ಮೈಸೂರು,ಸೆ,12,2019(www.justkannada.in): ಮಾಜಿ ಸಚಿವ ಡಿಕೆ ಶಿವಕುಮಾರ್ ಒಬ್ಬ ಭ್ರಷ್ಟಾಚಾರದ ಪ್ರತಿರೂಪ. ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠ್ ಒತ್ತಾಯಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಸ್.ಆರ್ ಹಿರೇಮಠ್, ಅಕ್ರಮಗಳನ್ನ ಮಾಡು ಅಂತಾ ಡಿಕೆ ಶಿವಕುಮಾರ್ ಗೆ ಅವರ ತಾಯಿ ಗೌರಮ್ಮ, ತಂದೆ ಕೆಂಪೇಗೌಡ ಹೇಳಿಲ್ಲ. ಡಿಕೆಶಿ ತಮ್ಮ ಅಕ್ರಮಗಳಿಂದ ಅವರ ತಾಯಿಗೆ ಚಿತ್ರಹಿಂಸೆಯಾಗಿದೆ. ಇಷ್ಟು ಆಸ್ತಿ, ಹಣ ಎಲ್ಲಿಂದ ಬಂತು…??? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.
ಡಿಕೆಶಿ ಒಬ್ಬ ಭ್ರಷ್ಟಾಚಾರದ ಪ್ರತಿರೂಪ. ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕಾರಿಸಬೇಕು. ಪ್ರತಿಭಟನೆ ಮಾಡಿ ಡಿಕೆಶಿ ಪರ ನಿಲ್ಲಬಾರದು. ಇದು ನಮ್ಮ ತಂದೆತಾಯಿಗಳಿಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಡಿಕೆಶಿ ಪರ ನಿಂತಿದ್ದಾರಲ್ಲ ಅದು ದುರಾಸೆ..ಕ್ರಿಮಿನಾಲಿಟಿ. ತಮಗಷ್ಟೇ ವಿನಾಶವಲ್ಲ, ಶರಣರ, ಸಂತರ, ದಾಸರ, ಸೂಫಿಸಂತರ ಸಂದೇಶಗಳಿಗೆ ಅಪಮಾನ ಮಾಡಿದಂಗೆ. ಸ್ವಾಮಿಜೀಗಳು ಬಸವಾದಿಶರಣರಂತೆ ಮಾದರಿಯಾಗಬೇಕು. ಭ್ರಷ್ಟಾಚಾರ ಬೆನ್ನಿಗೆ ನಿಲ್ಲಬಾರದು ಎಂದು ನಿನ್ನೆ ನಡೆದ ಡಿಕೆಶಿ ಬೆಂಬಲಿತ ಪ್ರತಿಭಟನೆಯಲ್ಲಿ ಭಾಗಿಯಾದ ಸ್ವಾಮೀಜಿಗೆ ಎಸ್ಆರ್ ಹಿರೇಮಠ್ ಕಿವಿಮಾತು ಹೇಳಿದರು.
ಡಿ.ಕೆ ಶಿವಕುಮಾರ್ , ಕೆಫೆ ಕಾಫಿ ಡೇ ಸಿದ್ದಾರ್ಥ್ ಮಾಡಿರುವ ಭ್ರಷ್ಟಾಚಾರದ ಬಗ್ಗೆ ನಾವು ಬರೆದಿದ್ದೆವು. ಇದೀಗ ಡಿಕೆ ಶಿವಕುಮಾರ್ ಮನೆ ರೈಡ್ ಮಾಡಿದಾಗ ಸಿದ್ದಾರ್ಥ ಭ್ರಷ್ಟಾಚಾರದ ವಿಷಯ ಹೊರ ಬಂದಿದೆ. ಇವರ ಅವ್ಯವಹಾರ ಇವತ್ತು ಜನರಿಗೆ ಗೊತ್ತಾಗ್ತಿದೆ. ಇದು ಶುರು ಅಷ್ಟೇ. ಹಿಂದೆ ಐಟಿ ಅಧಿಕಾರಿಗಳು ಕಂಡ್ರು, ಈಗ ಇಡಿ ಬಂದಿದೆ. ನಂತರ ಸಿಬಿಐ ಬರಬೇಕು. ಸಮಗ್ರವಾಗಿ ತನಿಖೆ ಆಗ್ಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು. ಯಾವ ರೀತಿ ಗಾಲಿ ಜನಾರ್ದನರೆಡ್ಡಿ ಶಿಕ್ಷೆ ತನಿಖೆ ಆಯ್ತೋ ಅದೇ ರೀತಿ ಡಿಕೆಶಿ ತನಿಖೆ ಆಗ್ಬೇಕು. ಎಂದು ಎಸ್ಆರ್ ಹಿರೇಮಠ್ ಒತ್ತಾಯಿಸಿದರು.
