ಬೆಂಗಳೂರು,ಸೆ,26,2019(www.justkannada.in): ಕಪ್ಪತ್ತಗುಡ್ಡ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವೆಂಬ ಸ್ಥಾನಮಾನವನ್ನು ಹಿಂಪಡೆಯುವ ಯಾವುದೇ ನಿರ್ಣಯವನ್ನು ತಾವು ಕೈಗೊಳ್ಳಬಾರದು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದಿದ್ದಾರೆ.
ಕಪ್ಪತ್ತಗುಡ್ಡದ ಸಂರಕ್ಷಿತ ಅರಣ್ಯ ಪ್ರದೇಶ ಸ್ಥಾನಮಾನವನ್ನು ಹಿಂಪಡೆಯುವ ಹುನ್ನಾರ ಮತ್ತೊಮ್ಮೆ ನಡೆದಿದೆ. ಇದು ಕಳವಳಕಾರಿ. ಇಂಥ ಯಾವುದೇ ನಿರ್ಣಯ ಗದಗ ಜಿಲ್ಲೆ ಹಿತ ಹಾಗೂ ಉತ್ತರ ಕರ್ನಾಟಕದ ಜನರ ಭಾವನೆಯ ವಿರೋಧಿ ನಿರ್ಣಯವಾಗಿ ಹೋರಾಟಕ್ಕೆ ನಾಂದಿ ಮಾಡಿಕೊಡುವುದು. ಅಂಥ ನಿರ್ಣಯ ಆಗದ ಹಾಗೆ ಮುತುವರ್ಜಿ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗದಗ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು 3 ಪುಟಗಳ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕಪ್ಪತ್ತಗುಡ್ಡ ಅರಣ್ಯ ಪ್ರದೇಶದ ವನ್ಯಜೀವಿಧಾಮ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವಂತೆ ತಮ್ಮ ಕಛೇರಿಗೆ ಕಡತ ಸಲ್ಲಿಸಲಾಗಿದೆ ಮತ್ತು ರಾಜ್ಯವನ್ಯಜೀವಿ ಮಂಡಳಿಯ ಸಭೆಯನ್ನು ಗುರುವಾರ ಕರೆಯಲಾಗಿದೆ ಎಂಬ ಪತ್ರಿಕಾ ವರದಿ ಗಮನಿಸಿದೆ. ಉತ್ತರ ಕರ್ನಾಟಕದ ಜೀವವೈವಿದ್ಯದ ಬಹುಪ್ರಮುಖ ಅರಣ್ಯ ಪ್ರದೇಶವಾಗಿರುವ ಕಪ್ಪತ್ತಗುಡ್ಡವನ್ನು ಈಗಿರುವ ಪರಿಸ್ಥಿತಿಯಲ್ಲಿ ಮುಂದುವರೆಸಿ ವನ್ಯಜೀವಿ ಸ್ಥಾನಮಾನವನ್ನು ಸಂರಕ್ಷಿಸುವ ನಿರ್ಣಯವನ್ನು ಆ ಭಾಗದ ಜನತೆ ಒಕ್ಕೋರಲಿನಿಂದ ಕೈಗೊಂಡಿದ್ದಾರೆ. ಈ ಬಗ್ಗೆ ಹಲವಾರು ರಾಜಕೀಯ ಮತ್ತು ಸಾರ್ವಜನಿಕ ಹೋರಾಟಗಳು ನಡೆದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿರಲು ಸಾಕು. ಆದಾಗ್ಯೂ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ
19.12.2015 ರಂದು ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಯಿತು.
31.8.2016 ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗೃಹ ಕಛೇರಿ “ಕೃಷ್ಣಾ”ದಲ್ಲಿ 09ನೇ ರಾಜ್ಯ ವನ್ಯ ಜೀವಿ ಮಂಡಳಿ ಸಭೆ ನಡೆದಿತ್ತು.
4.11.2016 ರಂದು ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿದ್ದ Gazette ಅಧಿಸೂಚನೆಯನ್ನು ಹಿಂಪಡೆಯಲಾಯಿತು.
