ISRO ಸ್ಪೇಡೆಕ್ಸ್ ಯೋಜನೆ ಯಶಸ್ವಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದನೆ

ಬೆಂಗಳೂರು,ಜನವರಿ,17,2025 (www.justkannada.in): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆಯ ಯಶಸ್ವಿಯಾದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ  ಡಾ. ನಿರ್ಮಲಾನಂದನಾಥ ಸ್ವಾಮೀಜಿ  ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಇಸ್ರೋ ಕಾರ್ಯವನ್ನು ಶ್ಲಾಘಿಸಿರುವ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು, “ಸ್ಪೇಡೆಕ್ಸ್ ಯೋಜನೆ ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಇಸ್ರೋದ ನಿಕಟ ಪೂರ್ವ ಅಧ್ಯಕ್ಷ ಎಸ್ ಸೋಮನಾಥ್, ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ನಾರಾಯಣನ್, ಇಸ್ರೋದ ಅಸಾಧಾರಣ ವಿಜ್ಞಾನಿಗಳು ಮತ್ತು ಔದ್ಯಮಿಕ ಸಹಯೋಗಿಗಳಿಗೆ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆ, ಬಾಹ್ಯಾಕಾಶದಲ್ಲಿ ಉಪಗ್ರಹಗಳ ಡಾಕಿಂಗ್ ಸಾಮರ್ಥ್ಯ ಗಳಿಸಿರುವ ಕೇವಲ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮುವಂತೆ ಮಾಡಿದೆ. ಇದು ಇಸ್ರೋ ಹೊಂದಿರುವ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದು, ಮುಂದಿನ ತಲೆಮಾರುಗಳಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಕುರಿತು ಆಸಕ್ತಿ ಮತ್ತು ಸ್ಫೂರ್ತಿ ನೀಡಿದೆ” ಎಂದು ತಿಳಿಸಿದ್ದಾರೆ.

“ಸ್ಪೇಡೆಕ್ಸ್ ಯೋಜನೆ ತನ್ನ ಉಡಾವಣಾ ವಾಹನದ ನಾಲ್ಕನೇ ಹಂತವಾದ ಪೋಯಮ್-4ನಲ್ಲಿ (POEM-4) ಇಸ್ರೋ, ಶಿಕ್ಷಣ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ ಗಳು ನಿರ್ಮಿಸಿದ ಪೇಲೋಡ್‌ ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು. ಈ ಪೇಲೋಡ್‌ ಗಳಲ್ಲಿ, ಆದಿಚುಂಚನಗಿರಿ ಮಠದ ಬಿಜಿಎಸ್ ಅರ್ಪಿತ್ ಪೇಲೋಡ್ ಸಹ ಸೇರಿತ್ತು. ಈಗಾಗಲೇ ಬಾಹ್ಯಾಕಾಶ ಸೇರಿರುವ ಈ ಪೇಲೋಡ್, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನವೀನ ತಂತ್ರಜ್ಞಾನ ಜಾಗತಿಕ ಅಮೆಚೂರ್ ಕ್ಲಬ್‌ ಗಳಿಗೆ ಬೆಂಬಲ ಒದಗಿಸಲಿದೆ. ಈ ಯೋಜನೆ ಯಶಸ್ವಿಯಾಗುವಂತೆ ಸಹಕಾರ ನೀಡಿದ ಇಸ್ರೋ ಸಂಸ್ಥೆಗೆ ಆದಿಚುಂಚನಗಿರಿ ಮಠ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ” ಎಂದು  ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

Key words: ISRO, Spadex project, success, Dr. Nirmalanandanatha Swamiji