ಮೈಸೂರು, ಮೇ.21, 2024: (www.justkannada.in news) ಸರಕಾರದ ಚುಕ್ಕಾಣಿ ಯಾರೇ ಹಿಡಿಯಲಿ, ಸಂಕಷ್ಟಕ್ಕೀಡಾಗುವುದು ಮಾತ್ರ ಜನ ಸಾಮಾನ್ಯರು. ಇದಕ್ಕೆ ಜ್ವಲಂತ ಉದಾಹರಣೆ ಚಾಮರಾಜನಗರ ಆಕ್ಸಿಜನ್ ದುರಂತ. ಈ ಘಟನೆಗೆ ಒಂದು ಲಾಜಿಕ್ ಎಂಡ್ ಸಿಗುವ ಮುನ್ನವೇ ಮತ್ತೊಂದು ಘಟನೆ ವರದಿಯಾಗಿದೆ.
ಅದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಾಲುಂಡಿ ಗ್ರಾಮದಲ್ಲಿ ನಡೆದಿರುವ ಕಲುಷಿತ ನೀರು ಸೇವನೆ ಪ್ರಕರಣ.
ಕುಡಿಯುವ ನೀರಿನ ಪೈಪ್ ಜತೆಗೆ ಒಳಚರಂಡಿ ನೀರು ಸೇರಿದ ಪರಿಣಾಮ ಗ್ರಾಮದ ಜನರು ವಾಂತಿ,ಬೇಧಿಯಿಂದ ಬಳಲುವಂತಾಗಿದೆ. ಈ ಪ್ರಕರಣ ಗಂಭೀರವಾಗಲು ಕಾರಣ ಘಟನೆಯಲ್ಲಿ ಒರ್ವ ಯುವಕ ಮೃತಪಟ್ಟಿರುವುದು.
ಯುವಕನ ಸಾವಿನ ವಿಷಯ ತಿಳಿಯುತ್ತಿದ್ದಂತೆ ರಾಜಕಾರಣಿಗಳು ನಾಟಕ ಶುರು ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳುವ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜತೆಗೆ ಸರಕಾರದಿಂದ ಪರಿಹಾರ ಕೊಡಿಸುವ ಬೇಡಿಕೆ ಬೇರೆ. ವೈಯಕ್ತಿಕ ಪರಿಹಾರ ನೀಡಲು ಮುಂದಾದ ಮತ್ತೊಬ್ಬರು. ಒಟ್ಟಾರೆ ಇಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲ.
ಮೂರು ವರ್ಷಗಳ ಹಿಂದೆ ಕೊವಿಡ್ ಸಂದರ್ಭದಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ೩೬ ಮಂದಿ ಅಮಾಯಕರು ಮೃತಪಟ್ಟಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಚಾ.ನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸರಕಾರದ ವಿರುದ್ಧ ಹರಿಹಾಯ್ದಿದ್ದರು. ತನಿಖೆಗೆ ಆಗ್ರಹಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ಏನಾಯಿತು..?
ಈಗಲೂ ಅಷ್ಟೆ, ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಗೆ ಮುಡಾ ಅಧಿಕಾರಿಗಳೇ ಕಾರಣ ಎಂದು ರಾಜಕಾರಣಿಗಳು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ, ಕೆಂಡಾಮಂಡಲರಾಗಿ ಮುಡಾ ಇಂಜಿನಿಯರ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಮಾನತ್ತಿಗೆ ಒತ್ತಾಯಿಸಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಜಿ.ಟಿ.ದೇವೇಗೌಡ ಆರೋಪ ಮಾಡುತ್ತಿರುವ ಮುಡಾ ಇಂಜಿನಿಯರ್ ಟಿ.ಕೆ.ರವಿ, ಕರ್ತವ್ಯದಿಂದ ನಿವೃತ್ತಿಹೊಂದಿಯೇ ಐದಾರು ವರ್ಷಗಳಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ, ಇಂಜಿನಿಯರ್ ರವಿಯನ್ನು ಹೇಗೆ ಅಮಾನತ್ತು ಮಾಡಲಾಗುತ್ತದೆ..?
ಒಂದು ವೇಳೆ ಮುಡಾ ಇಂಜಿನಿಯರ್ ಕರ್ತವ್ಯ ಲೋಪ ಎಸಗಿದ್ದಲ್ಲಿ,, ಈ ಬಗ್ಗೆ ಮಾಹಿತಿ ಹೊಂದಿದ್ದ ಜನಪ್ರತಿನಿಧಿಗಳು, ಸ್ಥಳೀಯರು ಲೋಪ ಸರಿಪಡಿಸಲು ಯಾವ ಕ್ರಮ ಕೈಗೊಂಡಿದ್ದರು..? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಟ್ಟಾರೆ ಆಡಳಿತ ಯಂತ್ರದ ಬೇಜಾವಬ್ದಾರಿಗೆ ಒರ್ವ ಅಮಾಯಕ ಯುವಕ ಬಲಿಯಾಗಬೇಕಾಯಿತು.
ಏನಿದು ಆಕ್ಸಿಜನ್ ದುರಂತ?
ಮೇ 2ರಂದು 2021ರಂದು ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 36 ಜನರು ಮೃತಪಟ್ಟಿದ್ದರು. ಕೋವಿಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಐಸಿಯು ನಲ್ಲಿ ಇದ್ದ ರೋಗಿಗಳಿಗೆ ಆಕ್ಸಿಜನ್ ನೀಡಲು ಆಸ್ಪತ್ರೆಗೆ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ವೆಂಟಿಲೇಟರ್, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ 36 ಮಂದಿ ರೋಗಿಗಳು ಸಾವನ್ನಪ್ಪಿದ್ದರು.
ಆದರೆ ಈ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಅಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಈ ದುರಂತದ ತನಿಖೆಗಾಗಿ ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿತ್ತು.
ಆದರೆ, ಬಳಿಕ ವರದಿ ಏನಾಯಿತು. ಘಟನೆಯಲ್ಲಿ ತಪ್ಪಿತಸ್ಥರು ಯಾರು, ಅವರಿಗೆ ಏನು ಶಿಕ್ಷೆಯಾಯಿತು ಎಂಬುದು ಮಾತ್ರ ಚಿದಂಬರಂ ರಹಸ್ಯವಾಗಿಯೇ ಉಳಿದಿದೆ.
ಮೈಸೂರಿನ ಸಾಲುಂಡಿಯ ಕಲುಷಿತ ನೀರು ಸೇವನೆ ಪ್ರಕರಣ ಸಹ ಒಂದೆರೆಡು ದಿನ ಮಾಧ್ಯಮಗಳಲ್ಲಿ ಸುದ್ಧಿಯಾಗಿ ಬಳಿಕ ನೇಪಥ್ಯಕ್ಕೆ ಸರಿಯುತ್ತದೆ.
key words: Playing with people’s lives, Oxygen tragedy, drinking contaminated water, one dead, salundi, mysore
summary:
Whoever takes over the reins of the government, it is the common man who suffers. A vivid example of this is the Chamarajanagar oxygen tragedy. Another incident was reported before the incident could get a logic end.
The incident took place at Salundi village under Chamundeshwari Assembly constituency in Mysuru, the hometown of Chief Minister Siddaramaiah.
The people of the village are suffering from vomiting and diarrhea due to the accumulation of sewage water along with the drinking water pipe. The reason why the case is serious is the death of a youth in the incident.