ಮೈಸೂರು, ಜ.24, 2020 : (www.justkannada.in news ) ನಟ ರಜನಿಕಾಂತ್ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇದಕ್ಕೆ ಕಾರಣ, ಪೆರಿಯಾರ್ ಕುರಿತು ನಟ ರಜನಿಕಾಂತ್ ನೀಡಿದ್ದಾರೆ ಎನ್ನಲಾದ ಹೇಳಿಕೆ.
ರಜನಿಕಾಂತ್ ಕ್ಷಮಾಪಣೆ ಕೇಳ ಬೇಕು ಎಂದು ಪರಿಯಾರ್ ಅನುಯಾಯಿಗಳು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಜನಿಕಾಂತ್ ಮಾತ್ರ, ನಾನು ತಿಳಿದಿದ್ದೆ ಹೇಳಿಕೆ ನೀಡಿರುವುದು. ಆದ್ದರಿಂದ ಕ್ಷಮಾಪಣೆ ಕೇಳುವ ಮಾತೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿರುವುದು ವಿವಾದ ಮತ್ತಷ್ಟು ಉಲ್ಭಣಿಸುವಂತಾಗಿದೆ.
ತುಘಲಕ್ ಪತ್ರಿಕೆ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ರಜನಿಕಾಂತ್, ಈ ಹಿಂದೆ ಶ್ರೀರಾಮ ಹಾಗೂ ಸೀತೆಯ ಬೆತ್ತಲೆ ಫೋಟೋ ಮೆರವಣಿಗೆ ನಡೆಸಿದ್ದ ಪೆರಿಯಾರ್ ಅವರ ನೇತೃತ್ವದ ಪ್ರತಿಭಟನೆ ಸುದ್ಧಿಯನ್ನು ಆ ಕಾಲದ ಯಾವುದೇ ಪತ್ರಿಕೆಗಳು ಪ್ರಕಟಿಸಿರಲಿಲ್ಲ. ಆದರೆ ಆ ಧೈರ್ಯ ಮಾಡಿದ್ದು ತುಘಲಕ್ ಪತ್ರಿಕೆ ಮಾತ್ರ ಎಂದು ಪತ್ರಿಕೆಯನ್ನು ರಜನಿಕಾಂತ್ ಪ್ರಶಂಶಿಸಿದ್ದರು. ಆದರೆ ಇದು ನಂತರ ವಿವಾದದ ರೂಪ ಪಡೆದುಕೊಂಡು, ಪೆರಿಯಾರ್ ವಿರುದ್ಧವೇ ರಜನಿಕಾಂತ್ ಮಾತನಾಡಿದರು ಎಂದು ಗುಲ್ಲೆಬ್ಬಿಸಿ ಕ್ಷಮೆಯಾಚನೆಗೆ ಪಟ್ಟು ಹಿಡಿಯಲಾಯಿತು. ಈ ಕಾರಣಕ್ಕಾಗಿಯೇ ನಟ ರಜನಿಕಾಂತ್, ಸತ್ಯವನ್ನೇ ಮಾತನಾಡಿರುವುದು. ಹಾಗಾಗಿ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ತುಂಡಾದಂತೆ ಸ್ಪಷ್ಟಪಡಿಸಿರುವುದು.
ವಿಶೇಷ ಅಂದ್ರೆ ತಮಿಳುನಾಡಿನಲ್ಲಿ ವಿವಾದದ ಅಲೆ ಎಬ್ಬಿಸಿರುವ ಪೆರಿಯಾರ್, ರಜನಿಕಾಂತ್ ಮೂಲತಃ ಕರ್ನಾಟಕದವರು ಎನ್ನುವುದು. ನಟ ರಜನಿಕಾಂತ್, ಕಲಾವಿದನಾಗಿ ಹಂತಹಂತವಾಗಿ ಮೇಲೆರಿ ತಮಿಳರ ಹೃದಯ ಸಿಂಹಾಸನ ಅಲಂಕರಿಸಿದವರು. ಅದೇ ರೀತಿ ಇ.ವಿ. ರಾಮಸ್ವಾಮಿ ನಾಯ್ಕರ್ ತಮ್ಮ ಸೇವಾ ಮನೋಭಾವ, ಕ್ರಾಂತಿಕಾರಿ ಗುಣಗಳಿಂದ ತಮಿಳರ ಪಾಲಿಗೆ ‘ ಪೆರಿಯಾರ್’ ಎನಿಸಿಕೊಂಡವರು.
