ಬೆಂಗಳೂರು, ಆಗಸ್ಟ್ 29, 2022 (www.justkannada.in): ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಇನ್ನೂ ಪೂರ್ತಿಯಾಗಿ ಕಣ್ಮರೆಯಾಗದಿರುವ ಕೊರೋನಾ ಭಯದ ನಡುವೆಯೂ ಬೆಂಗಳೂರಿನಲ್ಲಿ ಭಾನುವಾರ ಸಾವಿರಾರು ಜನರು ಗಣೇಶನ ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ಭಾಗವಹಿಸಿ ವಿಶೇಷ ಉತ್ಸಾಹವನ್ನು ಪ್ರದರ್ಶಿಸಿದರು. ಗಣೇಶನ ಮೂರ್ತಿ ತಯಾರಿಕೆಯಲ್ಲಿ ವರ್ಲ್ಡ್ ರೆಕಾರ್ಡ್ (ವಿಶ್ವ ದಾಖಲೆ) ನಿರ್ಮಿಸುವ ಕಾರ್ಯಕ್ರಮದ ಆಯೋಜಕರ ಅಪೇಕ್ಷೆಗೆ ಪೂರಕವಾಗಿ ಸ್ಪಂದಿಸಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶ್ರೀ ವಿದ್ಯಾರಣ್ಯ ಯುವಕ ಸಂಘ, ರೋಟರಿ ಬೆಂಗಳೂರು ಪರಿಸರ, ಹಾಗೂ ಬೆಂಗಳೂರು ಗಣೇಶ ಉತ್ಸವ ಜಂಟಿಯಾಗಿ ಆಯೋಜಿಸಿತು. ವಿವಿಧ ವಯೋಮಾನ ಹಾಗೂ ವೃತ್ತಿಗಳ ಸುಮಾರು ೩,೩೦೮ ಜನರು ಭಾಗವಹಿಸಿ ಜೇಡಿಮಣ್ಣಿನ ಬೀಜ ಗಣೇಶನನ್ನು ತಯಾರಿಸಿ, ಮನೆಗೆ ಕೊಂಡೊಯ್ಯುವ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಬೃಹತ್ ಸಾರ್ವಜನಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಕೇವಲ ಒಂದು ಗಂಟೆಯೊಳಗೆ ಇಷ್ಟೂ ಜನರು ಸೇರಿ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದಾಗಿತ್ತು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರ್ತಿಯನ್ನು ತಯಾರಿಸಲು ಬೇಕಾಗಿರುವಂತಹ ಜೇಡಿಮಣ್ಣು, ಅಚ್ಚು, ಗಿಡದ ಬೀಜಗಳು ಹಾಗೂ ನೀರನ್ನು ಭಾಗವಹಿಸುವವರಿಗೆ ಒದಗಿಸಲಾಯಿತು. ಅದೃಷ್ಟವೆಂಬಂತೆ ಆ ಸಮಯದಲ್ಲಿ ಮಳೆರಾಯನೂ ಸಹ ಸ್ವಲ್ಪ ತನ್ನ ಕೆಲಸಕ್ಕೆ ಬಿಡುವು ಮಾಡಿಕೊಟ್ಟಿದ್ದ. ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ, ಲಘು ಉಪಹಾರ ಹಾಗೂ ಪ್ರಮಾಣಪತ್ರವನ್ನು ನೀಡಲಾಯಿತು. ಇದೇ ಸಂಸ್ಥೆಗಳಿಂದ ಒಂದೇ ಬಾರಿಗೆ ೨,೧೩೮ ಗಣೇಶನ ಮೂರ್ತಿಗಳನ್ನು ತಯಾರಿಸಿ ದಾಖಲೆ ನಿರ್ಮಿಸಲಾಗಿತ್ತು. ಇಡೀ ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶವೆಂದರೆ ಪ್ಲಾಸ್ಟಿಕ್ ಮುಕ್ತವಾಗಿದ್ದುದು. ಆದರೆ ಕಾರ್ಯಕ್ರಮ ಪೂರ್ಣಗೊಂಡ ನಂತರ ಸ್ಥಳದಲ್ಲಿ ಕೆಲವು ಕಾಗದದ ಕಪ್ ಗಳು ಅಲ್ಲಲ್ಲಿ ಕಂಡು ಬಂತು.
