ಮೈಸೂರು,ಡಿಸೆಂಬರ್,29,2023(www.justkannada.in): ಕನ್ನಡದ ಖ್ಯಾತ ಸಾಹಿತಿ, ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿಯನ್ನು ಅವರ ಅನುಮತಿಯಿಲ್ಲದೆ ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸಿ ಕಾಪಿ ರೈಟ್ ಉಲ್ಲಂಘಿಸಿದ್ದ ಹೈದರಾಬಾದಿನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ವತ್ಸಲಾ ಅವರು ರೂ.5,05,000 ನಷ್ಟ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
ಪ್ರಕರಣದ ವಿವರ:
ಕನ್ನಡದ ಖ್ಯಾತ ಸಾಹಿತಿ,ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು 1960 ರ ದಶಕದಲ್ಲಿ ಪ್ರಕಟವಾದ ವಂಶವೃಕ್ಷ ಸೇರಿದಂತೆ 25 ಪ್ರಸಿದ್ಧ ಕಾದಂಬರಿಗಳನ್ನು ರಚಿಸಿದ್ದಾರೆ. ವಂಶವೃಕ್ಷ ಕಾದಂಬರಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿತ್ತು. ಈ ಕಾದಂಬರಿಯನ್ನು ಸ್ನಾತಕೋತ್ತರ ಪದವಿಯ ಪಠ್ಯವಾಗಿಯೂ ನಿಗದಿಪಡಿಸಲಾಗಿತ್ತು. ಈ ಕಾದಂಬರಿಯನ್ನು ಆಧರಿಸಿ ಕನ್ನಡ ಚಲನಚಿತ್ರವೂ ತೆರೆಕಂಡಿತ್ತು.
ಡಾ.ಎಸ್.ಎಲ್. ಭೈರಪ್ಪನವರು ತಮ್ಮ ವಂಶವೃಕ್ಷ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಎಂಬವರಿಗೆ ನೀಡಿದ್ದರು. ಅವರು ವಂಶವೃಕ್ಷ ಕಾದಂಬರಿಯನ್ನು ‘ವಂಶವೃಕ್ಷಂ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದರು. ಕೆಲವು ವರ್ಷಗಳ ಹಿಂದೆ ಸನಗರಂ ನಾಗಭೂಷಣಂ ಅವರು ನಿಧನರಾದರು.
ಡಾ.ಎಸ್.ಎಲ್.ಭೈರಪ್ಪನವರು ವಂಶವೃಕ್ಷ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸಲು ಸನಗರಂ ನಾಗಭೂಷಣಂ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಅನುಮತಿ ನೀಡಿರಲಿಲ್ಲ.
ಹೈದರಾಬಾದಿನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ಸಂಪಾದಕಿ ವತ್ಸಲಾ ಅವರು ವಂಶವೃಕ್ಷಂ ಅನುವಾದಿತ ಕೃತಿಯನ್ನು ಹೊಸದಾಗಿ ಪ್ರಕಟಿಸಿದ್ದಾರೆಂಬ ಮಾಹಿತಿಯು ಡಾ.ಎಸ್.ಎಲ್.ಭೈರಪ್ಪನವರಿಗೆ ನವೆಂಬರ್ 2021ರ ಸಮಯದಲ್ಲಿ ತಿಳಿಯಿತು. ಆ ವಂಶವೃಕ್ಷಂ ಕೃತಿಯನ್ನು ಅವಲೋಕಿಸಿದಾಗ ‘ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ’ ಎಂಬ ಘೋಷಣೆಯು ಆ ಪುಸ್ತಕದಲ್ಲಿ ಇರುವುದು ಭೈರಪ್ಪನವರ ಗಮನಕ್ಕೆ ಬಂತು. ವಂಶವೃಕ್ಷ ಕೃತಿಯನ್ನು ತೆಲುಗು ಭಾಷೆಗೆ ಅನುವಾದ ಮಾಡಿ ಮರುಮುದ್ರಿಸುವ ಹಕ್ಕನ್ನು ವತ್ಸಲಾ ಅವರಿಗೆ ಭೈರಪ್ಪನವರು ಎಂದಿಗೂ ನೀಡಿರಲಿಲ್ಲ. ಆ ಮೂಲಕ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ವತ್ಸಲಾ ಅವರು ಕಾಪಿ ರೈಟ್ ಕಾಯಿದೆಯನ್ನು ಉಲ್ಲಂಘಿಸಿದ್ದರು. ತೆಲುಗು ಅನುವಾದಿತ ವಂಶವೃಕ್ಷಂ ಕೃತಿಯ 1000 ಪ್ರತಿಯನ್ನು ಅನಧಿಕೃತವಾಗಿ ಮುದ್ರಿಸಿದ್ದ ವತ್ಸಲಾ ಅವರು ಸದರಿ ಪುಸ್ತಕಕ್ಕೆ ರೂ. 360 ಬೆಲೆ ನಿಗದಿಪಡಿಸಿದ್ದರು.
