ಬೆಂಗಳೂರು, ಸೆಪ್ಟೆಂಬರ್ 17, 2022 (www.justkannada.in): ಆಸ್ಟ್ರೇಲಿಯಾದ ರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ ಕ್ವಾಂಟಸ್, ಬೆಂಗಳೂರು-ಸಿಡ್ನಿ ಮಾರ್ಗದಲ್ಲಿ ಹೊಸ ವಿಮಾನ ಹಾರಾಟ ಸೇವೆಗೆ ಚಾಲನೆ ನೀಡುವ ಮೂಲಕ ದಕ್ಷಿಣ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊಟ್ಟ ಮೊದಲ ನೇರ ವಿಮಾನ ಹಾರಾಟ ಸಂಪರ್ಕವನ್ನು ಆರಂಭಿಸಿದೆ.
ಈ ಮಾರ್ಗದಲ್ಲಿ ಪ್ರಯಾಣಿಕರ ಬಹಳ ಹೆಚ್ಚಿನ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ, ಈ ವಿಮಾನ ಹಾರಾಟ ಸೇವೆಯ ಕುರಿತು ಈ ವರ್ಷದ ಆರಂಭದಲ್ಲಿ ಘೋಷಿಸಲಾಗಿತ್ತು.
ಬೆಂಗಳೂರು-ಸಿಡ್ನಿ ನಡುವಿನ ಮೊಟ್ಟ ಮೊದಲ ವಿಮಾನ ಹಾರಾಟದ ಎರಡೂ ಮಾರ್ಗಗಳ ಎಲ್ಲಾ ಟಿಕೆಟ್ ಗಳು ಮಾರಾಟವಾಗಿರುವುದಾಗಿ ಕ್ವಾಂಟಸ್ ಹೇಳಿಕೆಯಲ್ಲಿ ತಿಳಿಸಿತು. ಕ್ವಾಂಟಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಡ್ನಿಗೆ ವಾರದಲ್ಲಿ ನಾಲ್ಕು ಅಂದರೆ, ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಎ೩೩೦ ವಿಮಾನ ಹಾರಾಟ ಸೇವೆಯನ್ನು ನಡೆಸಲಿದೆ.
ಈ ಕ್ಯೂಎಫ್ ೬೮ ಎರಡೂ ನಗರಗಳ ನಡುವಿನ ಹಾಲಿ ಅತೀ ವೇಗದ ಪ್ರಯಾಣ ಸಮಯವನ್ನು ಮೂರು ತಾಸುಗಳವರೆಗೆ ಕಡಿತಗೊಳಿಸಲಿದೆ. ಜೊತೆಗೆ ಈ ಹೊಸ ಸೇವೆಗಳು ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ಪ್ರವಾಸೋದ್ಯಮ ಮತ್ತು ಆರ್ಥಿಕ ಸಂಬಂಧಗಳನ್ನು ವೃದ್ಧಿಸಲಿವೆ ಎಂದು ಕ್ವಾಂಟಸ್ ನ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಸಿಇಒ ಆಂಡ್ರ್ಯೂ ಡೇವಿಡ್ ತಿಳಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯತಾಂತ್ರಿಕ ಹಾಗೂ ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಇದು ದಕ್ಷಿಣ ಹಾಗೂ ಮಧ್ಯ ಭಾಗದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊಟ್ಟ ಮೊದಲ ನಾನ್-ಸ್ಟಾಪ್ ವಿಮಾನ ಸೇವೆ ಎಂದು ಅಭಿಪ್ರಾಯಪಟ್ಟರು.
ಈ ಹೊಸ ಸೇವೆಯು, ಪ್ರವಾಸಿಗರು, ಕಾರ್ಪೊರೇಟ್ ಗಳು, ಕ್ರೀಡಾ ಉತ್ಸಾಹಿಗಳು ಹಾಗೂ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಮತ್ತು ಪೆಸಿಫಿಕ್ ದ್ವೀಪಗಳು ಒಳಗೊಂಡಂತೆ ಅಲ್ಲಿಂದ ಆಚೆಗಿನ ಸ್ಥಳಗಳಿಗೆ ಹೋಗುವವರಿಗೆ ಸುಲಭವಾಗಲಿದೆ ಎಂದರು.
ಬುಧವಾರದಂದು ಬೆಂಗಳೂರು-ಸಿಡ್ನಿ ನಡುವಿನ ಹೊಸ ವಿಮಾನ ಹಾರಾಟ ಸೇವೆಗಳನ್ನು ಉದ್ಘಾಟಿಸಲಾಯಿತು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Direct -Qantas flight – Bangalore – Sydney -begins.