ನವದೆಹಲಿ, ಡಿಸೆಂಬರ್ 12, 2019 (www.justkannada.in): ಪೌರತ್ವ ಮಸೂದೆ (ಸಿಎಬಿ)ಯೊಂದಿಗೆ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‍ಆರ್‍ಸಿ)ಯನ್ನು ತಳುಕು ಹಾಕಬೇಡ ಎಂದು ಕೇಂದ್ರ ಸರ್ಕಾರ ಪ್ರತಿಪಕ್ಷಗಳು ಮತ್ತು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವವರಲ್ಲಿ ಮನವಿ ಮಾಡಿದೆ.
ಶೀಘ್ರದಲ್ಲಿಯೇ ದೇಶದಾದ್ಯಂತ ಎನ್‍ಆರ್‍ಸಿಯನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ನಿನ್ನೆ ಮಧ್ಯರಾತ್ರಿವರೆಗೂ ನಡೆದ ಸುದೀರ್ಘ ಕಲಾಪದ ವೇಳೆ ಎನ್‍ಆರ್‍ಸಿ ಹಾಗೂ ಸಿಎಬಿ ಕುರಿತು ವಿವರಣೆ ನೀಡಿರುವ ಅಮಿತ್ ಶಾ ಅವರು, ತಿದ್ದುಪಡಿಯಾಗಿರುವ ಪೌರತ್ವ ಮಸೂದೆಯೊಂದಿಗೆ ಎನ್‍ಆರ್‍ಸಿಯನ್ನು ತಳುಕು ಹಾಕಬೇಡಿ.
ಇದರ ಅಗತ್ಯವೂ ಇಲ್ಲ. ಪೌರತ್ವ ಮಸೂದೆಯಂತೆಯೇ ರಾಷ್ಟ್ರೀಯ ನಾಗರೀಕ ನೋಂದಣಿ ಕುರಿತಂತೆಯೂ ವಿವರಣೆಯನ್ನು ನೀಡುತ್ತೇನೆ. ಭರವಸೆಗಳನ್ನೂ ನೀಡುತ್ತೇನೆ. ಶೀಘ್ರದಲ್ಲಿಯೇ ದೇಶದಾದ್ಯಂತ ಎನ್‍ಆರ್‍ಸಿ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ಅಕ್ರಮವಾಗಿ ವಲಸೆ ಬಂದವರನ್ನು, ಪ್ರಮುಖವಾಗಿ ಬಾಂಗ್ಲಾ ದೇಶದಿಂದ ಅಸ್ಸಾಂ ರಾಜ್ಯ ಪ್ರವೇಶಿಸಿ ಮಾರ್ಚ್ 25, 1971ರ ನಂತರ ಅಲ್ಲೇ ನೆಲೆಸಿದವರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶವನ್ನು ರಾಷ್ಟ್ರೀಯ ನಾಗರೀಕ ನೋಂದಣಿ ಹೊಂದಿದೆ.