ಪ್ರಧಾನಿ ಮೋದಿ ವಿರುದ್ದವೂ ವಾಗ್ದಾಳಿ…
ಎಲ್ಲಿಯವರೆಗೆ ನಾವು ಭ್ರಷ್ಟಾಚಾರಿಗಳನ್ನ ಗುರುತಿಸಿ ಅವರನ್ನ ನಾವು ಬಹಿಷ್ಕಾರ ಹಾಕುವವರೆಗೂ ನಮ್ಮ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಗಾಲಿ ಜನಾರ್ಧನ ರೆಡ್ಡಿ 40 ಸಾವಿರ ಕೋಟಿ ಲೂಟಿ ಮಾಡಿದ್ದೇನೆ ಅಂತಾ ತಾನೇ ಹೇಳಿದ್ದಾನೆ. 60 ಕೋಟಿ ಕೊಟ್ಟು ಜನಾರ್ಧನ ರೆಡ್ಡಿಯನ್ನ ಬಿಡಿಸಿಕೊಂಡು ಬಂದವರ ಜೊತೆ ಮೋದಿ ನಿಂತು ಭಾಷಣ ಮಾಡ್ತಾರೆ. ಮೋದಿ ಸೋಮಶೇಖರ್ ರೆಡ್ಡಿ ಜೊತೆ ನಿಂತು ಎಲೆಕ್ಷನ್ನಲ್ಲಿ ಭಾಷಣ ಮಾಡ್ತಾರೆ. ಪ್ರಧಾನಿ ಮೋದಿಗೆ ನಾಚಿಕೆ ಆಗೋದಿಲ್ವೇ ಎಂದು ಎಸ್.ಆರ್ ಹಿರೇಮಠ್ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಬಿಜೆಪಿ ಪ್ರಧಾನಿಯಲ್ಲ. ದೇಶದ ಪ್ರಧಾನಿ ಮಂತ್ರಿಯಾಗಬೇಕು. ಎಲ್ಲಾ ಭ್ರಷ್ಟಾಚಾರಿಗಳನ್ನ ಒಂದೇ ರೀತಿ ಮಾಡಬೇಕು. ನ್ಯಾಯ ಒಂದೇ ರೀತಿಯಲ್ಲೇ ಇರಬೇಕು. ಯಡಿಯೂರಪ್ಪ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ, ಲಾಲೂ ಪ್ರಸಾದ್ ಯಾದವ್, ಚಿದಂಬರಂ ಶಿಕ್ಷೆ ಅನುಭವಿಸುತ್ತಿದ್ದಾರೋ ಅದೇ ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಮಗ್ರವಾದ ತನಿಖೆ ಆದಾಗ ಮಾತ್ರ ಅವ್ರ ಮನ್ ಕೀ ಬಾತ್ ಗೆ ಬೆಲೆ ಬರುತ್ತೆ ಎಂದು ಎಸ್ ಆರ್ ಹಿರೇಮಠ್ ಹೇಳಿದರು.
Key words: DK Shivakumar-corruption-boycott – S R Hiremath -mysore