ಇತ್ತೀಚಿನವರಿಗೆ ನಟ ರಜನಿಕಾಂತ್ ಬಗ್ಗೆ ತಿಳಿದಿದೆ. ಆದರೆ ತಂದೆ ಪೆರಿಯಾರ್ ಬಗ್ಗೆ ಬಹುತೇಕರಿಗೆ ಅಷ್ಟೇನು ಮಾಹಿತಿ ಇರದು. ಈ ನಿಟ್ಟಿನಲ್ಲಿ ಈ ಲೇಖನ…..
ಪೆರಿಯಾರ್ ರಾಮಸ್ವಾಮಿ (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) – ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ “ಪೆರಿಯಾರ್ ರಾಮಸ್ವಾಮಿ”
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು “ತಮಿಳು ಸ್ವಾಭಿಮಾನ ಚಳುವಳಿ” ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ ‘ಪೆರಿಯಾರ್’ ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರೇ ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್
ಜನನ/ಜೀವನ
ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ಶ್ರೀಮಂತ ಬಲಿಜ ಕುಟುಂಬದಲ್ಲಿ ಹುಟ್ಟಿದ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು.
ಪೆರಿಯಾರ್ ಅಥವ ರಾಮಸ್ವಾಮಿಗೆ 19 ವರ್ಷದವರಾಗಿದ್ದಾಗ ಮದುವೆಯಾಯಿತು, ಪತ್ನಿ ನಾಗಮ್ಮಾಯಿ. ಈ ದಂಪತಿಗೆ ಜನಿಸಿದ ಒಬ್ಬಳೇ ಮಗಳು ಕೇವಲ 5 ತಿಂಗಳು ಮಾತ್ರ ಬದುಕಿದ್ದಳು. ಇದೇ ವೇಳೆ ತಮ್ಮ ಮನೆಯಲ್ಲಿ ತಂದೆಯವರು ಏರ್ಪಡಿಸುತ್ತಿದ್ದ ಪ್ರವಚನಗಳನ್ನು ಕೇಳುತ್ತಿದ್ದರು. ತಮ್ಮ ಮನೆಯ ಆತಿಥ್ಯ ಸ್ವೀಕರಿಸಿ ಪುರಾಣಗಳನ್ನು ಓದುತ್ತಿದ್ದ ಪಂಡಿತ ಮಹಾಶಯರನ್ನು ರಾಮಸ್ವಾಮಿ ಗಮನಿಸುತ್ತಿದ್ದರು. ಪಂಡಿತರ ಮಾತುಗಳಲ್ಲಿನ ವಿರೋಧಾಭಾಸಗಳನ್ನು ಕುರಿತು ಪ್ರಶ್ನಿಸುತ್ತಿದ್ದರು.
ನಾಸ್ತಿಕರಾಗಿ ಬದಲಾದದ್ದಕ್ಕೆ ಕಾರಣ
ಕೌಟುಂಬಿಕ ವಿಚಾರವಾಗಿ ತಂದೆಯವರು ಕಟುವಾಗಿ ಬೈಯ್ದದ್ದರಿಂದ ರಾಮಸ್ವಾಮಿ ಮನೆ ಬಿಟ್ಟು ಹೊರಟರು. ಅಲ್ಲಿ ಇಲ್ಲಿ ತಿರುಗಾಡಿ, ವಾರಣಾಸಿ ತಲುಪಿದರು. ಕಾಶಿ ಅಥವಾ ವಾರಣಾಸಿ ಅನ್ನುವುದು ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾಗಿತ್ತು. ಕಾಶಿಯಲ್ಲಿ ವಿಶ್ವನಾಥನ ದರ್ಶನ ಮಾಡಿದ ರಾಮಸ್ವಾಮಿಯವರಿಗೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬೇಸರ ತಂದವು.
