ಮೈಸೂರು,ಮೇ,25,2021(www.justkannada.in): ಕೋವಿಡ್ ಮಹಿಳಾ ಸ್ನೇಹಿತೆ ಎಂಬ ಹೆಸರಿನಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಾದಿಂದ ಕೋವಿಡ್ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು ಇದಕ್ಕೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಚಾಲನೆ ನೀಡಿದರು.
ಮಹಿಳೆಯರು ಕೆಲ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯ ಕೇಂದ್ರಗಳಲ್ಲಿ ಕಾಂಗ್ರೆಸ್ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಈ ಕಾಂಗ್ರೆಸ್ ಮಹಿಳಾ ಪಡೆ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಸಹಾಯಕ್ಕಿಳಿಯಲಿದೆ.
ಕೋವಿಡ್ ಮಹಿಳಾ ಸ್ನೇಹಿತೆ ಕೋವಿಡ್ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಮಹಿಳಾ ಐಸೋಲೇಷನ್ ಕಿಟ್ ನೀಡಲಾಗುತ್ತದೆ. ವೈದ್ಯರು ಸೂಚಿಸಿರುವ 5 ರೀತಿಯ ಔಷಧಿ, ಮಾಸ್ಕ್ ಸೋಪ್ ಸೇರಿದಂತೆ ಹಲವು ವಸ್ತುಗಳು ಇರಲಿದೆ. ಸದ್ಯ ಮೈಸೂರಿನಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೀಡಲು ಒಂದು ಸಾವಿರ ಕಿಟ್ ತಯಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಬರುವುದರಿಂದ ಮಕ್ಕಳ ಆರೋಗ್ಯಕ್ಕೆ ಅಗತ್ಯವಿರುವ ವಸ್ತುಗಳನ್ನ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿಯ ಐಟಿ ಸೆಲ್ ಕಾಂಗ್ರೆಸ್ ನ ಮಹಿಳೆಯರನ್ನ ಟ್ರೋಲ್ ಮಾಡಿ ಅವಮಾನಿಸುತ್ತಿದ್ದಾರೆ. ನಿನ್ನೆ ಮೈಸೂರಿನಲ್ಲಿ ಹಾಗೂ ರಾಜ್ಯದಲ್ಲಿ ಬೆಡ್ ಗಳು ಸಿಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಬಿಜೆಪಿ ನಮ್ಮನ್ನ ಟ್ರೋಲ್ ಮಾಡುತ್ತಿದೆ. ಅವರ ಮನೆಯಲ್ಲೂ ಮಹಿಳೆಯರು ಇರುತ್ತಾರೆ ಎನ್ನುವುದು ಅವರ ಗಮನಕ್ಕೂ ಬರಬೇಕು. ನಾವು ಇದಕ್ಕೆಲ್ಲ ಜಗ್ಗುವ ಮಹಿಳೆಯರಲ್ಲ. ಬಿಜೆಪಿಯ ವಿರುದ್ಧ ಯಾರೇ ಪ್ರಶ್ನೆ ಮಾಡಿದರೂ ಅವರ ವಿರುದ್ಧ ಟ್ರೋಲ್ ಅಸ್ತ್ರ ಬಳಸುತ್ತಿದ್ದಾರೆ. ಹೆಸರಿಗೆ ಭಾರತ್ ಮಾತಾಕಿ ಜೈ ಅಂತಾರೆ ಅಷ್ಟೇ. ಇದರಿಂದಲೇ ಗೊತ್ತಾಗಲಿದೆ ಬಿಜೆಪಿಯಲ್ಲಿ ಮಹಿಳೆಯರಿಗೆ ಬೆಲೆ ಇಲ್ಲ ಎಂದು. ನೀವ್ ಎಷ್ಟೇ ಟ್ರೋಲ್ ಮಾಡಿದರೂ ಮಹಿಳೆಯರು ಹೆದರುವ ಅವಶ್ಯಕತೆ ಇಲ್ಲ ಎಂದು ಡಾ. ಪುಷ್ಪ ಅಮರನಾಥ್ ಬಿಜೆಪಿಗೆ ಟಾಂಗ್ ನೀಡಿದರು.
Key words: District -Congress –Launches- Women’s -covid Helpline – mysore