ಈ ವಿಚಾರ ತಿಳಿದೊಡನೆ ಡಾ.ಎಸ್.ಎಲ್.ಭೈರಪ್ಪನವರು 15.11.2021 ರಂದು ತನ್ನ ವಕೀಲರ ಮೂಲಕ ವತ್ಸಲಾ ಅವರಿಗೆ ನೋಟೀಸು ನೀಡಿ ಅನಧಿಕೃತವಾಗಿ ಪ್ರಕಟಿಸಿದ ವಂಶವೃಕ್ಷಂ ಕಾದಂಬರಿಯ ಪ್ರತಿಗಳನ್ನು ಮಾರಾಟ ಮಾಡದಂತೆ, ಹಾಗೂ ಮುದ್ರಿತ ಪ್ರತಿಗಳನ್ನು ತನಗೆ ಒಪ್ಪಿಸಬೇಕೆಂದೂ ಸೂಚಿಸಿದ್ದರು. ಹಾಗೂ ವತ್ಸಲಾ ಅವರು ಮಾಡಿದ ಈ ಕಾನೂನು ಬಾಹಿರ ಕೃತ್ಯಕ್ಕಾಗಿ 5 ಲಕ್ಷ ರೂಪಾಯಿಗಳನ್ನೂ ನೀಡುವಂತೆಯೂ ಸೂಚಿಸಿ ನೋಟೀಸು ನೀಡಿದ್ದರು.
ಸದರಿ ನೋಟೀಸಿಗೆ ವತ್ಸಲಾ ಅವರು ಸ್ಪಂದಿಸದೇ ಇದ್ದುದರಿಂದ ಅವರಿಂದ ರೂ.5,05,000 ರೂಪಾಯಿಗಳ ನಷ್ಟ ಪರಿಹಾರ ಕೊಡಿಸಬೇಕೆಂದು ಕೋರಿ ಡಾ.ಎಸ್.ಎಲ್.ಭೈರಪ್ಪನವರು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು.
ಸದರಿ ಪ್ರಕರಣದಲ್ಲಿ ಕೋರ್ಟ್ ಕಮಿಷನರ್ ಪಿ.ಜೆ.ರಾಘವೇಂದ್ರ ಅವರು ಡಾ.ಎಸ್.ಎಲ್.ಭೈರಪ್ಪನವರ ಮನೆಗೆ ತೆರಳಿ ಅವರ ಸಾಕ್ಷ್ಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು.
ಪ್ರಕರಣದ ವಾದ-ವಿವಾದವನ್ನು ಪರಿಶೀಲಿಸಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ ಹಿರೇಮಠ್ ಅವರು ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ವತ್ಸಲಾ ಅವರು 5,05,000 ರೂಪಾಯಿಗಳನ್ನು ಡಾ.ಎಸ್ ಎಲ್.ಭೈರಪ್ಪನವರಿಗೆ ನೀಡಬೇಕೆಂದೂ, ಮುದ್ರಿತ ವಂಶವೃಕ್ಷಂ ಕಾದಂಬರಿಯ ಎಲ್ಲಾ ಪ್ರತಿಗಳನ್ನು ಭೈರಪ್ಪನವರಿಗೆ ನೀಡುವಂತೆ ನಿರ್ದೇಶಿಸುವುದರ ಜೊತೆಗೆ ಅನುವಾದಿತ ವಂಶವೃಕ್ಷಂ ಕೃತಿಯನ್ನು ಮರುಮುದ್ರಿಸದಂತೆ ಹಾಗೂ ಮಾರಾಟ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿ ತೀರ್ಪುನೀಡಿದ್ದಾರೆ. ಡಾ.ಎಸ್.ಎಲ್.ಭೈರಪ್ಪನವರ ಪರವಾಗಿ ವಕೀಲ ಓ. ಶ್ಯಾಮ್ ಭಟ್ ವಕಾಲತ್ತು ವಹಿಸಿದ್ದರು.
Key words: Dr. SL Bhairappa- novel- Copyright- Violation-Mysore Court -orders -compensation.