ಬೆಂಗಳೂರು,ಮೇ,27,2021(www.justkannada.in): ‘ಬ್ಲ್ಯಾಕ್ ಫಂಗಸ್’ (ಕಪ್ಪು ಶಿಲೀಂಧ್ರ) ಉಂಟು ಮಾಡುತ್ತಿರುವ ಮ್ಯೂಕೋರ್‌ಮೈಕೊಸಿಸ್‌ಗೆ, ಈರುಳ್ಳಿ ಮೇಲೆ ಕಂಡು ಬರುವ ಕಪ್ಪು ಪದರ ಹಾಗೂ ರೆಫ್ರಿಜರೇಟರ್ ನ ಒಳಗಿರುವ ಫಂಗಸ್ ಕಾರಣ ಎಂಬ ಸಂದೇಶ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಅನೇಕರಲ್ಲಿ ಆಂತಕವನ್ನು ಸೃಷ್ಟಿಸಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳಲು ಬಯಸುವಿರಾ?! ಹಾಗಾದರೆ ಈ ಲೇಖನವನ್ನು ಒಮ್ಮೆ ಓದಿ:
ಇತ್ತೀಚಿನ ದಿನಗಳಲ್ಲಿ ಮ್ಯೂಕೋರ್‌ಮೈಕೊಸಿಸ್ (ಬ್ಲ್ಯಾಕ್ ಫಂಗಸ್) ಖಾಯಿಲೆ ಎಲ್ಲರ ನಿದ್ದೆ ಕೆಡಿಸಿದೆ. ನಮ್ಮ ಮನೆಗಳಲ್ಲಿರುವ ವಸ್ತುಗಳಿಂದಲೇ ಇವು ಹರಡುತ್ತಿದೆ ಎಂದು ನಿಮಗೆ ಗೊತ್ತಾದರೆ ಗಾಬರಿಯಾಗುವುದಿಲ್ಲವೇ?! ಒಂದು ವೇಳೆ ಈ ‘ಬ್ಲ್ಯಾಕ್ ಫಂಗಸ್’ ನಿಮ್ಮ ಮನೆಯಲ್ಲಿರುವ ತರಕಾರಿಗಳಲ್ಲಿ ಹಾಗೂ ಆಹಾರವನ್ನು ಶೇಖರಿಸಿ ಇಡುವ ನಿಮ್ಮ ಮನೆಯ ರೆಫ್ರಿರೇಜಟರ್ (ತಂಗಟಲು ಪೆಟ್ಟಿಗೆ) ನಲ್ಲೇ ಇದೆ ಎಂದರೆ ಹೇಗಾಗಬೇಡ!!
ಇತ್ತೀಚಿಗೆ ಸಾಮಾಜಿಕ ತಾಣಗಳಲ್ಲಿ ಇಂತಹ ಒಂದು ಸಂದೇಶ ವೈರಲ್ ಆಗಿದ್ದು ಅನೇಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದಾಡುತ್ತಿರುವಂತಹ ಇಂತಹ ಒಂದು ಪೋಸ್ಟ್ (ಸಂದೇಶ)ದ ಪ್ರಕಾರ, “ನಿಮ್ಮ ಮನೆಯಲ್ಲಿರುವ ಬ್ಲ್ಯಾಕ್ ಫಂಗಸ್ ಬಗ್ಗೆ ಎಚ್ಚರಿಕೆ ವಹಿಸಿ. ಮನೆಯೆಂದ ಮೇಲೆ ಈರುಳ್ಳಿ ಒಂದು ಅತ್ಯಗತ್ಯ ತರಕಾರಿ. ಒಮ್ಮೊಮ್ಮೆ ಈರುಳ್ಳಿಯ ಮೇಲೆ ಕಪ್ಪು ಅಂಶ ಇರುವುದನ್ನು ನೀವೆಲ್ಲರೂ ಬಹುಶಃ ಗಮನಿಸಿರುತ್ತೀರಿ. ಇದೇ ಬ್ಲ್ಯಾಕ್ ಫಂಗಸ್!!! ಜೊತೆಗೆ ನಿಮ್ಮ ಮನೆಯ ಫ್ರಿಡ್ಜ್ ಒಳಗೆ ರಬ್ಬರ್ ಮೇಲೆ ಕಂಡು ಬರುವ ಕಪ್ಪು ಪದರವೇ ಬ್ಲ್ಯಾಕ್ ಫಂಗಸ್, ಇದೇ ಮ್ಯೂಕೋರ್‌ಮೈಕೊಸಿಸ್ ಅನ್ನು ಸೃಷ್ಟಿಸುತ್ತಿದೆ. ಇದನ್ನು ನೀವು ನಿರ್ಲಕ್ಷಿಸಿದರೆ ರೆಫ್ರಿಜರೇಟರ್‌ನಲ್ಲಿಟ್ಟಿರುವ ಆಹಾರ ಸೇವೆನೆಯ ಮೂಲಕ ಬ್ಲ್ಯಾಕ್ ಫಂಗಸ್ ನಿಮ್ಮ ದೇಹವನ್ನು ಸುಲಭವಾಗಿ ಸೇರಿಕೊಳ್ಳುತ್ತದೆ.”
