ಮೈಸೂರು,ಸೆಪ್ಟಂಬರ್,10,2020(www.justkannada.in): ಮೈಸೂರಿನ ಪ್ರತಿಷ್ಟಿತ ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಇದೆ ಎಂಬ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಆರೋಪಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹಮತ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಶಾಲಾಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈ ಕುರಿತು ಪ್ರಮೋದ್ ಮುತಾಲಿಕ್ ಮಾಡಿದ ಆರೋಪವನ್ನ ಒಪ್ಪಿಕೊಂಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಯಾವ ಕಾಲೇಜು ಅಂತಾ ನಾನು ಹೆಸರು ಹೇಳುವುದಿಲ್ಲ. ಆದರೆ ಬಹುತೇಕ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಮದ್ಯಪಾನ, ಧೂಮಪಾನ ಮಾಡಿದರೆ ಪೋಷಕರಿಗೆ ಗೊತ್ತಾಗುತ್ತದೆ. ಆದರೆ ಡ್ರಗ್ಸ್ ಸೇವನೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ಇದು ರಾಜ್ಯಾದ್ಯಂತ ಕಂಡು ಬರುತ್ತಿದೆ. ಇದನ್ನ ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ದಂಧೆ ನಂಟು ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಹೆಸರು ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಆ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಇದುವರಿಗೂ ಜಮೀರ್ ಅಹಮ್ಮದ್ ಅವರನ್ನು ಯಾಕೆ ಬಂಧಿಸಿಲ್ಲ…? ಇದರ ಹಿಂದಿನ ಉದ್ದೇಶವೇನು..? ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ತನಿಖಾಧಿಕಾರಿಗಳಿಗೆ ಅಗತ್ಯ ಎನಿಸಿದರೆ ಪ್ರಶಾಂತ್ ಸಂಬರಗಿ ಅವರನ್ನೂ ವಿಚಾರಣೆಗೆ ಒಳಪಡಿಸಲಿ. ಅವರ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೇ ಸಂಗ್ರಹಿಸಿಕೊಂಡು ತನಿಖೆ ಮುಂದುವರೆಸಿ. ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದು ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ನುಡಿದರು.
Key words: Drugs – Mysore-MP Pratap Simha- pramod-Muthalik- allegation