ಪಠ್ಯಕ್ರಮ ಸುಧಾರಣೆಗೆ ಜಂಟಿ ಸಮಿತಿ ರಚನೆ: ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್

Joint committee to be formed to improve curriculum: Higher Education Minister Dr Sudhakar

ಬೆಂಗಳೂರು, Feb.13,2025: ಉದ್ಯಮಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಪಠ್ಯಕ್ರಮ ಬದಲಿಸಲು ಕೇಳುತ್ತಿರುವುದು ಸಾಧುವಲ್ಲ. ವಿದ್ಯಾರ್ಥಿಗಳ ಕಲಿಕೆ ಸಮಗ್ರವಾಗಿ ಇರಬೇಕಾಗಿದ್ದು, ಬಹುಮುಖಿಯಾದ ಕೌಶಲ್ಯಗಳನ್ನು ಕಲಿಸುವ ಅಗತ್ಯವಿದೆ. ಹೀಗಾದರೆ ಮಾತ್ರ ಯುವಜನರು ಒಂದಿಲ್ಲದಿದ್ದರೆ ಇನ್ನೊಂದು ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಿಕೊಳ್ಳಬಹುದು. ಆದ್ದರಿಂದ ಮುಂದಿನ ಹೆಜ್ಜೆ ಹೇಗಿರಬೇಕೆಂದು ನಿರ್ಧರಿಸಲು ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳಿರುವ ಜಂಟಿ ಸಮಿತಿಯನ್ನು ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಗುರುವಾರ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕ್ವಿನ್ ಯೋಜನೆ ಸಂಬಂಧ 30ಕ್ಕೂ ಹೆಚ್ಚು ಪ್ರತಿಷ್ಠಿತ ವಿ.ವಿ.ಗಳೊಂದಿಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಈ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕೂಡ ಇದ್ದರು.

ವಿ.ವಿ.ಗಳ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಸುಧಾಕರ್, `ಕಲಿಕೆ ಮತ್ತು ಶಿಕ್ಷಣದ ಸ್ವರೂಪವನ್ನು ಒಂದು ವಲಯಕ್ಕೆ ತಕ್ಕಂತೆ ಬದಲಿಸಲು ಸಾಧ್ಯವಿಲ್ಲ. ಅದರಿಂದ ಶಿಕ್ಷಣದ ವ್ಯಾಪ್ತಿ ಸೀಮಿತವಾಗಿ, ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಪರಿಪೂರ್ಣ ಕಲಿಕೆಯನ್ನು ನಾವು ಸಮಕಾಲೀನ ಜಗತ್ತಿಗೆ ತಕ್ಕಂತೆ ಮರುರೂಪಿಸಬೇಕು. ನಮ್ಮ ಪದವೀಧರರಿಗೆಲ್ಲ ಒಳ್ಳೆಯ ಉದ್ಯೋಗ ಸಿಗಬೇಕು. ಒಟ್ಟಾರೆ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ಯುಜಿಸಿ ಜತೆಯಲ್ಲೂ ಸಮಾಲೋಚಿಸಲಾಗುವುದು. ನಮ್ಮ ಯುವಜನರಿಗೆ ನಮ್ಮಲ್ಲೇ ವಿಶ್ವದರ್ಜೆಯ ಶಿಕ್ಷಣ ಸಿಕ್ಕಬೇಕಾದ್ದು ಮುಖ್ಯ’ ಎಂದರು.

ನಮ್ಮ ವಿ.ವಿ.ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇ.70ರಷ್ಟು ಮಂದಿ ಹೊರರಾಜ್ಯಗಳಿಂದ ಬರುವವರೇ ಆಗಿದ್ದಾರೆ. ಕ್ವಿನ್ ಸಿಟಿಯಲ್ಲಿ ಡೀಪ್-ಟೆಕ್ ನವೋದ್ಯಮಗಳು, ಬೃಹತ್ ಕಂಪನಿಗಳ ಆರ್ & ಡಿ ಕೇಂದ್ರಗಳನ್ನು ಬೆಂಬಲಿಸಲು ಸುಸಜ್ಜಿತ ಪರಿಪೋಷಣಾ ಕೇಂದ್ರಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ನುಡಿದರು.

