ಬೆಂಗಳೂರು,ಜೂ,30,2020(www.justkannada.in): ಸಹಕಾರ ಕ್ಷೇತ್ರ ಎಂಬುದು ಪರಸ್ಪರ ವಿಶ್ವಾಸದ ಮೇಲೆ ನಡೆಯುವುದಾಗಿದೆ. ಇಲ್ಲಿ ಅಸಹಕಾರ ಇರಬಾರದು. ಸಂಸ್ಥೆ ಇದ್ದರೆ ನಾವು ಅನ್ನುವುದನ್ನು ತಿಳಿದುಕೊಂಡಿರಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಮಹಾಮಂಡಳಿ ಎಂದರೆ ಜಿ.ಪಿ.ಪಾಟೀಲ್, ಹೌಸಿಂಗ್ ಫೆಡರೇಷನ್ ಎಂದರೆ ನಾನು ಎಂಬ ನಿಟ್ಟಿನಲ್ಲಿ 25-30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ. ಈಗ ನನಗೆ ಸಹಕಾರ ಕ್ಷೇತ್ರದಲ್ಲಿ ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ಒಳ್ಳೆಯ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಆರ್ ಬಿ ಐ ವ್ಯಾಪ್ತಿಗೆ ಸಹಕಾರ ಬ್ಯಾಂಕ್ ; ಉತ್ತಮ ಕ್ರಮ
ಸಹಕಾರ ವಲಯದ ಎಲ್ಲ ಬ್ಯಾಂಕ್ ಗಳನ್ನು ಆರ್ ಬಿ ಐ ಅಡಿ ತಂದಿರುವ ಕೇಂದ್ರದ ಕ್ರಮ ಒಳ್ಳೆಯದಾಗಿದೆ. ಇದರಿಂದ ಯಾವುದೇ ಅಕ್ರಮಗಳು ನಡೆಯುವುದಿಲ್ಲ. ಮೊದಲಿನಿಂದಲೂ ಆರ್ ಬಿ ಐ ವ್ಯಾಪ್ತಿಗೆ ಒಳಪಟ್ಟಿದ್ದರೂ ಈಗ ಆಡಿಟ್ ಸೇರಿದಂತೆ ಎಲ್ಲವೂ ಅದರ ಅಡಿಯಲ್ಲೇ ಆಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ನೋವು ಕೊಟ್ಟರೂ ಪಾರದರ್ಶಕವಾಗಿದ್ದೆ
ಎಲ್ಲರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಮುಂದೂ ಸಹ ಇದನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ. ಅಧಿಕಾರಿಗಳು ಸಹ ಅಂದು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ನನಗೆ ಸಹಕಾರ ವಲಯದಲ್ಲಿ ಹಲವಾರು ರೀತಿಯ ತನಿಖೆಯನ್ನು ಮಾಡಿಸುವ ಮೂಲಕ ಮಾನಸಿಕ ಹಿಂಸೆ ಮಾಡಿದರು. ಆದರೆ, ನಾವು ಪಾರದರ್ಶಕವಾಗಿದ್ದರಿಂದ ಏನೂ ಮಾಡಲಾಗಲಿಲ್ಲ. ಈ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಅಧಿಕಾರಿ ವರ್ಗದವರು ಎಂದು ಸಚಿವ ಎಸ್ ಟಿಎಸ್ ಸ್ಮರಿಸಿದರು.
ಸಹಕಾರ ಇಲಾಖೆಯಿಂದ 53 ಕೋಟಿ ರೂ.
