸ್ಥೆಯಾಗಿ ಕೆಇಎನ ಮುಂದಿನ ಹಂತದ ಕಾರ್ಯಾಚರಣೆಗಳು ಐಟಿ, ತಯಾರಿಕೆ, ಸೇವಾ ಕ್ಷೇತ್ರ, ನವೋದ್ಯಮಗಳು ಹಾಗೂ ಗಿಗ್ ಆರ್ಥಿಕತೆ ಕ್ಷೇತ್ರಗಳಲ್ಲಿ ಇರುತ್ತದೆ ಹಾಗೂ ಉದ್ಯೋಗದಾತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿದೆ,” ಎಂದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Diamond- Jubilee- Celebration – KEA- Azim Prem Ji.