ಚೆಸ್  ಅಟ ಮಾತ್ರವಲ್ಲದೆ ಬುದ್ಧಿಮತ್ತೆ, ತಂತ್ರಜ್ಞಾನ, ಯುದ್ಧತಂತ್ರ ಮತ್ತು ಮಾನಸಿಕ ಶಕ್ತಿಯ ಸಂಕೇತ -ಡಾ.ಈ.ಸಿ.ನಿಂಗರಾಜ್ ಗೌಡ.

ಮೈಸೂರು,ಫೆಬ್ರವರಿ,3,2025 (www.justkannada.in): ಚದುರಂಗ (ಚೆಸ್) ಆಟವು ವಿಶ್ವದ ಅತ್ಯಂತ ಪುರಾತನ ಬುದ್ಧಿಮತ್ತೆಯ ಆಟಗಳಲ್ಲಿ ಒಂದಾಗಿದ್ದು, ಇದರ ಮೂಲ ಭಾರತದಲ್ಲಿದೆ. ಈ ಆಟವು ಶತಮಾನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ, ಭೌಗೋಳಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ಅನುಭವಿಸಿದೆ. ಚದುರಂಗವು ಕಲ್ಪನೆ, ತಂತ್ರಜ್ಞಾನ, ರಾಜಕೀಯ ಯುದ್ಧ ಮತ್ತು ಕೌಶಲ್ಯಗಳ ಸಂಯೋಜನೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.

ಮೈಸೂರಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ರಾಪಿಡ್ ಚೆಸ್ ಟೂರ್ನಮೆಂಟ್ -2025 ಉದ್ಘಾಟಿಸಿ ಮಾತನಾಡಿದ ಅವರು ಚದುರಂಗ ಆಟದ ಮೂಲವನ್ನು 6ನೇ ಶತಮಾನದಲ್ಲಿ ಭಾರತದಲ್ಲಿ ಕಂಡುಹಿಡಿಯಲಾಗಿದೆ. ಸಂಸ್ಕೃತದಲ್ಲಿ “ಚತುರ್” ಎಂದರೆ ನಾಲ್ಕು ಮತ್ತು “ಅಂಗ” ಎಂದರೆ ಅಂಗಗಳು ಅಥವಾ ಘಟಕಗಳು. ಈ ನಾಲ್ಕು ಘಟಕಗಳು ಪ್ರಾಚೀನ ಯುದ್ಧದ ಮುಖ್ಯ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಆಶ್ವ : ಕುದುರೆ ಪಡೆ, ಗಜ (ಎಲೆಫ್ಯಾಂಟ್): ಆನೆ ಪಡೆ, ರಥ (ರಥ): ರಥ ಪಡೆ, ಪದಾತಿ (ಪಾದಾಟಿಕ): ಕಾಲುನಡೆ ಪಡೆ ಎಂದರು.

ಈ ಆಟವನ್ನು ಪ್ರಾಚೀನ ಭಾರತೀಯ ರಾಜಕೀಯ ಮತ್ತು ಯುದ್ಧತಂತ್ರದ ಒಂದು ಮಾದರಿಯಾಗಿ ಬಳಸಲಾಗುತ್ತಿತ್ತು. ಭಾರತ ದೇಶದಿಂದ ಚದುರಂಗ ಆಟವು ಪರ್ಷಿಯಾ (ಇಂದಿನ ಇರಾನ್) ಗೆ ಹೋದಾಗ, ಇದನ್ನು “ಶತ್ರಂಜ್” ಎಂದು ಕರೆಯಲಾಯಿತು. ಪರ್ಷಿಯನ್ ಸಾಮ್ರಾಜ್ಯದಲ್ಲಿ ಈ ಆಟ ಹೆಚ್ಚು ಜನಪ್ರಿಯವಾಯಿತು ಮತ್ತು ನಂತರ ಅರಬ್ ಸಾಮ್ರಾಜ್ಯದ ಮೂಲಕ ಪಶ್ಚಿಮ ವಿಶ್ವಕ್ಕೆ ಪ್ರವೇಶಿಸಿತು. ಅರ್ಬಿಕ್ ಭಾಷೆಯಲ್ಲಿ “ಶಾಹ್ ಮಾಟ್” ಎಂದರೆ “ರಾಜನಿಗೆ ಸೋಲು” ಎಂಬ ಅರ್ಥ, ಇದರಿಂದಲೇ ಇಂದಿನ “ಚೆಸ್” ಆಟದಲ್ಲಿ “ಚೆಕ್‌ಮೇಟ್” ಪದವು ಬಂದಿರುತ್ತದೆ. ಯುರೋಪಿನಲ್ಲಿ ಈ ಆಟವನ್ನು Chess ಎಂದು ಕರೆಯಲಾಗುತ್ತೀತ್ತು ಎಂದು ತಿಳಿಸಿದರು.

