ಕೆಎಸ್‌ಒಯು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಕೆಎಎಸ್ ತರಬೇತಿ ಶಿಬಿರ ಸಮಾರೋಪ
ಮೈಸೂರು, 12, 08, 2020: ಐಎಎಸ್ ಇಲ್ಲವೇ ಕೆಎಎಸ್ ಅಧಿಕಾರಿಯಾಗಬೇಕು ಎನ್ನುವ ಗುರಿಯೊಂದಿಗೆ ಅಭ್ಯಾಸ ಮಾಡಿ. ಇದನ್ನು ಏಕೆ ತೆಗೆದುಕೊಳ್ಳುತ್ತೇನೆ ಎನ್ನುವ ಸ್ಪಷ್ಟತೆಯೂ ನಿಮ್ಮಲ್ಲಿ ಇರಲಿ. ಇದರಲ್ಲಿ ಯಶಸ್ವಿಯಾದರೆ ಒಳ್ಳೆಯದು. ಅನುಭವದೊಂದಿಗೆ ಇತರೆ ಪರೀಕ್ಷೆಯಲ್ಲಿ ಯಶಸ್ವಿಯಾಗಲು ದಾರಿಯಾಗುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿ ಹಾಗೂ ಪಶುಪಾಲನೆ ಹಾಗೂ ಮೀನಗಾರಿಕೆ ಇಲಾಖೆ ಕಾರ‌್ಯದರ್ಶಿ ಪಿ.ಮಣಿವಣ್ಣನ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆಯೋಜಿಸಿದ್ದ ಕೆಎಎಸ್, ಎಫ್‌ಡಿಎ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ತಿಂಗಳ ಆನ್‌ಲೈನ್ ತರಬೇತಿ ಶಿಬಿರದ ಸಮಾರೋಪ ಕಾರ‌್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಮಾತನಾಡಿದರು.
ಯಾವುದೇ ಹುದ್ದೆಗೆ ಹೋಗಬೇಕು ಎನ್ನುವ ತೀರ್ಮಾನ ಮಾಡಿದರೆ ಅದಕ್ಕೆ ಏಕೆ ಹೋಗುತ್ತಿದ್ದೇನೆ. ಅದರಿಂದ ಜನರಿಗೆ ಏನು ಮಾಡಬಹುದು. ಅದರ ಸಾಧಕ ಬಾಧಕಗಳ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಈ ಸ್ಪಷ್ಟತೆ ಇಲ್ಲದೇ ಇದ್ದರೆ ಇಂಥ ಪರೀಕ್ಷೆಗಳನ್ನು ಯಾರೂ ಎದುರಿಸಬಾರದು. ಏಕೆಂದರೆ ಇದಕ್ಕೆ ಬೇಕಾಗಿರುವುದು ಕನಸು ಹಾಗೂ ಆಸೆಗಿಂತ ಬದ್ದತೆ ಮುಖ್ಯ. ಇದು ನಿಮ್ಮ ಮೊದಲ ಆದ್ಯತೆಯಾಗಲಿ ಎಂದು ಕಿವಿಮಾತು ಹೇಳಿದರು.
