ಮಂಗಳೂರು,ನವೆಂಬರ್,5,2020(www.justkannada.in): ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ. ಹಣದ ಆಮಿಷ ಪ್ರೀತಿ ಪ್ರೇಮದ ಹೆಸರನಲ್ಲಿ ನಡೆಯುವ ಮತಾಂತರ ತಡೆಯಲು ಕ್ರಮ ಕೈಗೊಳ್ಳುತ್ತೇವೆ. ಲವ್ ಜಿಹಾದ್ ಬಗ್ಗೆ ರಾಜ್ಯದಲ್ಲೂ ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ದೇಶದಲ್ಲಿ ರಾಜ್ಯ ಮಾದರಿಯಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುತ್ತಿದ್ದೇವೆ. ಡ್ರಗ್ಸ್ ಮುಕ್ತ ರಾಜ್ಯವಾಗಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆಡಳಿತ ಪಕ್ಷದ 18 ಮಂದಿ ರಾಜೀನಾಮೆ ನೀಡಿದ್ದು ಇತಿಹಾಸ. 18 ಮಂದಿಯ ರಾಜೀನಾಮೆ ಅವರ ಸಹಕಾರದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗುತ್ತಿದೆ. ಬಿಜೆಪಿ ಪಕ್ಷದ ಬಲವರ್ಧನೆಯೇ ನಮ್ಮ ಗುರಿ. ಯಾವುದೇ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಬರುವಂತಹ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರಬೇಕು, ಅಧಿಕಾರದ ಮೂಲಕ ಜನರ ಸೇವೆ ಮಾಡಬೇಕು ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸೇರಿ ಹತ್ತು ಪಾಲಿಕೆಗಳಿಗೆ ತಲಾ 50 ಕೋ.ರೂ ಮಂಜೂರು ಮಾಡಲಾಗುವುದು. ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಕರಾವಳಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: Drugs -Love Jihad – toughest laws -CM BS Yeddyurappa