ಆದರೆ ‘ಇಂಡಿಯಾ ಟುಡೆ’ಯ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಈ ಸಂದೇಶದ ಹಿಂದಿರುವ ಸತ್ಯಾಂಶವನ್ನು ತಿಳಿದುಕೊಳ್ಳಲು ತಜ್ಞರನ್ನು ಸಂಪರ್ಕಿಸಿತು. ತಜ್ಞರ ಪ್ರಕಾರ ರೆಫ್ರಿಜರೇಟರ್ ಒಳಗೆ ಹಾಗೂ ಈರುಳ್ಳಿ ಮೇಲೆ ಕಂಡು ಬರುವ ಕಪ್ಪು ಪದರಕ್ಕೂ ಮ್ಯೂಕೋರ್‌ಮೈಕೊಸಿಸ್‌ಗೆ ಕಾರಣವಾಗುತ್ತಿರುವ ‘ಬ್ಲ್ಯಾಕ್ ಫಂಗಸ್’ಗೂ ಯಾವುದೇ ಸಂಬಂಧವಿಲ್ಲ.
ಹಾಗಾದರೆ ಈ ಫಂಗಿಗಳ (ಶಿಲೀಂಧ್ರಗಳು) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ:
ನವದೆಹಲಿಯ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಅಂಡ್ ಬಯೊಟೆಕ್ನಾಲಜಿಯ ಹಿರಿಯ ವಿಜ್ಞಾನಿ ನಸೀಂ ಗೌರ್ ಅವರ ಪ್ರಕಾರ, ರೆಫ್ರಿಜರೇಟರ್ ಒಳಗೆ ಹಾಗೂ ತೇವಾಂಶವಿರುವ ಗೋಡೆಗಳ ಮೇಲೆ ಒಂದು ರೀತಿಯ ಬ್ಯಾಕ್ಟೀರಿಯ ಇರುತ್ತದೆ (ಬ್ಯಾಸಿಲ್ಲಸ್ ಹಾಗೂ ಅಸಿನೆಟೊಬ್ಯಾಕ್ಟರ್), ಯೀಸ್ಟ್ (ಸ್ಯಾಖರೋಮೈಸಿಸ್ ಹಾಗೂ ಕ್ಯಾಂಡಿಡಾ) ಹಾಗೂ ಸ್ಟಾಕೈಬೊಟ್ರಿಸ್ ಕ್ಯಾರಟಾಟ್ರಂನಂತಹ ವಿವಿಧ ಮೋಲ್ಡ್ ಗಳು ಗೋಚರಿಸುತ್ತದೆ. ಮೋಲ್ಡ್ ಗಳೆಂದರೆ ಒಂದು ತಳಿಯ ಫಂಗಿ ಗುಂಪು (ಶಿಲೀಂಧ್ರ ಗುಂಪು). ಇವು ‘ಹೈಫೇ’ ಎಂಬ ಹೆಸರಿನ ಬಹುಕೋಶೀಯ ತಂತುಗಳ (multi-cellular filaments) ಗುಣಲಕ್ಷಣಗಳನ್ನು ಹೊಂದಿರುವ ಬಹುಕೋಶೀಯ ಅತಿಸೂಕ್ಷ್ಮಜೀವಿಗಳು (multi-cellular microscopic organisms). ‘ಮೋಲ್ಡ್ ಅಡ್ವೈಸರ್’ ಹಾಗೂ ರೆಫ್ರಿಜರೇಟರ್ ಗಳ ಒಳಗೆ ಕಂಡು ಬರುವಂತಹ ಬ್ಲ್ಯಾಕ್ ಮೋಲ್ಡ್ ಎಂದರೆ ಸ್ಟಾಂಯಕೈಬೊಟ್ರಿಸ್ ಕ್ಯಾರಟರಂ. ಅಮೇರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ ಈ ಸ್ಟಾಂಯಕೈಬೊಟ್ರಿಸ್ ಕ್ಯಾರಟರಂ ಹಾಗೂ ಇದೇ ರೀತಿಯ ಇತರೆ ಮೋಲ್ಡ್ ಗಳು ಅನಿರ್ಧಿಷ್ಟವಾಗಿರುವಂತಹ ಕೆಲವು ಆರೋಗ್ಯ ಸೂಚನೆಗಳನ್ನು ಉಂಟು ಮಾಡಬಹುದು. ಹಾಗಾಗಿ, ಇದನ್ನು ಸ್ವಚ್ಛಗೊಳಿಸುವುದು ಒಳಿತು.
ನೀವು ಸೇವಿಸುವ ಈರುಳ್ಳಿ ಮೇಲೆ ಕಂಡು ಬರುವ ಫಂಗಸ್
ಯುಎಸ್‌ನ ಕೃಷಿ ಇಲಾಖೆಯ ಪ್ರಕಾರ ಈರುಳ್ಳಿ ಮೇಲೆ ಕಂಡು ಬರುವ ಬ್ಲ್ಯಾಕ್ ಮೋಲ್ಡ್ ಗೆ (ಕಪ್ಪು ಪದರ) ಮಣ್ಣಿನಲ್ಲಿ ಕಂಡು ಬರುವ ‘ಆಸ್ಪೆರಜಿಲ್ಲಸ್ ನೈಜರ್’ (aspergillus niger) ಎಂಬ ಹೆಸರಿನ ಒಂದು ಸಾಮಾನ್ಯ ಫಂಗಸ್ ಕಾರಣ. ಜಬಲ್‌ಪುರ್‌ನ ಸೆಂಟರ್ ಫಾರ್ ಮೆಡಿಕಲ್ ಮೈಕಾಲಜಿ ಫಂಗಲ್ ಡಿಸೀಸ್ ಡಯಾಗ್ನೊಸ್ಟಿಕ್ ಅಂಡ್ ರೀಸರ್ಚ್ ಸೆಂಟರ್‌ನ ವಿಜ್ಞಾನಿ ಡಾ. ಶೇಷ್ ಆರ್. ನವಂಗೇ ಅವರೂ ಕೂಡ ಈ ಅಂಶವನ್ನು ಧೃಪಡಿಸಿದ್ದಾರೆ. ಇಂತಹ ಫಂಗಸ್ ಸೋಂಕನ್ನು ಉಂಟು ಮಾಡುವುದು ಬಹಳ ಅಪರೂಪ. ಆದರೂ ಸೇವಿಸುವ ಮುಂಚೆ ಈರುಳ್ಳಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ.