ಈ ಕಾರ್ಯಕ್ರಮದಲ್ಲಿ ತಯಾರಿಸಿದಂತಹ ಗಣೇಶನ ಮೂರ್ತಿಗಳನ್ನು, ಹಬ್ಬ ಹಾಗೂ ಪೂಜಾ ವಿಧಿವಿಧಾನಗಳ ನಂತರ ಒಂದು ಕುಂಡದಲ್ಲಿ ನೆಡಬಹುದು. ತುಳಸಿ, ಅಶ್ವಗಂಧ, ಸೂರ್ಯಕಾಂತಿ ಹಾಗೂ ಇತರೆ ಹೂವಿನ ಸಸಿಗಳ ಬೀಜಗಳನ್ನು ಗಣೇಶ ಮೂರ್ತಿಗಳನ್ನು ತಯಾರಿಸಲು ಬಳಸಲಾಯಿತು. ಭಾಗವಹಿಸುವವರಿಗೆ ಮೂರ್ತಿಗಳನ್ನು ತಯಾರಿಸಲು ಮಾರ್ಗದರ್ಶನ ನೀಡಲು ಓರ್ವ ತಜ್ಞ ಕರಕುಶಲಕರ್ಮಿಯನ್ನು ನೇಮಿಸಲಾಗಿತ್ತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆಲವು ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ವಿಷಕಾರಕ ರಾಸಾಯನಿಕಗಳಿರುವ ಬಣ್ಣಗಳಿಂದ ತಯಾರಿಸಿರುವ ಗಣೇಶನ ಮೂರ್ತಿಗಳನ್ನು ತ್ಯಜಿಸಿ ಪರಿಸರ-ಸ್ನೇಹಿ ಗಣೇಶನ ಮೂರ್ತಿಗಳನ್ನು ಬಳಸಲು ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ಸುಸ್ಥಿರತೆ ಅಭಿಯಾನ ಬೆಂಗಳೂರಿನಲ್ಲಿ ಬೃಹತ್ ಯಶಸ್ಸನ್ನು ಸಾಧಿಸಿದೆ. ಮಂಡಳಿಯು ಇತರೆ ಜಿಲ್ಲೆಗಳಲ್ಲಿಯೂ ಸಹ ಇದೇ ರೀತಿಯಾದ ಶಿಬಿರಗಳನ್ನು ಆಯೋಜಿಸುತ್ತಿದೆ.
ಕೆಎಸ್‌ಪಿಸಿಬಿಯ ಹಿರಿಯ ಪರಿಸರ ಅಧಿಕಾರಿ ಸೈಯ್ಯದ್ ಖಾಜ ಅವರು ಈ ಸಂದರ್ಭದಲ್ಲಿ ಮಾತನಾಡಿ, ಇಲ್ಲಿ ವಿತರಿಸಲಾದ ಪ್ರತಿ ಮಣ್ಣಿನ ಕಿಟ್ ರೂ.೧೦೦/- ವಾಗುತ್ತದೆ. ಒಂದು ಗಂಟೆಯೊಳಗೆ ೩,೩೦೮ ಗಣೇಶನ ಮೂರ್ತಿಗಳನ್ನು ತಯಾರಿಸಲು ಯೋಜಿಸಲಾಗಿತ್ತು. ಸ್ಥಳದಲ್ಲಿ ೭,೦೦೦ ಜನರು ಜಮಾಯಿಸಿದ್ದರು. ಎಲ್ಲರಿಗೂ ಒಂದು ಮರದ ಹಾಳೆಯ ಜೊತೆಗೆ ಮಣ್ಣಿನ ಕಿಟ್ ಹಾಗೂ ತಯಾರಿಸಿದ ಮೂರ್ತಿಯನ್ನು ಕೊಂಡೊಯ್ಯಲು ಕೈಚೀಲವನ್ನು ಒದಿಗಸಲಾಯಿತು. ೧೦,೦೦೦ ಮೂರ್ತಿಗಳನ್ನು ತಯಾರಿಸುವುದು ನಮ್ಮ ಗುರಿಯಾಗಿತ್ತು,” ಎಂದು ವಿವರಿಸಿದರು.
