ಬೆಂಗಳೂರು,ಜುಲೈ,5,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು. ರಾಜ್ಯದ ಗೌರವ ಉಳಿಸಲು ರಾಜ್ಯಪಾಲರು ಕೂಡಲೇ ರಾಜ್ಯ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ರನ್ನ ಬಂಧಿಸಿದ್ದಾರೆ. ಕರ್ನಾಟಕಕ್ಕೆ ಒಂದು ಕಪ್ಪು ಚುಕ್ಕೆ ಬಂದಿದೆ. ಕರ್ನಾಟಕದ ಆಡಳಿತಕ್ಕೆ ಇದು ಮಸಿಯನ್ನು ಬಳದಿದೆ. ಪ್ರಜಾಪ್ರಭುತ್ವ ಉಳಿಸಬೇಕಾಗಿರುವುದು ನಮ್ಮ ಕರ್ತವ್ಯ. ನಿನ್ನೆ ಕೋರ್ಟ್ ಆದೇಶ ಮೇರೆಗೆ ಇಬ್ಬರು ಅದಿಕಾರಿಗಳನ್ನ ಬಂಧಿಸಿದ್ದಾರೆ. ರಾಹುಲ್ ಗಾಂಧಿಯನ್ನ ಗಂಟೆಗಟ್ಟಲೇ ವಿಚಾರಣೆ ಮಾಡಿಸುತ್ತೀರಿ. ಆದರೆ ಅಧಿಕಾರಿಯನ್ನ ಎರಡು ಗಂಟೆಗಳ ಕಾಲ ಮಾತ್ರ ವಿಚಾರಣೆ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು. ಪ್ರಕರಣ ನ್ಯಾಯಾಂಗ ತನಿಖೆಯಾಗಲಿ. ರಾಜ್ಯದ ಗೌರವ ಉಳಿಸಲು ಸರ್ಕಾರವನ್ನ ರಾಜ್ಯಪಾಲರು ವಜಾಗೊಳಿಸಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
Key words: DK Shivakumar- demands- judicial probe –PSI- scam.