ಭಿಕ್ಷುಕರ ಕಾಟ, ಗಂಗಾ ನದಿಯಲ್ಲಿ ತೇಲುತ್ತಿದ್ದ ಹೆಣಗಳನ್ನು ಕಂಡು ಬೇಸರಗೊಂಡರು. ಇದೇ ವೇಳೆ 1904ರಲ್ಲಿ ರಾಮಸ್ವಾಮಿಯವರ ಬದುಕನ್ನು ಬದಲಿಸುವಂತ ಒಂದು ಘಟನೆ ನಡೆಯಿತು. ಕಾಶಿಯಲ್ಲಿನ ಛತ್ರಗಳಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಉಚಿತವಾಗಿ ಊಟ ಹಾಕಲಾಗುತ್ತಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ರಾಮಸ್ವಾಮಿ ಹೇಗಾದರೂ ಮಾಡಿ ಊಟಮಾಡಬೇಕೆಂದು ಜನಿವಾರ ಧರಿಸಿ, ಛತ್ರವೊಂದಕ್ಕೆ ಹೋದರು. ಆದರೆ ಮೀಸೆ ಬಿಟ್ಟಿದ್ದ ಇವರನ್ನು ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು, ಅಪಮಾನಗೊಳಿಸಿ ಹೊರಗೆ ತಳ್ಳಿದರು. ಆದರೆ ಛತ್ರದಿಂದ ಹೊರಬಿದ್ದ ರಾಮಸ್ವಾಮಿ ಕಣ್ಣಿಗೆ, ಆ ಕಟ್ಟಡ ನಿರ್ಮಿಸಲು ಹಣ ನೀಡಿದ್ದ ವ್ಯಕ್ತಿ, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಶ್ರೀಮಂತ ವರ್ತಕನೆಂಬುದು ಗೊತ್ತಾಯಿತು. ತಮ್ಮವನೇ ಆದ ಮನುಷ್ಯ ಕೊಟ್ಟ ಹಣದಿಂದ ನಿರ್ಮಿಸಲಾಗಿರುವ ಛತ್ರದಲ್ಲಿ ತಮಗೇ ಅನ್ನ ಹಾಕಲು ನಿರಾಕರಿಸಿದ್ದರ ಬಗ್ಗೆ ಚಿಂತಿಸಿದರು.
ಇದು ವೈದಿಕರು ಮತ್ತು ಜಾತಿ ಪದ್ಧತಿ ಬಗ್ಗೆ ರಾಮಸ್ವಾಮಿಯವರಲ್ಲಿ ತಿರಸ್ಕಾರ ಹುಟ್ಟುವಂತೆ ಮಾಡಿತು. ಕಾಶಿಯಲ್ಲಿ ನಡೆದ ಘಟನೆ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿತ್ತು, ಹಿಂದೂ ಧರ್ಮದ ಬಗ್ಗೆ ಇದ್ದ ಒಳ್ಳೆಯ ಭಾವನೆಗಳನ್ನು ನಾಶಗೊಳಿಸಿತು. ಆವರೆಗೆ ಆಸ್ತಿಕನಾಗಿದ್ದ ರಾಮಸ್ವಾಮಿ ಅಲ್ಲಿನಿಂದ ಮುಂದಕ್ಕೆ ನಾಸ್ತಿಕರಾಗಿ ಬದಲಾದರು. ತಂದೆಯ ಮಾತಿನಿಂದ ಬೇಸರಗೊಂಡು ಮನೆ ಬಿಟ್ಟಿದ್ದ ರಾಮಸ್ವಾಮಿ ಮನೆಗೆ ಹಿಂತಿರುಗಿದರು.