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ 25 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಬಹುದೇ ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡಾಗ ಅವರು ಖುಷಿಯಿಂದ ಒಪ್ಪಿಗೆ ಸೂಚಿಸಿದರು. ಇದರ ಮೊದಲ ಭಾಗವಾಗಿ 23 ಕೋಟಿ ರೂ.ವನ್ನು ಕೊಟ್ಟಿದ್ದೇನೆ. ಬಳಿಕ ಸಹಕಾರ ಇಲಾಖೆಯಿಂದ ಒಟ್ಟಾರೆಯಾಗಿ 53 ಕೋಟಿ ರೂಪಾಯಿಯನ್ನು ಸಂಗ್ರಹಿಸಿಕೊಟ್ಟಂತಾಗಿದೆ. ಇದೇ ರೀತಿ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ ತಗುಲುವ 12.75 ಕೋಟಿ ರೂಪಾಯಿಯನ್ನೂ ಸಹ ಇಲಾಖೆ ವತಿಯಿಂದ ಭರಿಸಲಾಗಿದೆ ಎಂದು ಸಚಿವ ಎಸ್ .ಟಿ ಸೋಮಶೇಖರ್ ತಿಳಿಸಿದರು.
ಸೋಮಶೇಖರ್ ಅವಕಾಶ ಸೃಷ್ಟಿಸಿಕೊಳ್ಳುವ ಬುದ್ಧಿವಂತರು
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತದ ಅಧ್ಯಕ್ಷರಾದ ಜಿ.ಪಿ.ಪಾಟೀಲ ಮಾತನಾಡಿ, ಅವಕಾಶವನ್ನು ಉಪಯೋಗಿಸಿಕೊಳ್ಳುವವನು ಜಾಣ, ಅವಕಾಶವನ್ನು ಸೃಷ್ಟಿಸಿಕೊಳ್ಳುವವನು ಬುದ್ಧಿವಂತ. ಈ ಬುದ್ಧಿವಂತರ ಸಾಲಿನಲ್ಲಿ ಎಸ್.ಟಿ.ಸೋಮಶೇಖರ್ ಅವರು ಇದ್ದು, ಅವಕಾಶವನ್ನು ಸೃಷ್ಟಿಸಿಕೊಂಡು ಮಂತ್ರಿಯಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೆ.ಜೆ.ರಸ್ತೆಯ ಜನತಾ ಬಜಾರ್ ನಲ್ಲಿ ಕಾಂಪ್ಲೆಕ್ಸ್ ಮಾಡುವ ವಿಷಯ ಸಂಬಂಧ ಕೋರ್ಟ್ ನಲ್ಲಿ ವಿವಾದವಿದ್ದು, ಮಾತುಕತೆ ಮೂಲಕ ಬಗೆಹರಿಯಲಿದೆ. ಇದಕ್ಕೆ ಮಾನ್ಯ ಸಹಕಾರ ಸಚಿವರು ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಕೋವಿಡ್ ಸಂದರ್ಭದಲ್ಲೂ ಎಲ್ಲೆಡೆ ಭೇಟಿ
ಹೋರಾಟಗಳ ಮೂಲಕ ಮಂತ್ರಿತಾದವರು ಎಂದರೆ ಅದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಾಗಿದ್ದಾರೆ. ಇಡೀ ಸಹಕಾರ ಕ್ಷೇತ್ರದ ಎಲ್ಲ ಕಡೆ ಭೇಟಿ ಮಾಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಸಚಿವರು ವಿರಳ. ಆದರೆ, ಸೋಮಶೇಖರ್ ಅವರು ಹುಬ್ಬಳ್ಳಿ, ಗದಗ, ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲ ಕಡೆ ಕೋವಿಡ್ 19 ಸಂದರ್ಭದಲ್ಲಿಯೂ ಹೋಗುತ್ತಿರುವುದು ಶ್ಲಾಘನೀಯ. ಈ ಬಗ್ಗೆ ಸಹಕಾರ ಮಂತ್ರಿಗಳಾಗಿ ಸಾಕಷ್ಟು ಅನುಭವ ಹೊಂದಿರುವ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅವರೂ ಸಹ ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆಂದರೆ ಊಹಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತದ ಡೈರೆಕ್ಟರ್ ಪರಮೇಶ್ವರ್ ಹೇಳಿದರು.
Key words: Disobedience –cooperation-Minister- S T Somashekhar