ತೀವ್ರವಾದ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ಹಂತದಲ್ಲಿ ಈ ನಿರ್ಣಯ ಮರುಪರಿಶೀಲನೆಗೆ ಒತ್ತಾಯಿಸಲಾಯಿತು. ಅಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವನಾಗಿದ್ದ ನಾನು ಈ ನಿರ್ಣಯ ಹಿಂಪಡೆಯಲು ಸರ್ಕಾರದ ಹಲವಾರು ಹಂತಗಳಲ್ಲಿ ವಿನಂತಿಸಿ ನಿರ್ಣಯ ಮರುಪರಿಶೀಲನೆಯಾಗುವಂತೆ ಪ್ರಯತ್ನಿಸಿ ಯಶಸ್ವಿಯಾದೆ. ಈ ಸಂದರ್ಭದಲ್ಲಿ ಗದಗಿನ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಮಠಾಧೀಶರು, ಸಾರ್ವಜನಿಕರು, ಪರಿಸರವಾದಿಗಳು, ಪರಿಸರ ತಜ್ಞರು ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸರ್ಕಾರದ ಮಟ್ಟದಲ್ಲಿ ಜನಪರ ನಿಲುವು ಮರಳಿ ಸ್ಥಾಪಿಸುವಲ್ಲಿ ಅಂದು ನಾವು ಯಶಸ್ವಿಯಾದೆವು ಎಂದು ತಮ್ಮ ವಿವರವಾದ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯ ಶ್ರೇಷ್ಠ ನ್ಯಾಯಾಲಯದ ಈ ನಿರ್ದೇಶನದಂತೆ ದಿನಾಂಕ 16.1.2017 ರಂದು ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಮತ್ತೆ ಘೋಷಿಸಲು ಸಾರ್ವಜನಿಕ ಅಭಿಪ್ರಾಯ ಕೇಳಿ ಗದಗ ಜಿಲ್ಲೆ ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಸಭೆ (Public hearing) ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಎಲ್ಲಾ ಅಂಶಗಳನ್ನು ಅಳವಡಿಸಿ ನಿಯಮಿತ ವಿಧಿವಿಧಾನದಲ್ಲಿ ಸಾರ್ವಜನಿಕ ಅರ್ಜಿಯ ಅಹವಾಲುಗಳನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದರು. ಈ ವರದಿಯ ಆಧಾರದ ಮೇಲೆ 10ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಮುಂದುವರೆಸಲು ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಮುಂದುವರೆಸುವ Gazette ಹೊರಡಿಸಲಾಯಿತು.
ಆದರೆ ಇಂದು ಈಗ ಮತ್ತೆ ಮತ್ತೊಮ್ಮೆ ಸಂರಕ್ಷಿತ ಅರಣ್ಯ ಪ್ರದೇಶದ ಸ್ಥಾನಮಾನವನ್ನು ಹಿಂಪಡೆಯುವ ಹುನ್ನಾರ ನಡೆದಿದೆ. ಈ ವಿಷಯ ಕಳವಳಕಾರಿ. ಪರಿಸರ ಸಂರಕ್ಷಣೆಯೆ ಹೋರಾಟ ಮುಂಚೂಣಿಯಲ್ಲಿದ್ದು ಸರ್ಕಾರ ಕೈಗೊಂಡ ಅಂದಿನ ನಿರ್ಣಯವನ್ನು ಹಿಂಪಡೆಯಲು ಸುಧೀರ್ಘವಾದ ಹೋರಾಟವೇ ನಡೆದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಐತಿಹಾಸಿಕ ಹೋರಾಟಕ್ಕೆ ಗದಗ ಜಿಲ್ಲೆ ಅಂದು ಸಾಕ್ಷಿಯಾಗಿತ್ತು. ಅದಾವುದನ್ನು ಲೆಕ್ಕಿಸದೇ ಪಟ್ಟಭದ್ರ ಹಿತಾಸಕ್ತಿಗಳು ಮತ್ತೊಮ್ಮೆ ಆ ಹೋರಾಟದ ಉದ್ದೇಶವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತವೆ ಎಂಬ ವಿಷಯ ಈಗ ಸ್ಪಷ್ಟವಾಗುತ್ತಿದೆ. ಈ ಎಲ್ಲಾ ಅಂಶಗಳು ಈ ಮೊದಲೇ ಹಲವಾರು ಚರ್ಚೆಗೊಳಗಾಗಿ ನಿರ್ಣಯವಾಗಿವೆ ಎಂದು ತಮ್ಮ ಪತ್ರದಲ್ಲಿ ವಿವರಿಸಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ಈ ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವೆಂಬ ಸ್ಥಾನಮಾನವನ್ನು ಹಿಂಪಡೆಯುವ ಯಾವುದೇ ನಿರ್ಣಯವನ್ನು ತಾವು ಕೈಗೊಳ್ಳಬಾರದು ಎಂದು ಒತ್ತಾಯಿಸುವೆ. ಸಾರ್ವಜನಿಕ ಮಹತ್ವದ ಈ ವಿಷಯದಲ್ಲಿ ಕೆಲವೇ ಕೆಲವು ಪಟ್ಟಭದ್ರರ ಹಿತಾಸಕ್ತಿಗಳಿಗೆ ಅನುಕೂಲವಾಗುವ ನಿರ್ಣಯ ಕೈಗೊಳ್ಳುವುದು ಸಾಧುವಲ್ಲ. ಯಾವುದೇ ಅಂಥ ಪರಿಸರ ವಿರೋಧಿ ನಿರ್ಣಯ ಗದಗ ಜಿಲ್ಲೆ ಹಿತ ಹಾಗೂ ಉತ್ತರಕರ್ನಾಟಕ ಜನರ ಭಾವನೆಯ ವಿರೋಧಿ ನಿರ್ಣಯವಾಗಿ ಹೋರಾಟಕ್ಕೆ ನಾಂದಿ ಮಾಡಿಕೊಡುವದು. ದಯವಿಟ್ಟು ಅಂಥ ನಿರ್ಣಯ ಆಗದ ಹಾಗೆ ಮುತುವರ್ಜಿವಹಿಸಲು ತಮ್ಮನ್ನು ಕೋರುತ್ತೇನೆ ಎಂದಿದ್ದಾರೆ.
Key words: Do not – decision – withdraw – Kappathagudda-HK Patil-letter – CM BS Yeddyurappa