ಬೆಂಗಳೂರು, ಅಕ್ಟೋಬರ್ 14, 2021 (www.justkannada.in): ಭಾರತ್ ಸೀರಿಸ್ (ಬಿಹೆಚ್-ಸೀರಿಸ್) ಅಡಿ ನೋಂದಣಿ ಆಗಿರುವಂತಹ ವಾಹನಗಳು, ‘ಕೆಎ’ ಸೀರಿಸ್ ನಡಿ ನೋಂದಣಿ ಆಗಿರುವ ವಾಹನಗಳಿಗಿಂತ ಅಗ್ಗವಾಗಬಹುದು. ಇದು, ಪ್ರಸ್ತುತ ರಾಜ್ಯದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ (ಎಂಓಆರ್ಟಿಹೆಚ್) ಆದೇಶದ ಪ್ರಕಾರ ‘ಬಿಹೆಚ್ ಸೀರಿಸ್’ ನೋಂದಣಿ ಪದ್ಧತಿಯ ಅನುಷ್ಠಾನಕ್ಕಾಗಿ ಸಿದ್ಧಗೊಳ್ಳುತ್ತಿರುವ ರಾಜ್ಯ ಸಾರಿಗೆ ಇಲಾಖೆ ವ್ಯಕ್ತಪಡಿಸಿರುವ ಭಯವಾಗಿದೆ.
ಈಗಾಗಲೇ ಕೆಲವು ರಾಜ್ಯಗಳು ಈ ಹೊಸ ನಿಯಮವನ್ನು ಅನುಷ್ಠಾನಗೊಳಿಸಿದ್ದು, ಈ ಕುರಿತಂತೆ ಸಾರಿಗೆ ಇಲಾಖೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ ಹಾಗೂ ‘ಬಿಹೆಚ್ ಸೀರಿಸ್’ ನೋಂದಣಿ ಪದ್ಧತಿ ಜಾರಿಯಾದ ನಂತರ ಹಣಕಾಸು ಇಲಾಖೆಯ ಮೇಲೆ ಉಂಟಾಗಬಹುದಾಗಿರುವ ಪರಿಣಾಮಗಳ ಕುರಿತು ಇಲಾಖೆಗೆ ಮಾಹಿತಿಯನ್ನು ಒದಗಿಸಿದೆಯಂತೆ.
ಇಲಾಖೆಯು ಪತ್ರದಲ್ಲಿರುವ ಎಲ್ಲಾ ವಿವರಗಳನ್ನೂ ಹಂಚಿಕೊಂಡಿಲ್ಲ. ಆದರೂ ಸಹ ಹಿರಿಯ ಅಧಿಕಾರಿಗಳ ಪ್ರಕಾರ ‘ಬಿಹೆಚ್ ಸೀರಿಸ್’ ಅಡಿ ನೋಂದಣಿ ಆಗುವಂತಹ ವಾಹನಗಳ ಮೇಲೆ ವಿಧಿಸುವ ತೆರಿಗೆ ಕರ್ನಾಟಕದ ಸಾರಿಗೆ ಇಲಾಖೆ ವಿಧಿಸುವ ತೆರಿಗೆಗಿಂತ ಶೇ.೩ರಷ್ಟು ಕಡಿಮೆ ಇರುತ್ತದಂತೆ. ಉದಾಹರಣೆಗೆ ರಾಜ್ಯ ಸಾರಿಗೆ ಇಲಾಖೆ ರೂ.೨೦ ಲಕ್ಷ ಮೌಲ್ಯದ ಒಂದು ಕಾರಿನ ಮೇಲೆ ಶೇ.೧೮ ತೆರಿಗೆ ವಿಧಿಸುತ್ತಿದೆ. “ಅದೇ ‘ಬಿಹೆಚ್-ಸೀರಿಸ್’ ಅನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇದೇ ಮೌಲ್ಯದ ವಾಹನಕ್ಕೆ ಶೇ.೧೫ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಇಲಾಖೆಗೆ ಆದಾಯ ನಷ್ಟವುಂಟಾಗುತ್ತದೆ,” ಎನ್ನುತ್ತಾರೆ ಸಾರಿಗೆ ಇಲಾಖೆಯ ಆಯುಕ್ತ ಎನ್. ಶಿವಕುಮಾರ್.
