ಬೆಂಗಳೂರು ಆಗಸ್ಟ್ 1,2022(www.justkannada.in): ಈ ಬಾರಿಯ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದಿನ ದಿನ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ, ದೇವಾಲಯಗಳಿಗೆ ಆಗಮಿಸುವಂತಹ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಬೇಕು ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ಅವರ ನಿರ್ದೇಶನದ ಮೇರೆಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.
“ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಬಹಳ ಮಹತ್ವಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರಿ ವ್ರತ ಮತ್ತು ನವರಾತ್ರಿಗಳಲ್ಲೀಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯರು ಮನೆಯಲ್ಲಿ ಪೂಜೆಯನ್ನು ನೆರವೇರಿಸಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸುವ ಸಂಪ್ರದಾಯವಿದೆ”.
“ಈ ಸಂಪ್ರದಾಯಕ್ಕೆ ಮತ್ತಷ್ಟು ಇಂಬು ನೀಡುವ ಹಾಗೂ ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಪ್ರತಿವರ್ಷ ದೀಪಾವಳಿಯ ಸಂಧರ್ಭದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ, ಯುಗಾದಿ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ ಮಾಡುವ ಸಂಪ್ರದಾಯಕ್ಕೂ ನಾವು ಮುಂದಾಗಿದ್ದೇವೆ. ಈ ಬಾರಿ ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯಿರಿಗೆ ವಿಶೇಷ ಗೌರವ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಲಕೋಟೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿರುವ 6 ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮವನ್ನು ವಿತರಿಸಬೇಕು ಎಂದು ದೇವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
Key words: Distribution-arisina kumkuma- Women -Mujarai Temples – Varamahalakshmi festival