22 ವರ್ಷಗಳ ಕಾಲ ಕರ್ನಾಟಕದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಮಣಿವಣ್ಣನ್ ಸರಕಾರಿ ಸೇವೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವ ಮಾದರಿಯಲ್ಲೇ ವಿಷಯ ಪ್ರಸ್ತಾಪಿಸಿದರು. ಸರಕಾರ ಎನ್ನುವುದು ಜನರ ಪರವಾಗಿ ಕೆಲಸ ಮಾಡಲು ಇರುವ ದೊಡ್ಡ ಸಂಸ್ಥೆ. ಜನರ ಹಿತ ಕಾಯುವ ಜತೆಗೆ ಅವರ ರಕ್ಷಣೆ ಮಾಡುವ ದೊಡ್ಡ ಹೊಣೆ ಸರಕಾರದ ಜವಾಬ್ದಾರಿಯಾಗಿರುತ್ತದೆ. ಇದನ್ನೆಲ್ಲಾ ಅನುಷ್ಠಾನ ಮಾಡುವುದು ಸರಕಾರಿ ನೌಕರರು. ಇದರಿಂದ ಸರಕಾರಿ ನೌಕರಿ ಸೇರುವವರಿಗೆ ಧೈರ್ಯ, ಬುದ್ದಿವಂತಿಕೆ, ಪರಿಸ್ಥಿತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತ ಪರಿಹಾರ ನೀಡಬಲ್ಲ ಸೂಕ್ಷ್ಮಮತಿ ಬೇಕಾಗುತ್ತದೆ. ಇವೆಲ್ಲವೂ ನಿಮ್ಮಿಂದ ಸಾಧ್ಯ ಎಂದು ಅನ್ನಿಸಿದರೆ ಸರಕಾರಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ ‘ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಉನ್ನತ ಸ್ಥಾನ. ನಂತರದ್ದೇ ಸರಕಾರಿ ನೌಕರರದ್ದು. ನೀತಿಯನ್ನು ರೂಪಿಸುವಾಗ ಅಧಿಕಾರಿಗಳು ಸಲಹೆಗಳನ್ನು ನೀಡಬಹುದೇ ವಿನಃ ಅದನ್ನು ರೂಪಿಸುವವರು ಜನಪ್ರತಿನಿಧಿಗಳೇ. ಇಂಥ ಸಂದರ್ಭದಲ್ಲಿ ಸಲಹೆ ನೀಡುವಾಗ ಅಧಿಕಾರಿಗಳಲ್ಲಿ ಹೆಚ್ಚಿನ ಜ್ಞಾನದ ಜತೆಗೆ ಅನುಭವವೂ ಬೇಕಾಗುತ್ತದೆ. ಜ್ಞಾನವನ್ನು ವಿದ್ಯಾರ್ಥಿ ದಿಸೆಯಿಂದಲೇ ಪಡೆದುಕೊಂಡು ಅದನ್ನು ಬದುಕಿಗೆ ಉಪಯೋಗಕರವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಐನ್‌ಸ್ಟೆನ್‌ನ ಸಿದ್ದಾಂತಗಳನ್ನು ತಮ್ಮ ಮಾತಿನಲ್ಲಿ ಉಲ್ಲೇಖಿಸಿದ ಮಣಿವಣ್ಣನ್, ‘ ಸರಕಾರಿ ವೃತ್ತಿ ಆಯ್ಕೆ ಮಾಡಿಕೊಂಡವರು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರಲೇಬೇಕಾಗುತ್ತದೆ. ಧೈರ್ಯದ ನಿರ್ಧಾರಗಳನ್ನು ಕೈಗೊಂಡಾಗ ನಿಮ್ಮನ್ನು ಸರಿಯಾದ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಆದರೆ ಆಯ್ಕೆ ಎನ್ನುವುದು ನಿಮ್ಮ ಬಳಿಯೇ ಇದೆ. ಅದನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಬೇಕಷ್ಟೇ. ಅದನ್ನು ಈಗಲೇ ಮಾಡಿ ‘ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಮೈಸೂರು ಮೂಲದ ಬಸವರಾಜು ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮದ ಮುಖ್ಯ ಆಡಳಿತಾಧಿಕಾರಿ ಮಂಡ್ಯ ಮೂಲದ ಎ. ಎಂ. ಯೋಗೀಶ್ ಆನ್‌ಲೈನ್‌ನಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದು ಅಭ್ಯರ್ಥಿಗಳಿಗೆ ಅಧ್ಯಯನ ಟಿಪ್ಸ್‌ಗಳನ್ನು ನೀಡಿದರು.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಿ ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆ
ಮಾಡಿದರು. ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಮಾತನಾಡಿದರು. ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಜರಿದ್ದರು.