ಬೆಂಗಳೂರು, ಜನವರಿ,18,2025 (www.justkannada.in): ಪರಿಶಿಷ್ಟರ ಹಣ ಸಾಮಾಜಿಕ ಹೂಡಿಕೆಯಾಗಬೇಕೇ ಹೊರತು ಸಾಮಾಜಿಕ ಖರ್ಚಾಗಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಹೇಳಿದರು.
ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ SCSP ನೋಡಲ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ನಂತರ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ನಿಗದಿತ ಅವಧಿಯ ಒಳಗಾಗಿ SCSP ಅನುದಾನವನ್ನು ಬಳಸಿಕೊಂಡು ಪರಿಶಿಷ್ಟರ ಅಭಿವೃದ್ಧಿಗೆ flag ship ಯೋಜನೆಗಳನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಹಕಾರಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟರ ನೊಂದಾವಣೆ ಮಾಡಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ SCSP ಹಣವನ್ನು ಪಡೆಯುವ ಇಲಾಖೆಗಳು ಸುಮ್ಮನೇ ಹಣ ಖರ್ಚು ಮಾಡದೇ ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ಮಾಡುವ ಮೂಲಕ ಪರಿಶಿಷ್ಟ ಸಮುದಾಯದ ಹಣ ಸದ್ಬಳಕೆಯತ್ತ ಗಮನ ಹರಿಸಬೇಕೆಂದು ತಿಳಿಸಲಾಯಿತು. ಅಧಿಕಾರಿಗಳು ಮೌಲ್ಯಮಾಪನದ ಕಡೆ ಹೆಚ್ಚು ಗಮನ ಹರಿಸಿ, ವಸತಿ ಇಲ್ಲದ ಜನರು ಎಷ್ಟು ಮಂದಿ ಇದ್ದಾರೆ, ಕೃಷಿಯಲ್ಲಿ ತೊಂದರೆ ಅನುಭವಿಸುತ್ತಿರುವ ಪರಿಶಿಷ್ಟ ಸಮುದಾಯದವರು ಎಷ್ಟು ಮಂದಿ ಇದ್ದಾರೆ ಮತ್ತು ಯಾರಿಗೆಲ್ಲಾ ನಾವು ಉದ್ಯಮಗಳನ್ನು ಮಾಡಲು, ಕೌಶಲ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂಬುದರ ಕುರಿತು ಅಧಿಕಾರಿಗಳು ನೇರವಾಗಿ ಜನರ ಬಳಿ ಹೋಗಿ ವಾಸ್ತವಗಳನ್ನು ಅರಿಬೇಕೆಂದು ಸೂಚಿಸಿದ್ದೇನೆ ಎಂದರು.
ಇನ್ನು ಪರಿಶಿಷ್ಟ ಸಮುದಾಯದವರಿಗೆ ಮನೆ ಕಟ್ಟಲು 5 ಲಕ್ಷ ರೂಪಾಯಿಯ ಯುನಿಟ್ ಫಂಡ್ ಅನ್ನು ನಿಗದಿಗೊಳಿಸುವ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚಿಸುವುದಾಗಿ ತಿಳಿಸಿದೆ. ಉನ್ನತ ಶಿಕ್ಷಣ ಮಾಡುತ್ತಿರುವ ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅವರಿಗೆ ಬರಬೇಕಾದ ವಿದ್ಯಾರ್ಥಿ ವೇತನವನ್ನು ನಿಗದಿತ ಸಮಯಕ್ಕೆ ಕಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವೇಳೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಕೆಲವೊಂದು ಗೊಂದಲ ಉಂಟಾಗಿದ್ದು ಈ ಗೊಂದಲವನ್ನು ಶೀಘ್ರದಲ್ಲಿ ಪರಿಹಾರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇನ್ನು ಸರ್ಕಾರದ ಎಲ್ಲಾ ಇಲಾಖೆಗಳೂ ಕೂಡಾ ಪರಿಶಿಷ್ಟರ ಹಣವನ್ನು ಸಾಮಾಜಿಕ ಖರ್ಚು ( Social Expenditure) ಎಂದು ಭಾವಿಸದೇ ಅದನ್ನು ಸಾಮಾಜಿಕ ಹೂಡಿಕೆ ( Social Investment ) ಆಗಿ ವಿನಿಯೋಗಿಸಿದರೆ ಮಾತ್ರ ಪರಿಶಿಷ್ಟರ ಏಳಿಗೆ ಸಾಧ್ಯ ಎಂಬುದಾಗಿ ತಿಳಿಸಿದೆ. ಇನ್ನು ನಿಗದಿತ ಅವಧಿಯಲ್ಲಿ ಹಣ ಖರ್ಚು ಮಾಡದೇ SCSP/TSP ಕಾಯ್ದೆಯ ಆಶಯಗಳನ್ನು ಮರೆತು, ನಿಯಮಬಾಹಿರವಾಗಿ ವರ್ತಿಸಿದರೆ ಮತ್ತು ಅನುದಾವನ್ನು ಬಳಸುವಲ್ಲಿ ನಿರ್ಲಕ್ಷ್ಯ ತೋರಿದರೆ ಸಮಾಜ ಕಲ್ಯಾಣ ಇಲಾಖೆಯು ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ಖರ್ಚಾಗದ ಹಣವನ್ನು ಹಿಂಪಡೆದು, ಪರಿಶಿಷ್ಟ ಸಮುದಾಯಗಳಿಗೆ ಪೂರಕ ಯೋಜನೆಗಳನ್ನು ನೀಡಲಿದೆ ಎಂಬ ಸಂಗತಿಯನ್ನು ಸಭೆಯಲ್ಲಿ ತಿಳಿಸಿದ್ದೇನೆ ಎಂದರು.
Key words: SC, money, social investment, Minister, Dr. H. C. Mahadevappa