ಇಲಾಖೆ ರಾಜ್ಯ ಸರ್ಕಾರದಿಂದ ಅನುಮತಿ ಬಂದ ಕೂಡಲೇ ಸಾರಿಗೆ ಇಲಾಖೆಯು ಬಿಹೆಚ್ ನೋಂದಣಿಯನ್ನು ಅನುಷ್ಠಾನಗೊಳಿಸಲು ಸಿದ್ಧವಾಗಿದೆ. “ನಮ್ಮ ಬಳಿ ಪ್ರಸ್ತುತ, ಬಿಹೆಚ್ ಸೀರಿಸ್ ಅನುಷ್ಠಾನಗೊಳಿಸಿದ ನಂತರ ನಾವು ಎದುರಿಸಬಹುದಾಗಿರುವಂತಹ ಆದಾಯ ಕೊರತೆಗೆ ಸಂಬಂಧಪಟ್ಟಂತೆ ಸ್ಪಷ್ಟವಾದ ಯಾವುದೇ ಅಂದಾಜು ಇಲ್ಲ. ಬಿಹೆಚ್ ಸೀರಿಸ್ ನ ವಾಹನಗಳಿಗೆ ವಿಧಿಸುವ ತೆರಿಗೆ ಕಡಿಮೆ ಇರುವುದರಿಂದಾಗಿ ವಾರ್ಷಿಕ ಆದಾಯ ಕಡಿತಗೊಳ್ಳಬಹುದು,” ಎಂದು ತಿಳಿಸಿದ್ದಾರೆ.
ವಾರ್ಷಿಕವಾಗಿ ಸಾರಿಗೆ ಇಲಾಖೆಯು, ತನ್ನ ವಿವಿಧ ಸೇವೆಗಳಿಂದ ರೂ.೨೦,೦೦೦ ಕೋಟಿ ಗಳಿಸುತ್ತದೆ. ಹಾಗಾಗಿ ಈ ಇಲಾಖೆ ರಾಜ್ಯ ಸರ್ಕಾರದ ಒಂದು ಪ್ರಮುಖ ಆದಾಯ ಕೊಡುಗೆ ನೀಡುವ ಇಲಾಖೆಯೂ ಆಗಿದೆ.
ಸರ್ಕಾರಕ್ಕೆ ಸ್ವಲ್ಪ ಆದಾಯ ನಷ್ಟವಾಗುತ್ತದೆ. ಆದರೆ ಬಿಹೆಚ್ ನೋಂದಣಿಯಿಂದಾಗಿ ಅನೇಕರಿಗೆ, ಅದರಲ್ಲಿಯೂ ವಿಶೇಷವಾಗಿ ವರ್ಗಾವಣೆಯಾಗುವ ಉದ್ಯೋಗದಲ್ಲಿರುವಂತಹ ಅನೇಕ ಉದ್ಯೋಗಿಗಳಿಗೆ ಇದರಿಂದ ಬಹಳ ನೆರವಾಗಲಿದೆ. ಏಕೆಂದರೆ ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ ಯಾವುದೇ ಒಂದು ವಾಹನ ಬೇರೆ ರಾಜ್ಯದಲ್ಲಿ 11 ತಿಂಗಳಿಗಿಂತ ಹೆಚ್ಚಿನ ಸಮಯದವರೆಗೆ ಓಡಾಡುತ್ತಿದ್ದರೆ ಮರುನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಮೇಲಾಗಿ ಮೂಲ ರಾಜ್ಯದ ವಾಹನ ನೋಂದಣಿಯಿಂದ ಬೇರೆ ರಾಜ್ಯಕ್ಕೆ ಮಾಡಬೇಕಾದ ಮರುನೋಂದಣಿ ಪ್ರಕ್ರಿಯೆ ಅಷ್ಟು ಸುಲಭವಲ್ಲ, ಏಕೆಂದರೆ ವಾಹನದ ಮಾಲೀಕರಿಗೆ ಮೂಲ ರಾಜ್ಯದಿಂದ ನಿರಾಕ್ಷೇಪಣಾ ಪತ್ರ ಬೇಕಾಗುತ್ತದೆ ಹಾಗೂ ಹೊಸ ರಾಜ್ಯದಲ್ಲಿ ಅಲ್ಲಿ ಅನ್ವಯವಾಗುವಂತ ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ.
