ಮೈಸೂರು, ಆಗಸ್ಟ್ 20, 2023 (www.justkannada.in): ಫ್ರಾನ್ಸ್’ನ ಲಿಯಾನ್ ನಗರದಲ್ಲಿ ನಡೆಯುತ್ತಿರುವ ಐಸಿಪಿಪಿ-2023ರ ಸಮ್ಮೇಳನದಲ್ಲಿ ಭಾಗವಹಿಸಲು ಮತ್ತು ಆಹ್ವಾನಿತ ಉಪನ್ಯಾಸ ನೀಡಲು ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ.ಚಂದ್ರ ನಾಯಕ ಅವರನ್ನು ಆಹ್ವಾನಿಸಲಾಗಿದೆ.
ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಡಾ. ಚಂದ್ರ ನಾಯಕ ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ ಅವರಿಗೆ ಫ್ರಾನ್ಸ್ ಲಿಯಾನ್‌ನಲ್ಲಿ ನಡೆಯುತ್ತಿರುವ ಐಸಿಪಿಪಿ ಸಮ್ಮೇಳನಕ್ಕೆ ಹೋಗಲು ಆರ್ಥಿಕ ಬೆಂಬಲವನ್ನು ಒದಗಿಸಿದೆ. ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಪ್ಲಾಂಟ್ ಪೆಥಾಲಜಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಬೋಂಲಾಜಿಕಲ್ ಸೈನ್ಸಸ್, ಮತ್ತು ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಮೈಕ್ರೋಬೋಯಲಾಜಿಕಲ್ ಸೊಸೈಟೀಸ್, ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದೆ.
ಪ್ರಪಂಚದ ಅತ್ಯಂತ ಪ್ರತಿಷ್ಠಿತ ಸಸ್ಯ ರೋಗಶಾಸ್ತ್ರ ಸೊಸೈಟಿಗಳಲ್ಲಿ ಒಂದಾದ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಪ್ಲಾಂಟ್ ಪ್ಯಾಥಾಲಜಿ, ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಪಂಚದ ಅನೇಕ ದೇಶಗಳಲ್ಲಿ ಸಮ್ಮೇಳನ ವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಪಂಚದಾದ್ಯಂತ ಸಸ್ಯ ರೋಗಶಾಸ್ತ್ರಜ್ಞರು ಮತ್ತು ಸಸ್ಯ ಆರೋಗ್ಯ ಸಂಶೋಧಕರನ್ನು ಒಟ್ಟುಗೂಡಿಸಿ ಅವರ ಇತ್ತೀಚಿನ ಸಂಶೋಧನೆ ಮತ್ತು ಪ್ರಸ್ತುತ ಮತ್ತು ಭವಿಷ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತದೆ. ಐಸಿಪಿಪಿ ಆಹ್ವಾನಿತ ಉಪನ್ಯಾಸಗಳನ್ನು ನೀಡಲು ಪ್ರಪಂಚದಾದ್ಯಂತ ಗಮನಾರ್ಹ ಸಸ್ಯ ಸಂರಕ್ಷಣ ತಜ್ಞರನ್ನು ಆಹ್ವಾನಿಸುತ್ತದೆ.