ಮ್ಯೂಕೋರ್ ಮೈಕೊಸಿಸ್ ಉಂಟು ಮಾಡುವ ಫಂಗಸ್
ಮ್ಯೂಕೋರ್‌ಮೈಕೊಸಿಸ್ (ಈ ಹಿಂದೆ ಝೈಗೊಮೈಕೊಸಿಸ್ ಎಂದು ಕರೆಯಲ್ಪಡುತಿತ್ತು) ಒಂದು ರೀತಿಯ ಗಂಭೀರವಾದಂತಹ ಆದರೆ ಅಪರೂಪದ ಫಂಗಲ್ ಸೋಂಕು. ಇದು ಮ್ಯೂಕೋರ್ ಮೈಸಿಟಿಸ್ ಎಂದು ಕರೆಯಲ್ಪಡುವ ಮೋಲ್ಡ್ಗಳ ಗುಂಪಿನಿಂದ ಉಂಟಾಗುತ್ತದೆ. ಈ ಮೋಲ್ಡ್ ಗಳು ಪರಿಸರದ ಎಲ್ಲೆಡೆ ಇರುತ್ತದೆಯಂತೆ. ಆದರೆ ಮ್ಯೂಕೋರ್‌ಮೈಕೊಸಿಸ್ ಬಹುಮುಖ್ಯವಾಗಿ ಅನಾರೋಗ್ಯದ ಸಮಸ್ಯೆಗಳಿರುವಂತಹ ಜನರನ್ನು ಅಥವಾ ದೇಹದ ಒಳಗೆ ರೋಗಾಣುಗಳ ವಿರುದ್ಧ ಹಾಗೂ ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ಕುಂದಿರುವAತಹ ಔಷಧಗಳನ್ನು ಸೇವಿಸುತ್ತಿರುವವರ ಮೇಲೆ ಪರಿಣಾಮ ಬೀರುತ್ತದೆ.
ಚಂಡೀಘಡದ ಪಿಜಿಐಎಂಇಆರ್‌ನ ಮೆಡಿಕಲ್ ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದಂತಹ ಡಾ. ಅರುಣಾಲೋಕ್ ಚಕ್ರವರ್ತಿ ಅವರ ಪ್ರಕಾರ, “ಮ್ಯೂಕೋರ್ ಮೈಕೊಸಿಸ್ ಉಂಟು ಮಾಡುತ್ತಿರುವಂತಹ ಫಂಗಸ್ (ಶಿಲೀಂಧ್ರ) ರೆಫ್ರಿಜರೇಟರ್ ಒಳಗೆ ಬದುಕುಳಿಯುವುದು ಅಸಾಧ್ಯ. ಜೊತೆಗೆ ಯಾವುದೇ ಫಂಗಸ್ ಅನ್ನು ಅದರ ಬಣ್ಣದ ಆಧಾರದ ಮೇಲೆ ವಿಂಗಡಿಸುವುದು ಅಸಮರ್ಪಕ.”
ನಸೀಂ ಗೌರ್ ಅವರು, ಪ್ರಯೋಗಾಲಯದಲ್ಲಿ ಬೆಳೆದಂತಹ ಮೂರು ರೀತಿಯ ಫಂಗಿಗಳ ಹಾಗೂ ಅವುಗಳ ಮೈಕ್ರೋಸ್ಕೋಪಿಕ್ ದೃಶ್ಯವಿರುವ ಚಿತ್ರಗಳನ್ನೂ ಸಹ ಹಂಚಿಕೊಂಡಿದ್ದಾರೆ.
ಹಾಗಾಗಿ ರೆಫ್ರಿಜರೇಟರ್ ಗಳು ಹಾಗೂ ಈರುಳ್ಳಿಯ ಮೇಲೆ ಕಂಡು ಬರುವ ಕಪ್ಪು ಪದರ ಹಾಗೂ ಮ್ಯೂಕೋರ್ ಮೈಕೊಸಿಸ್ ಉಂಟು ಮಾಡುತ್ತಿರುವ ಬ್ಲ್ಯಾಕ್ ಫಂಗಸ್ ಎರಡೂ ಬೇರೆ. ನಿಮ್ಮ ತಲೆಯಲ್ಲಿ ಇದ್ದಂತಹ ದೊಡ್ಡ ಭಾರ ಇಳಿಯಿತೇ?
Key words: Does –mucormycosis- spread – inside -fridge –onions-virtual -check.