ಮಂಡ್ಯ, ಏ.14- ಡಾ. ಅಂಬೇಡ್ಕರ್ ಅವರ ಶ್ರಮದ ಫಲದಿಂದ ಶಿಕ್ಷಣ, ಉದ್ಯೋಗ, ಸಂಪತ್ತು ಗಳಿಸಿದ ದಲಿತರು ಪುರೋಹಿತರು, ಜ್ಯೋತಿಷಿಗಳ ಮಾತು ಕೇಳಿ ಬದುಕುತ್ತಿರುವುದು ವಿಷಾದನೀಯ. ಎಲ್ಲಿಯವರೆಗೆ ದಲಿತರು ಅಂಬೇಡ್ಕರ್ ತೋರಿಸಿದ ಮಾರ್ಗದಲ್ಲಿ ನಡೆಯುವುದಿಲ್ಲವೋ ಅಲ್ಲಿಯವರೆಗೆ ವಿಮೋಚನೆ ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಶೋಷಿತ ಸಮುದಾಯಗಳ ಉದ್ಧಾರಕ್ಕೆ ಮುಕ್ಕೋಟಿ ದೇವರುಗಳಿಂದ ಆಗದ ಕೆಲಸವನ್ನು ಡಾ. ಅಂಬೇಡ್ಕರ್ ಒಬ್ಬರೇ ಸಾಧಿಸಿ ತೋರಿಸಿದ್ದಾರೆ ಎಂದು ಬಣ್ಣಿಸಿದರು.
ಭಾರತದಲ್ಲಿರುವ ಜಾತಿ ವ್ಯವಸ್ಥೆ ಅತ್ಯಂತ ಹೀನ ವ್ಯವಸ್ಥೆಯಾಗಿದ್ದು ಮನೆಯೊಳಗೆ ನಾಯಿ ಬಿಟ್ಟುಕೊಳ್ಳುವ ಜನರು ದಲಿತರನ್ನು ಮನೆ ಬಾಗಿಲಿಗೆ ಸೇರಿಸುತ್ತಿರಲಿಲ್ಲ. ಕೆರೆ-ಕಟ್ಟೆಗಳಲ್ಲಿ ದನ ಕುರಿಗಳಿಗೆ ನೀರುಣಿಸುವ ಜನರು ದಲಿತರು ಆ ನೀರನ್ನು ಕುಡಿಯುವಂತ್ತಿರಲಿಲ್ಲ. ದಲಿತರ ನೆರಳು ಭೂಮಿಗೆ ಬಿದ್ದರೆ ಅಪವಿತ್ರವಾಗಲಿದೆ ಎಂದು ಭಾವಿಸಿದ್ದ ಭಾರತದಲ್ಲಿ ಇಂದು ದಲಿತರು ಅನ್ನ, ಶಿಕ್ಷಣ, ಉದ್ಯೋಗ, ಅಧಿಕಾರ, ಸಂಪತ್ತು ಪಡೆಯಲು ಡಾ. ಅಂಬೇಡ್ಕರ್ ಅವರ ಹೋರಾಟ ಮತ್ತು ಅವರು ನೀಡಿದ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಶ್ರಮದ ಫಲವಾಗಿ ಎಲ್ಲ ಅವಕಾಶಗಳನ್ನೂ ಪಡೆದ ಮುಂದುವರೆದ ದಲಿತರು ಮನೆ ಕಟ್ಟಿ ಪುರೋಷಿತರನ್ನು ಕರೆಸಿ ದಾನ ದಕ್ಷಿಣೆ ನೀಡುತ್ತಿದ್ದಾರೆ. ಹೊಸ ಕಾರು ಖರೀದಿಸಿ ಪೂಜೆಗೆ ದೇವಸ್ಥಾನಕ್ಕೆ ಕೊಂಡೊಯ್ಯುತಿದ್ದಾರೆ. ತಮಗೆ ಹುಟ್ಟಿದ ಮಕ್ಕಳಿಗೆ ಪುರೋಷಿತರಿಂದ ನಾಮಕರಣ ಮಾಡಿಸುತ್ತಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಗುಲಾಮಗಿರಿಗೆ ಇಳಿದಿದ್ದಾರೆ. ಬಹಿರಂಗವಾಗಿ ಜಾತಿಯನ್ನೂ ಘೋಷಿಸಿಕೊಳ್ಳದೆ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ದಲಿತರ ಇಂತಹ ನಡವಳಿಕೆಗಳಿಂದಲೇ ಕೊನೆ ದಿನಗಳಲ್ಲಿ ಅಂಬೇಡ್ಕರ್ ಕಣ್ಣೀರು ಹಾಕಿದ್ದರು ಎಂದು ವಿಷಾಧಿಸಿದರು.
ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಕ್ಕೂ ಅವಮಾನಗಳನ್ನು ಸಹಿಸಿಕೊಂಡು ತನ್ನ ಜನರ ಸ್ವಾಭಿಮಾನದ ಬದುಕಿದಾಗಿ ಹೋರಾಡಿದರು. ಯಾವ ಧರ್ಮದಲ್ಲಿ ನಮಗೆ ಗೌರವ, ಪ್ರೀತಿ ಸಿಗುವುದಿಲ್ಲವೋ ಅಂತಹ ಧರ್ಮ ಬೇಡವೆಂದು ನಿರ್ಧರಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ` ನಾನು ಬೌದ್ಧ ಧರ್ಮಕ್ಕೆ ಮತಾಂತರ ಕೊಂಡ ಕ್ಷಣ ನನ್ನ ಬದುಕಿನ ಅತ್ಯಂತ ಸಂತೋಷದ ಕ್ಷಣ, ನಾನು ನರಕದಿಂದ ಹೊರ ಬಂದಿದ್ದೇನೆ’ ಎಂದು ಸ್ವತಃ ಅಂಬೇಡ್ಕರ್ ಅವರು ನಾಗಪುರದ ಭಾಷಣದಲ್ಲಿ ಹೇಳಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರವನ್ನು ನಾವು ತೆಗೆದುಕೊಳ್ಳದಿದ್ದರೆ ದಲಿತರು ಅಂಬೇಡ್ಕರ್ ಅವರಿಗೆ ಮಹಾ ಮೋಸ ಮಾಡಿದಂತ್ತಾಗುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ, ಸಂವಿಧಾನ ಜಾರಿಯಾಗಿ 70 ವರ್ಷ ಕಳೆದಿದರೆ. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗದಲ್ಲಿ ದಲಿತರು ಮಹತ್ವದ ಹೆಜ್ಜೆ ಗುರುತುಗಳನ್ನು ಇಟ್ಟಿದ್ದಾರೆ. ಆದರೆ, ಇಂದಿಗೂ ಸಹ ದಲಿತರು ಎಂಬ ಕಾರಣಕ್ಕೆ ದೌರ್ಜನ್ಯ, ಶೋಷಣೆ ನಿಂತ್ತಿಲ್ಲ. ಅಗೌರವ, ಅವಮಾನಗಳು ನಿಂತ್ತಿಲ್ಲ.
2024ನೇ ಸಾಲಿನಲ್ಲಿ ಭಾರತದಲ್ಲಿ ಸುಮಾರು 48 ಸಾವಿರ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪ್ರತಿ 18 ನಿಮಿಷಕ್ಕೆ ಒಂದು ದೌರ್ಜನ್ಯ ಪ್ರಕರಣ ದಾಖಲಾದರೆ, ಪ್ರತಿ 20 ನಿಮಿಷಕ್ಕೆ ಒಬ್ಬ ದಲಿತ ಮಹಿಳೆಯ ಅತ್ಯಾಚಾರ, ಒಂದು ವಾರಕ್ಕೆ 13 ದಲಿತರ ಹತ್ಯೆ ಪ್ರಕರಣಗಳು ದಾಖಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದಲಿತ ಸಂಸದರನ್ನು ಊರಿನೊಳಗೆ ಪ್ರವೇಶ ನಿರಾಕರಿಸಿದ ಪ್ರಕರಣ ನಮ್ಮ ಕಣ್ಣ ಮುಂದಿದೆ. ದಲಿತ ಮಕ್ಕಳಿಗೆ ಬಿಸಿಯೂಟ ಬಡಿಸಲು ಮೇಲ್ವರ್ಗದ ಮಹಿಳೆಯರು ನಿರಾಕರಿಸಿದ ಘಟನೆ ನಡೆದಿದೆ. ಕೂಲಿ ಕೇಳಿದ ಜನರನ್ನು ಹತ್ಯೆ ಮಾಡಿದ ನೂರಾರು ಉದಾಹರಣೆ ಸ್ವಾತಂತ್ರ ನಂತರದಲ್ಲಿ ನಡೆದಿದೆ. ದೇವಸ್ಥಾನ ಪ್ರವೇಶ, ತಲೆಕೂದಲು ಕತ್ತರಿಸಲು ನಿರಾಕರಿಸಿದ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಬೆತ್ತಲೆ ಮೆರವಣಿಗೆ, ಮರ್ಯಾದೆ ಹತ್ಯೆಗಳು ನಡೆಯುತ್ತಲೇ ಇದೆ. ಇದೆಲ್ಲ ಕಣ್ಣು ಮುಂದೆ ಇದ್ದಾಗಿಯೂ ಜಾತಿ ವ್ಯವಸ್ಥೆ ಇಲ್ಲ ಎಂದು ಹೇಗೆ ಹೇಳು ಸಾಧ್ಯ ಎಂದು ಪ್ರಶ್ನಿಸಿದರು.
ಇಂದು ದಲಿತರು ತಮ್ಮ ಹೋರಾಟದ ಸ್ವರೂಪವನ್ನು ಬದಲಿಸಿಕೊಳ್ಳಬೇಕಿದೆ. ಕೇವಲ ಪ್ರತಿಭಟನೆ, ಮೆರವಣಿಗೆ, ಧರಣಿ, ಕಪ್ಪು ಬಾವುಟ ಪ್ರದರ್ಶನಗಳಿಂದ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ನಮಗೆ ನಾವೇ ಗೌರವವನ್ನು ಪಡೆದುಕೊಳ್ಳಲು, ಜಾತಿಯ ನರಕದಿಂದ ಹೊರಬಂದು ವಿಜ್ಞಾನದ ತಳಹದಿಯ ಮೇಲೆ ಸ್ಥಾಪಿತವಾಗಿರುವ ಬೌದ್ಧ ಧರ್ಮವನ್ನು ಸ್ವೀಕರಿಸಬೇಕು. ಧರ್ಮ, ಜಾತಿ ಹೆಸರಿನಲ್ಲಿ ಅವಕಾಶ ವಂಚನೆ, ದೌರ್ಜನ್ಯ, ಅಪಮಾನ ಮಾಡುತ್ತಿರುವ ಜನರ ವಿರುದ್ಧ ಧಾರ್ಮಿಕ ಪ್ರತಿರೋಧ ಒಡ್ಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರೆ ನೀಡಿದರು.
key words: Constitution architect, Dr. B.R. Ambedkar, 134th Birth Anniversary, journalist, deepak
Constitution architect Dr. B.R. Ambedkar’s 134th Birth Anniversary Celebrations