ಮಂಗಳೂರು.ಮೇ.17,2022(www.justkannada.in): ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಿರುವುದಕ್ಕೆ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್ ಹರೀಶ್ ಆಚಾರ್ಯ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಸಿಂಡಿಕೇಟ್ ಸಭೆಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳು ತಮ್ಮ ಆಡಳಿತ ಕಚೇರಿ ಅಥವಾ ತಮ್ಮ ಕಾರ್ಯವ್ಯಾಪ್ತಿಯೊಳಗೆ ಸಿಂಡಿಕೇಟ್ ಸಭೆಯನ್ನು ನಡೆಸುವುದು ನಿಯಮವಾಗಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಈ ನಿಯಮವನ್ನು ಪಾಲಿಸುತ್ತಿವೆ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ಅನಗತ್ಯವಾಗಿ ದುಂದುವೆಚ್ಚವನ್ನು ಮಾಡಿ ಸಿಂಡಿಕೇಟ್ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿರುವ ಕುಲಪತಿಗಳ ಕ್ರಮ ಡಂಭಾಚಾರದಿಂದ ಕೂಡಿದೆ ಎಂದು ಹರೀಶ್ ಆಚಾರ್ಯ ಟೀಕಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು 15ಕ್ಕಿಂತ ಹೆಚ್ಚು ಸಿಂಡಿಕೇಟ್ ಸದಸ್ಯರು ಮತ್ತು ಸಿಂಡಿಕೇಟ್ ವಿಭಾಗದ 10ಕ್ಕಿಂತ ಹೆಚ್ಚು ಸಿಬ್ಬಂದಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಿ ಬೆಂಗಳೂರಿನ ಐಷಾರಾಮಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ಇರಿಸಿಕೊಂಡು ಅನಗತ್ಯ ದುಂದುವೆಚ್ಚವನ್ನು ಮಾಡಿದ್ದಾರೆ .ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯಗಳು ಇದುವರೆಗೆ ತಮ್ಮ ಕಾರ್ಯವ್ಯಾಪ್ತಿಯಿಂದ ಹೊರಗೆ ಸಿಂಡಿಕೇಟ್ ಸಭೆಯನ್ನು ಮಾಡಿರುವುದಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯವೂ ಇದುವರೆಗೆ ತನ್ನ ಕಾರ್ಯವ್ಯಾಪ್ತಿಯಿಂದ ಹೊರಗಡೆ ಸಿಂಡಿಕೇಟ್ ಸಭೆಯನ್ನು ನಡೆಸಿರುವುದಿಲ್ಲ. ಅಂತಹುದರಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಸಿಂಡಿಕೇಟ್ ಸಭೆಯನ್ನು ನಡೆಸಿರುವ ಔಚಿತ್ಯವಾದರೂ ಏನಿತ್ತು. ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಯಲ್ಲಿ ಚರ್ಚಿಸುವ ಕಾರ್ಯಸೂಚಿಗಳನ್ನು ಬೆಂಗಳೂರಿಗೆ ವರ್ಗಾಯಿಸಿ ಅಲ್ಲಿ ಸಭೆ ನಡೆಸಿರುವುದು ಯಾವ ಪುರುಷಾರ್ಥದಿಂದ ಕೂಡಿದೆ ಎಂದು ಪ್ರಶ್ನೆ ಮಾಡಿರುವ ಅವರು ಇದು ಕುಲಪತಿಗಳು ತಮ್ಮ ಪದಾವಧಿಯ ಅಂತಿಮ ವರ್ಷದಲ್ಲಿ ಸಿಂಡಿಕೇಟ್ ಸದಸ್ಯರಿಗೆ ಖುಷಿಪಡಿಸಿ ಅವರನ್ನು ಓಲೈಸಿಕೊಳ್ಳಲು ಮತ್ತು ತಮ್ಮ ಅದಕ್ಷತೆ ಹಾಗೂ ಅಕ್ರಮಗಳನ್ನು ಮುಚ್ಚಿಹಾಕಲು ಮಾಡಿರುವ ತಂತ್ರಗಾರಿಕೆಯ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಈ ಸಿಂಡಿಕೇಟ್ ಸಭೆಯನ್ನು ನಡೆಸಲು ವಿಶ್ವವಿದ್ಯಾನಿಲಯಕ್ಕೆ ಖಂಡಿತವಾಗಿಯೂ ವಿಮಾನ ಪ್ರಯಾಣದ ವೆಚ್ಚ, ಎರಡು ದಿನ ಹೋಟೆಲ್ ವೆಚ್ಚ, ಸಭಾಭತ್ಯೆ, ಊಟ ತಿಂಡಿಎಲ್ಲವೂ ಸೇರಿ ಸುಮಾರು 5 ರಿಂದ 6 ಲಕ್ಷ ರೂಪಾಯಿಯಷ್ಟು ದುಂದುವೆಚ್ಚ ನಿಯಮಬಾಹಿರವಾಗಿ ತಗಲುತ್ತದೆ.ಇಡೀ ದೇಶವೇ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವಾಗ ಸಾಮಾನ್ಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪ್ರವೇಶ ಶುಲ್ಕವನ್ನು ಈ ರೀತಿಯಾಗಿ ದುಂದುವೆಚ್ಚ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ದುಂದುವೆಚ್ಚವನ್ನು ವಿಶ್ವವಿದ್ಯಾನಿಲಯವು ಪಾವತಿಸುವುದು ಆಕ್ಷೇಪಾರ್ಹವಾಗಿದೆ. ಈ ಬಗ್ಗೆ ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಸರಕಾರದ ಲೆಕ್ಕಪರಿಶೋಧಕರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Key words: Dr. SR Harish Acharya -objected – Mangalore university-Syndicate -meeting -Bangalore