ಮೈಸೂರು, ಆಗಸ್ಟ್, 29, 2021 (www.justkannada.in): ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಬಹುದೆಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಪೊಲೀಸ್ ಇಲಾಖೆ ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಗಳನ್ನು ವಿಚಾರಣೆ ನಡೆಸಿ ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದನ್ನು ಬಿಟ್ಟು ಎನ್ ಕೌಂಟರ್ ಮತ್ತಿತರೆ ಮಾರ್ಗಗಳ ಮೂಲಕ ಶಿಕ್ಷಿಸುವುದು ಸಲ್ಲದು. ಇದಕ್ಕೆ ಪೂರಕವೆಂಬಂತೆ ಶಾಸಕ ಸಾರಾ ಮಹೇಶ್ ಕೂಡ ಎನ್ ಕೌಂಟರ್ ಮೂಲಕ ಹತ್ಯೆ ಮಾಡಬೇಕೆಂದು ಹೇಳಿರುವುದು ಸಲ್ಲದು. ಇದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಸೂಕ್ತ ವಿಚಾರಣೆ ನಡೆಸಿ ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.
ಆರೋಪಿಗಳ ವಿಚಾರಣೆ ಹಾಗೂ ಮಹಜರು ನಡೆಸುವ ವೇಳೆ ಕಡ್ಡಾಯವಾಗಿ ಬಾಡಿ ಕ್ಯಾಮರಾಗಳನ್ನು ಬಳಕೆ ಮಾಡಬೇಕು. ಎನ್ ಕೌಂಟರ್ ಹೆಸರಲ್ಲಿ ಹತ್ಯೆ ಮಾಡಬೇಕೆಂಬ ಹೇಳಿಕೆ ನೀಡಿರುವ ಸಾರಾ ಮಹೇಶ್ ಹಾಗೂ ಇತರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.