ಬೆಂಗಳೂರು:ಮೇ-25:(www.justkannada.in) ವಿಚಾರಣೆ ವೇಳೆಯೇ ದೂರುದಾರ ಮಹಿಳೆಯ ಜತೆ ಅನುಚಿತ ವರ್ತನೆ ತೋರಿದ ಹಿನ್ನಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೇ ಬಾಯಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಸಾ ವಿಜ್ನಾನಿ ಎಂದು ಹೇಳಿಕೊಂಡಿರುವ ಪ್ರವೀಣ್ ಹಾಗೂ ಆತನ ಸಹೋದರ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ.
15 ಮಹಿಳೆಯರಿಂದ ಸುಮಾರು 4 ಲಕ್ಷ ರೂ.ಯಿಂದ 15 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಪ್ರವೀಣ್ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಮಹಿಳಾ ಆಯೋಗದಲ್ಲಿ ದೂರು ನೀಡಿದ ಮಹಿಳೆಯರು ಮತ್ತು ಪ್ರವೀಣ್ನನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ನಡೆಯುತ್ತಿದ್ದ ವೇಳೆ ಪ್ರವೀಣ್, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೇ, ಆತನ ಸಹೋದರ ಪ್ರಶಾಂತ್ ಮಹಿಳೆಯರ ಫೋಟೋ ತೆಗೆದು ತೇಜೋವಧೆಗೆ ಯತ್ನಿಸಿದ್ದಾನೆ. ಈ ಹಿನ್ನಲೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೇ ಬಾಯಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಕಚೇರಿಗೆ ಕರೆಸಿದ್ದ ನಾಗಲಕ್ಷ್ಮೀಬಾಯಿ ಅವರು, ಬೆದರಿಕೆ ಹಾಕಿ ಮಾನಹಾನಿ ಮಾಡಿದ್ದಾರೆಂದು ಆರೋಪಿಸಿ ಮೇ 17ರಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಪ್ರವೀಣ್ ದೂರು ನೀಡಿದ್ದ.
ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ಅನುಚಿತ ವರ್ತನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹಲಸೂರು ಗೇಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.