ಭಾರತದ ಚದುರಂಗ ಆಟವು ಕೇವಲ ಮನರಂಜನೆಯ ಆಟವಲ್ಲದೆ, ಬುದ್ಧಿವಂತರಿಗೆ ತಂತ್ರಜ್ಞಾನ, ತಾಳ್ಮೆ ಮತ್ತು ತೀರ್ಮಾನ ಕೈಗೊಳ್ಳುವ ಕೌಶಲ್ಯಗಳನ್ನು ಕಲಿಸುವ ಸಾಧನವಾಗಿದೆ. ಭಾರತೀಯ ಚೆಸ್ ಪಿತಾಮಹ ವಿಶ್ವನಾಥನ್ ಆನಂದ್, ಪೆಂಟಲಾ ಹರಿಕೃಷ್ಣ, ಗುಕೇಶ್ ಕುಮಾರ್ ಮತ್ತು ಇತ್ತೀಚಿನ ಯುವ ತಾರೆಗಳು ಭಾರತದ ಚೆಸ್ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಚದುರಂಗ ಆಟವು ಕಾಲಾಂತರದಲ್ಲಿ ಅಸಂಖ್ಯಾತ ಬದಲಾವಣೆಗಳನ್ನು ಅನುಭವಿಸಿದರೂ ಅದರ ಮೂಲ ತಾತ್ವಿಕತೆಯನ್ನು ಕಾಪಾಡಿಕೊಂಡಿದೆ. ಇದೊಂದು ಆಟ ಮಾತ್ರವಲ್ಲದೆ ಬುದ್ಧಿಮತ್ತೆ, ತಂತ್ರಜ್ಞಾನ, ಯುದ್ಧತಂತ್ರ ಮತ್ತು ಮಾನಸಿಕ ಶಕ್ತಿಯ ಸಂಕೇತವಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.

ರಾಪಿಡ್ ಚೆಸ್‌ ಆಟ ಆಡುವುದರಿಂದ ವೇಗ ಹಾಗೂ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ. ಹೆಚ್ಚು ಸಮಯವಿಲ್ಲದ ಟೂರ್ನಮೆಂಟ್‌ ಗಳಲ್ಲಿ ಜನಪ್ರಿಯವಾಗಿದ್ದು, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ. ಚೆಸ್‌ ನ ಕ್ರಿಯಾತ್ಮಕ ಶೈಲಿ ಹಾಗೂ ತಂತ್ರಜ್ಞಾನದ ವೇಗವನ್ನು ಪ್ರದರ್ಶಿಸುತ್ತದೆ. ಭಾರತದಲ್ಲಿ ರಾಪಿಡ್ ಚೆಸ್ ಅತ್ಯಂತ ಜನಪ್ರಿಯವಾಗಿದ್ದು, ಕರ್ನಾಟಕದಲ್ಲಿಯೂ ಅನೇಕ ರಾಪಿಡ್ ಚೆಸ್ ಟೂರ್ನಮೆಂಟ್‌ ಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದ್ದೂ, ಮೈಸೂರಿನ ಮಕ್ಕಳಿಗೂ ಅನುಕೂಲವಾಗಲೆಂದೂ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿರವರಾದ ಎಲ್.ರವಿ ರವರು ರಾಪಿಡ್ ಚೆಸ್ ಟೂರ್ನಮೆಂಟ್, ಅಥ್ಲೇಟಿಕ್ಸ್ ಕ್ರೀಡಾಕೂಟ, ವಿಜ್ಞಾನ ಮೇಳ, ಸಾಂಸ್ಕೃತಿಕ ಸ್ಪರ್ಧೆಗಳನ್ನೂ ಎಲ್ಲಾ ಶಾಲೆಯ ಮಕ್ಕಳಿಗೂ ಆಯೋಜಿಸುತ್ತೀರುವುದನ್ನೂ ಡಾ.ಈ.ಸಿ.ನಿಂಗರಾಜ್ ಗೌಡ  ಅವರು ಶ್ಲಾಘಿಸಿದರು.

ಮೈಸೂರು ಜಿಲ್ಲೆಯ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ 2036 ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದರೊಂದಿಗೆ ಭಾರತದ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಮತ್ತು ನೆರದಿದ್ದ ಪೋಷಕರಲ್ಲಿ ಡಾ.ಈ.ಸಿ.ನಿಂಗರಾಜ್ ಗೌಡ ಅವರು ವಿನಂತಿಸಿಕೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನೆಹರು ಯುವಕ ಕೇಂದ್ರದ ನಿವೃತ್ತ ನಿರ್ದೇಶಕಎಂ.ಎನ್.ನಟರಾಜ್ ಅವರು ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನವರು ಉತ್ತಮ ಮೂಲಭೂತ ಸೌಕರ್ಯದ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ(NEP) ಯಡಿಯಲ್ಲಿ ಶಿಕ್ಷಣ ನೀಡುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ, ವೈಜ್ಞಾನಿಕ, ಪರಿಸರ ಕಾಳಜಿ, ಕ್ರೀಡೆಗಳಿಗೂ ಒತ್ತು ನೀಡುತ್ತೀರುವುದಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಡಾ.ದೀಪ್ತಿ ಚತುರ್ವೇದಿ ರವರು ವಹಿಸಿದ್ದರು. ನಾಗೇಂದ್ರ, ಸಂದೀಪ ನಾಯರ್ , ಜಯಶ್ರೀ ಅವರು ಹಾಗೂ ಮೈಸೂರಿನ 34 ಶಾಲೆಗಳಿಂದ 112 ವಿದ್ಯಾರ್ಥಿಗಳು, ಶಾಲೆಯ ಎಲ್ಲಾ ಸಿಬ್ಭಂದಿ ಮತ್ತು ನೂರಾರು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Key words: Chess, game, symbol of intelligence, technology,mental strength, Dr. E.C. Ningaraj Gowda.