ಈರೋಡಿನ ಪ್ರಸಿದ್ಧ ವಾಣಿಜ್ಯೋದ್ಯಮಿಯಾಗಿ
ಇವರು ವಾಪಸ್ ಮನೆಗೆ ಬಂದ ಮೇಲೆ ತಂದೆ, ಎಲ್ಲಾ ವ್ಯಾಪಾರ ವಹಿವಾಟನ್ನು ಇವರಿಗೆ ಒಪ್ಪಿಸಿದರು. ಮಂಡಿಯ ಹೆಸರನ್ನು ಈ.ವಿ.ರಾಮಸ್ವಾಮಿ ನಾಯ್ಕರ್ ಮಂಡಿ ಎಂದು ಬದಲಾಯಿಸಲಾಯಿತು. 1905ರ ನಂತರ ತಮ್ಮ ವಹಿವಾಟನ್ನು ಚೆನ್ನಾಗಿ ನಡೆಸಿದ ರಾಮಸ್ವಾಮಿ, ಈರೋಡಿನ ಪ್ರಸಿದ್ಧ ವಾಣಿಜ್ಯೋದ್ಯಮಿಯಾಗಿ ಬದಲಾದರು. ಸಾರ್ವಜನಿಕ ಜೀವನವನ್ನು ಪ್ರವೇಶಿಸಿ, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾದರು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು
ಅದೇ ವೇಳೆ ಈರೋಡಿನಲ್ಲಿ ಪ್ಲೇಗ್ ರೋಗ ದಾಳಿ ಮಾಡಿತು. ನೂರಾರು ಜನರು ಪ್ರಾಣ ಕಳೆದುಕೊಂಡರು, ಜೀವ ಉಳಿಸಿಕೊಳ್ಳುವ ಸಲುವಾಗಿ ಸಾವಿರಾರು ಜನರು ಊರು ಬಿಟ್ಟರು. ಮೃತಪಟ್ಟವರ ಶವ ಸಂಸ್ಕಾರ ಮಾಡಲು ಅವರ ಹತ್ತಿರದ ಸಂಬಂಧಿಗಳೇ ನಿರಾಕರಿಸಿದಾಗ, ರಾಮಸ್ವಾಮಿಯವರು ಮುಂದೆ ನಿಂತ ಶವ ಸಂಸ್ಕಾರ ಮಾಡಿದರು.
1909ರಲ್ಲಿ ತಮ್ಮ ಸಂಪ್ರದಾಯಸ್ಥ ಕುಟುಂಬವನ್ನು ಧಿಕ್ಕರಿಸಿ, ಕೇವಲ 9ನೇ ವಯಸ್ಸಿನಲ್ಲಿ ಬಾಲ ವಿಧವೆಯಾಗಿದ್ದ ತಮ್ಮ ತಂಗಿಯ ಮಗಳಿಗೆ ಮರು ವಿವಾಹ ಮಾಡಿಸಿದರು. 1918ರಲ್ಲಿ ಈ ರೋಡು ಮುನ್ಸಿಪಾಲಿಟಿಯ ಅಧ್ಯಕ್ಷರಾದರು, ಜನರ ಕಲ್ಯಾಣಕ್ಕಾಗಿ ಹಲವು ಯೋಜನೆ ಕೈಗೊಂಡರು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು.