ಸ್ಥಳದಲ್ಲಿ ಭಾಗವಹಿಸುವವರಿಗೆ ಅಗತ್ಯ ಮಾರ್ಗದರ್ಶನ ನೀಡಲು ೧,೦೦೦ ಲಲಿತಕಲಾ ವಿದ್ಯಾರ್ಥಿಗಳಿದ್ದರು. ಇಡೀ ಕಾಯಕ್ರರ್ಮಕ್ಕೆ ಅಂದಾಜು ರೂ.೧೫ ರಿಂದ ರೂ.೨೦ ಲಕ್ಷ ವೆಚ್ಚವಾಗಿದ್ದು, ಇದರಲ್ಲಿ ಒಂದು ಭಾಗವನ್ನು ಕೆಎಸ್‌ಪಿಸಿಬಿ ಭರಿಸಿದೆ.
ಬೆಂಗಳೂರಿನ ಪಿ & ಆರ್ ರಿಫ್ರ್ಯಾಕ್ಟರೀಸ್ ನ ಮಾಲೀಕರಾದ ರಾಮಯ್ಯ ಅವರು ಕಚ್ಚಾ ವಸ್ತುವನ್ನು ಸರಬರಾಜು ಮಾಡಿದರು. “ಒಂದು ಕಿಟ್ ನಲ್ಲಿ ಸುಮಾರು ೩.೫ ಕೆಜಿ ಜೇಡಿ ಮಣ್ಣಿತ್ತು. ನಾವು ಈ ಉದಾತ್ತ ಕಾರಣಕ್ಕಾಗಿ ಬಹಳ ಕಡಿಮೆ ಬೆಲೆಯಲ್ಲಿ ಜೇಡಿ ಮಣ್ಣನ್ನು ಸರಬರಾಜು ಮಾಡಿದೆವು. ಒಂದು ಕೆಜಿಗೆ ಕೇವಲ ರೂ.೭ ದರ ವಿಧಿಸಲಾಯಿತು. ಆದರೆ ಅದರ ಬೆಲೆ ಅದಕ್ಕಿಂತಲೂ ತುಂಬಾ ಹೆಚ್ಚಾಗಿದೆ. ಮಂಡಳಿಯು ಈ ಬಾರಿ ೮,೦೦೦ ಕೆಜಿಗಳಷ್ಟು ಮಣ್ಣನ್ನು ಖರೀದಿಸಿತು. ಇದರಲ್ಲಿ ಸ್ವಲ್ಪ ಭಾಗವನ್ನು ಮೈಸೂರಿಗೆ ಕಳುಹಿಸಲಾಯಿತು. ಮಂಡಳಿಯು ನಡೆಸುವ ಶಿಬಿರಗಳಿಗೆ ಜೇಡಿ ಮಣ್ಣನ್ನು ನಿಯಮಿತವಾಗಿ ಖರೀದಿಸುತ್ತಾ ಬಂದಿದೆ. ಈ ಕಾರ್ಯಕ್ರಮ ಗಿನ್ನಿಸ್ ದಾಖಲೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಣ್ಣು ಸಂಪೂರ್ಣವಾಗಿ ರಾಸಾಯನಿಕ-ಮುಕ್ತ ಹಾಗೂ ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸಲಾಯಿತು. ಜೇಡಿಮಣ್ಣನ್ನು ಮಾಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೆರೆಗಳಿಂದ ತರಿಸಲಾಗಿತ್ತು,” ಎಂದು ವಿವರಿಸಿದರು.
ವೈಷ್ಣವಿ ವಿ. ಶಾಸ್ತ್ರಿ
Key words: Eco-Friendly -Ganesha – World Record – Bangalore
ENGLISH SUMMARY….
Nearly 7,000 people throng the National College Grounds to act out their Ganesha fantasies.
Bengaluru sets a world record in crafting eco-friendly Ganesha idols.
Bengaluru: Unmindful of the vagaries of weather and the still prevailing fear of coronavirus infection, Bengalureans turned out in thousands to participate in the clay seed Ganesha idol making on Sunday. They ensured the organisers’ wish to create a world record through the Gunnies eventually met.