ಡಿಜಿಟಲ್ ವ್ಯವಹಾರದಿಂದ ಆರ್ಥಿಕ ಸಬಲೀಕರಣ ನನಸು-ಸಚಿವ  ಅಶ್ವತ್ ನಾರಾಯಣ್.

ಕಲಬುರಗಿ,ಫೆಬ್ರವರಿ,12,2022(www.justkannada.in):  ಡಿಜಿಟಲ್ ವ್ಯವಹಾರ ಸ್ವರೂಪವು ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಶಕ್ತಿಯಾಗಿದ್ದು, ಯಾವುದೇ ದೇಶದೊಂದಿಗೆ ವ್ಯಾಪಾರ- ವಹಿವಾಟು ತುಂಬಾ ಸುಲಭವಾಗಿದೆ. ಜತೆಗೆ ಡಿಜಿಟಲ್ ಮಾರುಕಟ್ಟೆ ತರಬೇತಿಯಿಂದ ನೂರಕ್ಕೆ ನೂರರಷ್ಟು ಉದ್ಯೋಗ ಖಾತ್ರಿಯೂ ಸಿಗುತ್ತದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಇಲ್ಲಿನ ಪಿಡಿಎ ಕಾಲೇಜಿನಲ್ಲಿ ಶನಿವಾರದಂದು ಏರ್ಪಡಿಸಿದ್ದ `ಉದ್ಯೋಗ ಮೇಳ’ವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ವರ್ಚುಯಲ್ ರೂಪದಲ್ಲಿ ಮಾತನಾಡಿದ ಅವರು, ಪದವಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರುಕಟ್ಟೆ ತರಬೇತಿ ನೀಡುವ ಉದ್ದೇಶದಿಂದ `ನಾಂದಿ’ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ರಾಜ್ಯದೆಲ್ಲೆಡೆ ತರಬೇತಿ ಪ್ರಗತಿಯಲ್ಲಿದೆ ಎಂದರು.

ಯುವಜನರು ಉದ್ಯಮಗಳ ಅಗತ್ಯಕ್ಕೆ ತಕ್ಕ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ಎರಡನ್ನೂ ತಮ್ಮದನ್ನಾಗಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸರಕಾರವು ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ನಾನಾ ಬಗೆಯ ತರಬೇತಿಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇದರಿಂದಾಗಿ ಇನ್ನು ಕೆಲವೇ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗವು ಕರಕುಶಲ ಮತ್ತು ಸಾಂಪ್ರದಾಯಿಕ ವೃತ್ತಿಗಳ ಪ್ರದೇಶವಾಗಿದ್ದು, ಇವುಗಳ ಸಂರಕ್ಷಣೆ ಮತ್ತು ಮಾರುಕಟ್ಟೆ ಸೃಷ್ಟಿಗೆ ಕೂಡ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕಸುಬುದಾರರಿಗೆ ಸೂಕ್ತ ಅವಕಾಶಗಳು ಸಿಗಲಿದ್ದು, ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಭಾಗದಲ್ಲಿರುವ ಕೊಪ್ಪಳ ಮತ್ತು ಯಾದಗಿರಿ ಜಿಟಿಟಿಸಿಗಳಲ್ಲಿ ಯುವಜನರಿಗೆ ಇಂಗ್ಲಿಷ್ ಭಾಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು, ಸದ್ಯದಲ್ಲೇ ಈ ಕೇಂದ್ರಗಳಲ್ಲಿ ತಲಾ 200 ಜನರಿಗೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅಗತ್ಯವಾದ ಸಂವಹನ ತರಬೇತಿ ಕೊಡಲಾಗುವುದು. ಇದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಲಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಎಂಎಲ್ಸಿ ಸುನೀಲ್ ವಲ್ಯಾಪುರೆ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಹೈದರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಮುಖಂಡ ಬಿ.ಜಿ.ಪಾಟೀಲ ಮುಂತಾದವರಿದ್ದರು.

ವಿಶ್ವಕರ್ಮ ಸಮುದಾಯ ಬಲವರ್ಧನೆಗೆ ಒಪ್ಪಂದ (ಬಾಕ್ಸ್)

ಇದೇ ಸಂದರ್ಭದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ವಿಶ್ವಕರ್ಮ ಸಮುದಾಯದ ಪರಂಪರಾಗತ ವೃತ್ತಿಗಳಾದ ಬಂಗಾರ ಮತ್ತು ಬೆಳ್ಳಿ ತಯಾರಿಕೆ, ಮರಗೆಲಸ ಮತ್ತು ಶಿಲ್ಪಕಲೆಗಳಿಗೆ ಸಂಬಂಧಿಸಿದಂತೆ ಜನಾಂಗದ ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಲು ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮತ್ತು ವಿಶ್ವಕರ್ಮ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅವರು ಈ ಒಪ್ಪಂದಕ್ಕೆ ಸಹಿ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.

ಕೊಪ್ಪಳ ಟಾಯ್ ಕ್ಲಸ್ಟರ್: ಸ್ಥಳೀಯರ ತರಬೇತಿಗೆ ಒಡಂಬಡಿಕೆ (ಬಾಕ್ಸ್)

ಉದ್ಯೋಗ ಮೇಳದಲ್ಲಿ, 25 ಸಾವಿರ ಉದ್ಯೋಗ ಸೃಷ್ಟಿಯ ಸಾಮರ್ಥ್ಯವಿರುವ ಕೊಪ್ಪಳದ ಟಾಯ್ ಕ್ಲಸ್ಟರ್ ಸ್ಥಾಪನೆಗೆ ಪೂರಕವಾಗಿ ಸ್ಥಳೀಯರಿಗೆ ತರಬೇತಿ ನೀಡಲು ಎಐಕ್ಯೂಯುಎಸ್ ಸಂಸ್ಥೆಯೊಂದಿಗೆ ಕೌಶಲ್ಯಾಭಿವೃದ್ಧಿ ನಿಗಮವು ಸಚಿವ ಅಶ್ವತ್ ನಾರಾಯಣ್ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿತು. ಈ ಸಂದರ್ಭದಲ್ಲಿ ಆ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜು ಉಪಸ್ಥಿತರಿದ್ದರು.

Key words: Economic-empowerment -digital – Minister -Ashwath Narayan