ಬೆಂಗಳೂರು ಸೆಪ್ಟಂಬರ್,13,2023(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಇದನ್ನು ಸಿಎಂ ಸಿದ್ಧರಾಮಯ್ಯ ಅವರಿಗೆ ಶಿಫಾರಸು ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸಂಪುಟ ಉಪಸಮಿತಿ ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಮುಖ್ಯಮಂತ್ರಿಗಳು ಇಂದು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಬಳಿಕ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಮೊದಲ ಬರ ಘೋಷಣೆ ಮಾಡಬೇಕು, ಬಳಿಕ ಪರಿಹಾರ ಘೋಷಣೆ ಮಾಡಲಾಗುವುದು. ಮೊದಲು 113 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆಗೆ ಆದೇಶ ನೀಡಿದ್ದೇವು. 62 ತಾಲೂಕುಗಳಲ್ಲಿ ಬರಕ್ಕೆ ಅರ್ಹ ವಿವರ ಬಂದಿತ್ತು. ಸಚಿವ ಸಂಪುಟದಲ್ಲೂ ವಿಸ್ರೃತ ಚರ್ಚೆಯಾಗಿತ್ತು. ಆಗ 62 ತಾಲೂಕುಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಚರ್ಚೆಯಾಗಿತ್ತು. ಹೀಗಾಗಿ ಉಳಿದ 134 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶಿಸಿದ್ದೇವು ಎಂದು ತಿಳಿಸಿದರು.
ಈಗ ಎಲ್ಲ ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ಬಂದಿದೆ. 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದರೂ ಕೂಡ ತೇವಾಂಶ ಕೊರತೆ ಕಂಡು ಬರುತ್ತಿಲ್ಲ. ತನ್ನ ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು ಎಂದು ಕೃಷ್ಣಭೈರೇಗೌಡ ಹೇಳಿದರು.
Key words: Drought- situation – 195 taluks – state-Revenue Minister- Krishna Byre Gowda.