ಎಲ್ಲರಿಗೂ ತಮ್ಮ ತಮ್ಮ ವಾಹನಗಳಿಗೆ ‘ಬಿಹೆಚ್ ಸೀರಿಸ್’ ನೋಂದಣಿ ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಇದು ಕೇವಲ ರಕ್ಷಣಾ ಇಲಾಖೆ, ರಾಜ್ಯ, ಕೇಂದ್ರ ಕರ್ಸಾರಗಳು ಅಥವಾ ಅದರ ಸ್ವಾಮ್ಯತೆಯಡಿ ಬರುವ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತಹ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ.
ಕಂಪನಿ ನಾಲ್ಕು ಅಥವಾ ಇನ್ನೂ ಹೆಚ್ಚಿನ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವಂತಹ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳೂ ಸಹ ‘ಬಿಹೆಚ್ ಸೀರಿಸ್’ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ತೆರಿಗೆ ರಚನೆಯೂ ಬೇರೆ ರೀತಿ ಇರುತ್ತದೆ. ರಸ್ತೆ ತೆರಿಗೆಯನ್ನು ಒಟ್ಟುಗೆ 15 ವರ್ಷಗಳ ಬದಲಿಗೆ ಎರಡು ವರ್ಷಗಳ ಅವಧಿಗೆ ವಿಧಿಸಲಾಗುತ್ತದೆ ಅಥವಾ ಎರೆಡೆರಡು ವರ್ಷಗಳಿಗೆ ವಿಧಿಸಬಹುದು.
ಈ ನಡುವೆ, ಕೆಲವು ಮಾಲೀಕರು ‘ಬಿಹೆಚ್ ಸೀರಿಸ್’ ನೋಂದಣಿಗಾಗಿ ಕಾರನ್ನು ಕೊಳ್ಳುವ ತಮ್ಮ ಯೋಜನೆಯನ್ನು ಮುಂದೂಡಿದ್ದಾರಂತೆ. “ನಾವು ಒಂದು ಕಾರನ್ನು ಬುಕ್ ಮಾಡಿದ್ದೆವು. ಆದರೆ ಖರೀದಿಯನ್ನು ಮೂಂದೂಡಿದ್ದೇವೆ. ಏಕೆಂದರೆ ನಮ್ಮ ವಾಹನಕ್ಕೆ ಬಿಹೆಚ್ ಸೀರಿಸ್ ನೋಂದಣಿ ಆಗಬೇಕಿದೆ. ಸರ್ಕಾರ ಸಾಧ್ಯವಾದಷ್ಟೂ ಬೇಗ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ ಎಂದು ನಂಬಿದ್ದೇವೆ. ಇದರಿಂದ ಅನೇಕರಿಗೆ ಲಾಭವಾಗುತ್ತದೆ,” ಎನ್ನುತ್ತಾರೆ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಓರ್ವ ಉದ್ಯೋಗಿ ಎ. ನರೇಂದ್ರ.
ಸುದ್ದಿ ಮೂಲ: ಬೆಂಗಳೂರು ಮಿರರ್
Key words: driving -cheaper – BH- registration