ಮೈಸೂರು,ಡಿಸೆಂಬರ್.27,2022(www.justkannada.in) ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ಇಂದು ನಗರದ ಪುರಭವನದಲ್ಲಿ “ಅಪರಾಧ ತಡೆ ಮಾಸಾಚರಣೆ-2022” ರ ಸಂಬಂಧ ನಗರದ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ “ಅಪರಾಧ ನಿಯಂತ್ರಣ ಹಾಗೂ ಸಂಚಾರ ಅರಿವು ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ , ಸುಗಮ ಸಂಚಾರಕ್ಕೆ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಗುರುತಿಗೆ ಇರುವಂತಹ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಯೇ ಚಾಲನೆ ಮಾಡಬೇಕು. ಚಾಲನಾ ಪರವಾನಗಿ ಸೇರಿದಂತೆ ಇತರೆ ದಾಖಲೆಗಳನ್ನು ಹೊಂದಿರಬೇಕು ಎಂದರು.
ಚಾಲಕರು ದಾಖಲೆಯನ್ನು ಹೊಂದಿ ಪ್ರಯಾಣಿಕರಿಗೆ ಸುರಕ್ಷತೆಯಿಂದ ಸೇವೆ ಒದಗಿಸಿದಲ್ಲಿ ಮಾತ್ರ ಸಾರ್ಥಕ ಸೇವೆಯಾಗಲಿದೆ. ಅಕ್ರಮವಾಗಿ ದಾಖಲೆಗಳಿಲ್ಲದ ಚಾಲನಾ ಪರವಾನಗಿ ಇಲ್ಲದೆ ಚಲಾಯಿಸಿ ಪ್ರಯಾಣಿಕರಿಗೆ ಅಸುರಕ್ಷತೆ ಉಂಟು ಮಾಡಿದ್ದಲ್ಲಿ ಕಾನೂನು ರೀತ್ಯಾ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಟೋ –ಟ್ಯಾಕ್ಸಿ ಚಾಲಕರೆಂದರೆ ನಗರದಲ್ಲಿ ಪ್ರವಾಸಿ ಗೈಡ್ ಗಳಿದ್ದಂತೆ, ಪರಸ್ಥಳದಿಂದ ಬರುವ ಪ್ರಯಾಣಿಕರಿಗೆ ಶೋಷಣೆ ರಹಿತವಾಗಿ ಪ್ರಯಾಣದರವನ್ನು ಪಡೆದು ನಿಗದಿತ ಸ್ಥಳಕ್ಕೆ ಬಿಡಬೇಕು ಹಾಗೂ ನಿಮ್ಮ ವಾಹನಗಳಿಗಾಗಿ ನಿಗದಿಯಾಗಿರುವ ನಿಲ್ದಾಣಗಳಲ್ಲೆ ವಾಹನವನ್ನು ನಿಲ್ಲಿಸಬೇಕು. ಕಡ್ಡಾಯವಾಗಿ ವಿಮಾ ರಹಿತ ವಾಹನವನ್ನು ಓಡಿಸಬಾರದು. ಆದ್ದರಿಂದ ಪ್ರತಿಯೊಬ್ಬ ವಾಹನ ಮಾಲೀಕರು/ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಕರೆ ನೀಡಿದರು.
ಇದರೊಂದಿಗೆ ಯಾರಾದರೂ ಅನುಮಾನಿತ ವ್ಯಕ್ತಿಗಳು ನಿಮ್ಮ ವಾಹನದಲ್ಲಿ ಕಂಡು ಬಂದಲ್ಲಿ, ಅಪರಾಧ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಲು ಆಟೋ-ಟ್ಯಾಕಿ ಚಾಲಕರು ಪೊಲೀಸರಿಗೆ ನೆರವಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಪಿ ಎಂ.ಮುತ್ತುರಾಜ್, ಗೀತಾ ಪ್ರಸನ್ನ ಎಂ.ಎಸ್, ರಸ್ತೆ ಸಾರಿಗೆ ಸಂಚಾರ ವಿಭಾಗದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Key words: Drivers – follow- traffic rules – Mysore- Police Commissioner -B. Ramesh