ಪೆರಿಯಾರ್ ಶಿಷ್ಯಂದಿರೆ ಸಿಎಮ್ :
1949ರಲ್ಲಿ ಪೆರಿಯಾರರ ಮೆಚ್ಚಿನ ಶಿಷ್ಯ ಸಿ.ಎನ್.ಅಣ್ಣಾದುರೈ ಅವರು ಡಿಎಂಕೆ ಅಥವಾ ದ್ರಾವಿಡ ಮುನ್ನೇತ್ರ ಕಳಗಂ ಹೆಸರಿನಲ್ಲಿ ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ಕೆಲವರ್ಷಗಳ ನಂತರ ಅಣ್ಣಾದುರೈ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡಿನ ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಎಂ.ಜಿ.ರಾಮಚಂದ್ರನ್ ಅಣ್ಣಾ ಶಿಷ್ಯರೇ. ತಮ್ಮಿಂದ ಯಾರೇ ದೂರವಾದರೂ ಧೃತಿಗೆಡದ ಪೆರಿಯಾರ್, ತಮ್ಮ ಹೋರಾಟ ಮುಂದುವರಿಸಿದರು.
1956ರಲ್ಲಿ ಅಂದಿನ ಮದ್ರಾಸಿನ ಮರಿನಾ ಬೀಚ್ನಲ್ಲಿ ಶ್ರೀರಾಮನ ಚಿತ್ರಗಳನ್ನು ಸುಟ್ಟರು, ಆ ವೇಳೆ ಪೆರಿಯಾರ್ರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಮನುಷ್ಯರೆಲ್ಲರೂ ಸಮಾನರೇ, ಮುಗ್ಧ ಜನರನ್ನು ಶೋಷಣೆ ಮಾಡುವ ಸಲುವಾಗಿಯಷ್ಟೇ ಜಾತಿ ಮತ್ತು ವರ್ಗಗಳನ್ನು ಸೃಷ್ಟಿಸಲಾಗಿದೆ ಎಂದು ಪೆರಿಯಾರ್ ಸಾರುತ್ತಿದ್ದರು.
ಭಾರತದಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಯುದ್ಧ ಸಾರಿದ ಪೆರಿಯಾರ್, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು, ಜನಿವಾರಗಳನ್ನು ಕಿತ್ತೆಸೆಯುವಂತೆ ಕೂಗು ಹಾಕಿದರು. ತಮಿಳುನಾಡಿನಲ್ಲಿ ಬಹಳ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಪೆರಿಯಾರ್, ಜಾತಿಯ ವಿಷವೃಕ್ಷವನ್ನು ಬುಡಮಟ್ಟದಿಂದಲೇ ಕಿತ್ತೊಗೆಯಲು ಪ್ರಯತ್ನಿಸಿದರು, ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದರು.
ಮೇಲ್ಜಾತಿಯಲ್ಲಿ ಜನಿಸಿದ್ದರೂ ಅಸ್ಪೃಶ್ಯತೆಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.
ಯುನೆಸ್ಕೋ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ
ಯುನೆಸ್ಕೋ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ ಹೀಗೆ ಹೇಳುತ್ತದೆ: “ಇವರು ನವಯುಗದ ಪ್ರವಾದಿ, ದಕ್ಷಿಣ ಪೂರ್ವ ಏಷ್ಯಾದಲ್ಲಿನ ಸಾಕ್ರೆಟಿಸ್. ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹರಾದ ಈತ ಎಲ್ಲಾ ರೀತಿಯ ಅಜ್ಞಾನ, ಮೂಢನಂಬಿಕೆ, ಕಟ್ಟುಪಾಡು, ಮನುಷ್ಯ ಮನುಷ್ಯನ ನಡುವಿನ ಭೇದಗಳಿಗೆ ಕಡುವಿರೋಧಿಯಾಗಿದ್ದಾರೆ”.
ನಿಧನ
ರಾಮಸ್ವಾಮಿ ಪೆರಿಯಾರರು ಡಿಸೆಂಬರ್ 24, 1973ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೆಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ನಿಟ್ಟಿನಲ್ಲಿ ಸ್ಮರಣೀಯರಾಗಿದ್ದಾರೆ.
ಮಾಹಿತಿ ಕೃಪೆ : ವಿಕಿಪೀಡಿಯಾ
key words : e.v.ramaswamy.naykar-periyar-tamilnadu-ranjanikanth-kannada-karnataka