ಪಿರಿಯಾಪಟ್ಟಣ,ಡಿಸೆಂಬರ್,12,2022(www.justkannada.in): ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಲ್ಲೂಕಿನ 34 ಗ್ರಾ.ಪಂ ವ್ಯಾಪ್ತಿಯಲ್ಲಿ 3500ಕ್ಕೂ ಹೆಚ್ಚು ಮಂದಿ ಫಲಾನುಭವಿಗಳಿಗೆ ಗಿಡಗಳನ್ನು ವಿತರಣೆ ಮಾಡಲಿದ್ದು, ಗಿಡಗಳ ಜೊತೆಗೆ 3190 ರೂ. ಕೂಲಿ ಮೊತ್ತ ದೊರಯಲಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಆರ್. ಕೃಷ್ಣಕುಮಾರ್ ಅವರು ತಿಳಿಸಿದರು.
ಸೋಮವಾರ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮಪಂಚಾಯಿತಿ ಎದುರು “ವೈಯಕ್ತಿಕ ಪೌಷ್ಠಿಕ ಕೈ ತೋಟ ನಿರ್ಮಾಣಕ್ಕೆ ಗಿಡಗಳನ್ನು ವಿತರಿಸಿ” ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವತಿಯಿಂದ ಆರೋಗ್ಯಕ್ಕೆ ಪೂರಕವಾದಂತಹ ಗಿಡಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ. ಗಿಡಗಳನ್ನು ಈ ದಿನವೇ ನಾಟಿ ಮಾಡಿ, ಸಂರಕ್ಷಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಗಿಡಗಳನ್ನು ಮಾರಾಟ ಮಾಡದೇ, ಸ್ವತಃ ತಮ್ಮ ಜಮೀನಿನಲ್ಲಿ ನಾಟಿ ಮಾಡಿಕೊಂಡು ಅದರ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಪ್ರತಿ ಗ್ರಾ.ಪಂ ಮಟ್ಟದಲ್ಲಿ ಸ್ವ-ಸಹಾಯ ಸಂಘದ 101 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಪ್ರತಿ ಫಲಾನುಭವಿಗೆ ತೆಂಗು, ನುಗ್ಗೆ, ನಲ್ಲಿ, ಕರಿಬೇವು, ನಿಂಬೆ, ಚಕ್ರಮುನಿ, ಸೀಬೆ, ಸಪೋಟ ಸೇರಿದಂತೆ ಒಟ್ಟು 15 ಗಿಡಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ. ಎನ್. ಸುವೇದ ಅವರು ಮಾತನಾಡಿ, ಮಹಿಳೆಯರು ಗಿಡಗಳನ್ನು ತಮ್ಮ ಜಮೀನಿನಲ್ಲಿ ನಾಟಿ ಮಾಡಿ, ಅಗತ್ಯ ಗೊಬ್ಬರ, ನೀರು ಪೂರೈಸಬೇಕು. ತೆಂಗು, ಚಕ್ರಮುನಿ, ನಿಂಬೆ, ಕರಿಬೇವು ಹೀಗೆ ಉಪಯುಕ್ತವಾದ ಗಿಡಗಳನ್ನು ವಿತರಿಸುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ(ಗ್ರಾ.ಉ) ಕರುಣಾಕರ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಮತಾ, ಉಪಾಧ್ಯಕ್ಷರು ಕೆ.ಎನ್.ರಾಮಲಿಂಗಂ, ಪಿಡಿಒ ಪರಮೇಶ್, ಎಂಜಿನಿಯರ್ ರಶ್ಮಿ, ಐಇಸಿ ಸಂಯೋಜಕ ಡಿ.ರವಿಕುಮಾರ್ ಸೇರಿದಂತೆ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
Key words: Distribution – saplings – more than -3500 beneficiaries-Narega -scheme- Priyapatna