ಬೆಂಗಳೂರು, ಆಗಸ್ಟ್ 18,(www.justkannada.in): ರಾಜ್ಯ ವಿಧಾನ ಮಂಡಲದ ಇ-ವಿಧಾನ ಯೋಜನೆಯ ಅನುಷ್ಠಾನ ಅಧಿಕಾರಿಗಳ ಉದಾಸೀನತೆ, ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತೆಯ ಪರಮಾವಧಿಯಾಗಿದೆ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾಗಿ ಮೂರು ವರ್ಷಗಳನ್ನು ಪೂರ್ಣ ಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಸಭೆ ಮೂರನೇ ವರ್ಷದ ಸಾಧನೆಗಳು 2021-22 ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧಿಕಾರಿಶಾಹಿಯಲ್ಲಿ ನಿಷ್ಕಾಳಜಿ ತುಂಬಿ ತುಳುಕಾಡುತ್ತಿದೆ. ಅಲ್ಲದೇ, ಜಟಿಲ ಹಾಗೂ ಕಲುಷಿತಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೇ ನಾವು ವಿಷವರ್ತುಲದಲ್ಲಿ ಭಾಗದಲ್ಲಿ ಇದ್ದೇವೆ ಎಂದು ನೇರವಾಗಿ ಆರೋಪಿಸಿದರು.
ಕೇವಲ ಶಾಸಕಾಂಗ ಮಾತ್ರವಲ್ಲ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗ ಸಂಯುಕ್ತವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದ ಅವರು ವಿಳಂಬ ದ್ರೋಹದ ಧೋರಣೆಯನ್ನು ಸಹಿಸಲಾಗದು ಎಂದು ಸ್ವಷ್ಟ ಪಡಿಸಿದರು.
ಸದಸ್ಯರ ಹಾಜರಾತಿ :
ರಾಜ್ಯ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ ಸದಸ್ಯರ ಹಾಜರಾತಿ ಕಡ್ಡಾಯಗೊಳಿಸಲು ಸಾಧ್ಯವಿಲ್ಲವೇ ? ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಜರಾತಿ ಕುರಿತಂತೆ ಹಾಜರಾತಿಯ ಮಹತ್ವ ಮತ್ತು ಮೌಲ್ಯ ಕುರಿತಂತೆ ಸಂಬಂಧಿತ ಸದಸ್ಯರಲ್ಲಿ ಅರಿವು ಮತ್ತು ಜಾಗೃತಿ ಇರಬೇಕು ಮಾತ್ರವಲ್ಲ ಇದು ಶಾಸಕಾಂಗ ಪಕ್ಷದ ನಾಯಕರ ಕರ್ತವ್ಯ. ಅಲ್ಲದೇ, ಆಯ್ಕೆಯಾದ ಪಕ್ಷದ ಜವಾಬ್ದಾರಿ ಕೂಡಾ. ಅಧಿವೇಶನದ ಸಂದರ್ಭದಲ್ಲಿ ಕ್ಷೇತ್ರದಲ್ಲಿನ ಸಭೆ, ಸಮಾರಂಭಗಳಲ್ಲಿ ಹಾಗೂ ಕಾರ್ಯಕ್ರಮ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಾಗ ಕ್ಷೇತ್ರದ ಜನರೂ ಕೂಡಾ ಅಂತಹ ಸದಸ್ಯರನ್ನು ಪ್ರಶ್ನಿಸುವ ವಾತಾವರಣ ಉದ್ಭವಿಸಬೇಕು. ಇದು ಜಾಗೃತ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣ ಎಂದರು.
ಸೆಪ್ಟೆಂಬರ್ ನಲ್ಲಿ ಅಧಿವೇಶನ :
ರಾಜ್ಯ ವಿಧಾನ ಮಂಡಲದ ಅಧಿವೇಶನವು ಕಳೆದ ಮಾರ್ಚ್ ನಲ್ಲಿ ನಡೆದಿತ್ತು. ಸಂವಿಧಾನಾತ್ಮಕವಾಗಿ ಆರು ತಿಂಗಳೊಳಗೆ ಮತ್ತೊಮ್ಮೆ ಅಧಿವೇಶನ ನಡೆಯಬೇಕಾಗಿದೆ. ಆದಕಾರಣ, ಸೆಪ್ಟೆಂಬರ್ ಮಾಹೆಯಲ್ಲಿ ನಿಶ್ಚಿತವಾಗಿಯೂ ಅಧಿವೇಶನ ನಡೆಯಲಿದೆ. ಅಧಿವೇಶನದ ದಿನಾಂಕ ಮತ್ತು ಸಮಯವನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆ ತೀರ್ಮಾನಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ಕಾಮನ್ ವೆಲ್ತ್ ಗೆ ಕಾಗೇರಿ :
ಕೆನಡಾದ ಹೆಲಿಫ್ಯಾಕ್ಸ್ ನಲ್ಲಿ ಆಗಸ್ಟ್ 22 ರಿಂದ 26 ರ ವರೆಗೆ ನಡೆಯಲಿರುವ 65 ನೇ ಕಾಮನ್ ವೆಲ್ತ್ ಸಂಸದೀಯ ಸಂಘದ ಶೃಂಗ ಸಭೆಯಲ್ಲಿ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾಗಿ ತಾವು ಮತ್ತು ರಾಜ್ಯ ವಿಧಾನ ಪರಿಷತ್ತಿನ ಪ್ರತಿನಿಧಿಯಾಗಿ ಅಲ್ಲಿನ ಸದಸ್ಯ ಬಸವರಾಜ ಹೊರಟ್ಟಿ ಅವರು ಪಾಲ್ಗೊಳ್ಳುತ್ತಿರುವುದಾಗಿ ಪ್ರಕಟಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿದೇಶ ಪ್ರಯಾಣಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು. ಅಲ್ಲದೇ, ಈ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಯುನೈಟೆಡ್ ಕಿಂಗ್ ಡಮ್ ಮತ್ತು ಫ್ರಾನ್ಸ್ಗೆ ಅಧ್ಯಯನ ಪ್ರವಾಸಕ್ಕೆ ತೆರಳಿ, ಸೆಪ್ಟೆಂಬರ್ 4 ರಂದು ಬೆಂಗಳೂರಿಗೆ ಹಿಂದಿರುಗುವುದಾಗಿ ಹೇಳಿದರು.
ಅರವತ್ತೆಂಟು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಈ ಶೃಂಗದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಸಂಸತ್ತಿನ ಪಾತ್ರ ಹಾಗೂ ಹವಾಮಾನ ತುರ್ತು ಪರಿಸ್ಥಿತಿ, ತುರ್ತು ಸ್ಥಿತಿ, ಸಂಸತ್ತು ಸರ್ಕಾರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆಯೇ ?ವಿಷಯ ಕುರಿತು ತಾವು ಮಹಾಪ್ರಬಂಧವನ್ನು ಮಂಡಿಸುವುದಾಗಿ ಸಭಾಧ್ಯಕ್ಷರು ಮಾಹಿತಿ ನೀಡಿದರು.
Key words: E-Method – extremely –slow-Speaker -Vishweshwar Hegade Kageri