9 ವಿ.ವಿ.ಗಳ ಜತೆ ಒಪ್ಪಂದ: ಎಂ ಬಿ ಪಾಟೀಲ

ಕ್ವಿನ್ ಸಿಟಿಯಲ್ಲಿ ಜಗತ್ತಿನ ಅತ್ಯುತ್ತಮ ವಿ.ವಿ.ಗಳು ಬರಲಿದ್ದು, ಸೆಂಟ್ ಜಾನ್ಸ್ ಮತ್ತು ಲಿವರ್ ಪೂಲ್ ಸೇರಿದಂತೆ 9 ವಿ.ವಿ.ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪಿಲಾನಿಯಲ್ಲಿರುವ ಹೆಸರಾಂತ ಬಿರ್ಲಾ ತಾಂತ್ರಿಕ ವಿಜ್ಞಾನಗಳ ಸಂಸ್ಥೆ (ಬಿಟ್ಸ್) ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಹೆಸರಾಗಿರುವ ವರ್ಲ್ಡ್ ಹಾರ್ಟಿ ಸೆಂಟರ್ ಮುಂತಾದ ಸಂಸ್ಥೆಗಳು ಕೂಡ ಯೋಜನೆಯ ಬಗ್ಗೆ ಆಸಕ್ತಿ ತೋರಿವೆ. ಇಂತಹ ಸಂಸ್ಥೆಗಳ ಜತೆ ಚರ್ಚೆ ಪ್ರಗತಿಯಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನುಡಿದರು.

ಹಲವು ದೇಶಗಳ ವಿ.ವಿ.ಗಳು ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯುವ ಒಲವು ತೋರಿಸಿವೆ. ಯುಜಿಸಿ ನಿಯಮಗಳು ಅಗ್ರಶ್ರೇಣಿಯ 500 ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಅವಕಾಶ ಕೊಟ್ಟಿವೆ. ಪಾಶ್ಚಾತ್ಯ ದೇಶಗಳ ವಿ.ವಿ.ಗಳು ಕಡಿಮೆ ಖರ್ಚಿನಲ್ಲೇ ಕ್ವಿನ್ ಸಿಟಿಯಲ್ಲಿ ನೆಲೆಯೂರಲು ನಿಚ್ಚಳ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅದರ ಅಭಿವೃದ್ಧಿಯ ನೇರ ಅನುಭವ ದೊರಕಿಸಿ ಕೊಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಉತ್ಕೃಷ್ಟತೆಯತ್ತ ವೈದ್ಯಕೀಯ ಶಿಕ್ಷಣ: ಡಾ.ಶರಣಪ್ರಕಾಶ್

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ ಮಾತನಾಡಿ, `ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿದ್ದು, ಪದವಿ ಹಂತದಲ್ಲಿ 11 ಸಾವಿರ ಮತ್ತು ಸ್ನಾತಕೋತ್ತರ ಹಂತದಲ್ಲಿ 6,000 ಸೀಟುಗಳ ಹಂಚಿಕೆಯಾಗುತ್ತಿದೆ. ರಾಜ್ಯವನ್ನು ಕೃತಕ ಬುದ್ಧಿಮತ್ತೆ, ಮತ್ತು ಪರಿಸರಸ್ನೇಹಿ ಇಂಧನ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕೌಶಲ್ಯಾಭಿವೃದ್ಧಿ ತಾಣವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಕೆಎಲ್ಇ ಸೊಸೈಟಿಯ ಡಾ.ಪ್ರಭಾಕರ ಕೋರೆ, ಪಿಇಎಸ್ ವಿ.ವಿ.ಯ ಜವಾಹರ್, ಆರ್ ವಿ ಶಿಕ್ಷಣ ಸಂಸ್ಥೆಯ ನಾಗರಾಜು ಉಪಸ್ಥಿತರಿದ್ದರು. ಮಿಕ್ಕಂತೆ ಬಿಎಲ್ಡಿಇ ಶಿಕ್ಷಣ ಸಂಸ್ಥೆ ಸೇರಿದಂತೆ ರಾಜ್ಯ, ದೇಶ ಮತ್ತು ವಿದೇಶಗಳ 30 ವಿ.ವಿ.ಗಳ ಪ್ರಮುಖರು ಇದ್ದರು.

key words: Joint committee, to be formed, to improve curriculum, Higher Education Minister Dr Sudhakar

SUMMARY:

Joint committee to be formed to improve curriculum: Higher Education Minister Dr Sudhakar