ಸಸ್ಯ ಸಂರಕ್ಷಣ ವಿಜ್ಞಾನಕ್ಕೆ ಡಾ. ಚಂದ್ರನಾಯಕ ಅವರ ಮಹತ್ವದ ಕೊಡುಗೆಗಳನ್ನು ಗುರುತಿಸಿ ಕೊಲೊರಾಡೋ ಸ್ಟೇಟ್ ಯೂನಿವರ್ಸಿಟಿ ಅಧ್ಯಕ್ಷ ಜಾನ್ ಇ.ಲೀಚ್, ಲಿಯಾನ್ ವಿಶ್ವವಿದ್ಯಾನಿಲಯದ ಐಸಿಪಿಪಿ ಸಂಘಟನಾ ಅಧ್ಯಕ್ಷ ನಥಾಲಿ ಪೌಸೆರೊ ಅವರು ಫ್ರಾನ್ಸ್ ಐಸಿಪಿಪಿ ಕಾಂಗ್ರೆಸ್ ಗೌರವ ನೋಂದಣಿಯನ್ನು ವಿಸ್ತರಿಸಿದ್ದಾರೆ. ಐಸಿಪಿಪಿ ಸಮ್ಮೇಳನದಲ್ಲಿ ಸುಸ್ಥಿರ ಆಹಾರ ವ್ಯವಸ್ಥೆಗಳಿಗಾಗಿ ಆಹಾರ ಭದ್ರತೆ ಎಂಬವಿಷಯದ ಅಡಿಯಲ್ಲಿ ಏಷ್ಯಾ ಮತ್ತು ಆಫ್ರಿಕಾಕ್ಕೆ ಮಿಲ್ಲೆಟ್ಸ್-ಭವಿಷ್ಯದ ಆಹಾರ:ಪ್ರಾಮುಖ್ಯತೆ, ಜೈವಿಕ ನಿರ್ಬಂಧಗಳು ಮತ್ತು ಅವುಗಳ ನಿರ್ವಹಣೆ ಕುರಿತು ಆಗಸ್ಟ್ 22ರಂದು ಆಹ್ವಾನಿತ ಉಪನ್ಯಾಸ ನೀಡಲು ಡಾ.ಚಂದ್ರ ಅವರನ್ನು ಫ್ರಾನ್ಸ್ ದೇಶಕ್ಕೆ ಆಹ್ವಾನಿಸಿದ್ದಾರೆ.
ಈ ಸಭೆಯಲ್ಲಿ 88 ರಾಷ್ಟ್ರಗಳ 300ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸುತ್ತಿದ್ದಾರೆ. ಐಸಿಪಿಪಿಯಿಂದ ಆಹ್ವಾನಿತ ಭಾಷಣವನ್ನು ನೀಡಲು ಆಹ್ವಾನವನ್ನು ಸ್ವೀಕರಿಸಿದ ಐದು ಭಾರತೀಯ ವಿಜ್ಞಾನಿಗಳಲ್ಲಿ ಡಾ.ಚಂದ್ರನಾಯಕ ಕೂಡ ಸೇರಿದ್ದಾರೆ. ಡಾ.ಚಂದ್ರನಾಯಕ ಅವರು ಫೆಲೊ -ರಾಯಲ್ ಸೊಸೈಟಿ ಆಫ್ ಬಾಂಲಜಿ, ಲಂಡನ್, (ಯುಕೆ), ಫೆಲೊ – ಲಿನ್ನಿಯನ್ ಸೊಸೈಟಿ; ಲಂಡನ್, (ಯುಕೆ), ಮತ್ತು ಫೆಲೋ – ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಕರ್ನಾಟಕ ಸರ್ಕಾರ ದಿಂದ ಸರ್ ಸಿ ವಿ ರಾಮನ್ ಪ್ರಶಸ್ತಿ ಮತ್ತು ಭಾರತ ಸರ್ಕಾರ-ದಿಂದ ಅತ್ಯುತ್ತಮ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಈ ಲೇಖನಗಳನ್ನು ೫,೦೦೦ ಕ್ಕಿಂತ ಹೆಚ್ಚು ಬಾರಿ ಉಲ್ಲೇಖಿಸಲಾಗಿದ್ದು, ೪೩-ಎಚ್ ಸೂಚಿಕೆಗಳು ಹೊಂದಿವೆ. ಇವರು ಮೈಸೂರಿನ ಪಡುವಾರಹಳ್ಳಿ ಗ್ರಾಮದ ದಿವಂಗತ ಸಿದ್ದಯ್ಯ ಮತ್ತು ದಿವಂಗತ ಸರಸ್ವತಿ ದಂಪತಿಯ ಪುತ್ರರಾಗಿದ್ದಾರೆ.