ಮೈಸೂರು,ಅಕ್ಟೋಬರ್,23,2024 (www.justkannada.in): ಮುಡಾ ಕಚೇರಿ ಮೇಲೆ ಇಡಿ ದಾಳಿ ಸಿಎಂ ಸಿದ್ದರಾಮಯ್ಯರನ್ನ ಬೆದರಿಸುವ ಕೆಲಸವಷ್ಟೇ. ಬೈ ಎಲೆಕ್ಷನ್ ನಲ್ಲಿ ಜನರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಮುಡಾ ಕಚೇರಿ ಮೇಲೆ ಇಡಿ ದಾಳಿ ಮಾಡಿತ್ತು. ಎರಡು ದಿನಗಳ ದಾಳಿಯಲ್ಲಿ ಅನೇಕ ದಾಖಲೆ ಕೊಂಡೋಯ್ಯಲಾಗಿದೆ. ಯಾವುದಾದರೂ ತನಿಖಾ ಸಂಸ್ಥೆ ವರದಿ ನೀಡಿ ಮನಿ ಲಾಂಡ್ರಿಂಗ್ ಆಗಿದ್ದರೆ ಹಣ ಅವ್ಯವಹಾರ ಆಗಿದ್ರೆ ಇಡಿ ಎಂಟ್ರಿ ಆಗಬೇಕು. ಲೋಕಾಯುಕ್ತ ಮತ್ತು ನ್ಯಾಯಧೀಶರ ತನಿಖಾ ತಂಡ ತನಿಖೆ ಮಾಡುವ ಹಂತದಲ್ಲೇ ಇಡಿ ಎಂಟ್ರಿಯಾಗಿದೆ. ಇದು ಸಿದ್ದರಾಮಯ್ಯರನ್ನ ಬೆದರಿಸುವ ಕೆಲಸವಷ್ಟೇ. ಸಾಕ್ಷಿ, ದಾಖಲೆಗಳನ್ನ ಸೃಷ್ಟಿ ಮಾಡುವ ಕೆಲಸಕ್ಕೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಕ್ರೈಮ್ ನಡೆಯುವ ಮುನ್ನವೇ ಇವರೇ ಕೆಲವು ಅಧಿಕಾರಿಗಳನ್ನ ಬೆದರಿಸಿ, ಸಹಿ ಮಾಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳ ನಡೆಯ ಬಗ್ಗೆ ಕೋರ್ಟ್ ಗಮನಕ್ಕೆ ತರುತ್ತೇವೆ ಎಂದರು.
ಈಗಾಗಲೇ ಹಲವು ರಾಜ್ಯಗಳಲ್ಲಿ ಚುನಾವಣೆ ಬರುತ್ತಿವೆ. ರಾಜ್ಯದಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ. ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯಗೆ ವಿಚಾರಣೆ ಗೆ ಹಾಜರಾಗಬೇಕೆಂದು ನೋಟಿಸ್ ನೀಡುವ ಸಾಧ್ಯತೆ ಇದೆ. ಬಿಜೆಪಿಯವರ ಮನಸ್ಥಿತಿ ಏನೆಂಬುದನ್ನ ಇದು ತಿಳಿಸುತ್ತದೆ. ಸಾವಿರಾರು ಕೋಟಿ ಹಗರಣದಲ್ಲಿ ಭಾಗಿಯಾಗಿರೋರು ಬಿಜೆಪಿ ಸೇರ್ಪಡೆಯಾದರೆ ಕ್ಲಿನ್ ಚೀಟ್ ಕೊಡಿಸುವ ಕೆಲಸ ಆಗುತ್ತದೆ. ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಸೇರಿದಂತೆ ಹಲವರ ಹಗರಣಗಳಿಗೆ ಕ್ಲಿನ್ ಚೀಟ್ ನೀಡಲಾಗಿದೆ. ಬಿಜೆಪಿಯವರು ದೇಶದಲ್ಲಿ ಅಧಿಕಾರಕ್ಕಾಗಿ ಯಾವುದೇ ಹಂತಕ್ಕೆ ಬೇಕಿದರೂ ಹೋಗುತ್ತಾರೆ ಎಂದು ಕಿಡಿಕಾರಿದರು.
ಮುಡಾದಲ್ಲಿ 5ಸಾವಿರ ಕೋಟಿ ಹಗರಣ ಆಗಿದ್ರೆ ಪಟ್ಟಿ ಬಿಡುಗಡೆ ಮಾಡಿ.
5ಸಾವಿರ ಕೋಟಿ ಹಗರಣ ಎಂದು ಹಲವರು ಮಾತನಾಡುತ್ತಿದ್ದರು. ಸಿಎಂ ಅವರು 14 ಸೈಟ್ ವಾಪಾಸ್ ಕೊಟ್ಟ ಮೇಲೆ 5 ಸಾವಿರ ಕೋಟಿ ಹಗರಣ ಎಲ್ಲಿ ಹೋಯ್ತು. ಮುಡಾದಲ್ಲಿ 5ಸಾವಿರ ಕೋಟಿ ಹಗರಣ ಆಗಿದ್ದರೆ ಪಟ್ಟಿ ಬಿಡುಗಡೆ ಮಾಡಿ. ಸಿಎಂ ಸಿದ್ದರಾಮಯ್ಯರನ್ನ ಮಾತ್ರ ಟಾರ್ಗೆಟ್ ಮಾಡಿದ್ರಲ್ಲ. ಇದು ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಸಿಎಂ ಸಿದ್ದರಾಮಯ್ಯ ನೆನ್ನೆ ವರುಣ ಕ್ಷೇತ್ರದಲ್ಲಿ ಭಾವುಕರಾಗಿ ಭಾಷಣ ಮಾಡಿದರು. ಇದುವರೆಗೂ ಸ್ವಂತ ಮನೆ ಕಟ್ಟಿಕೊಳ್ಳಲಿಕ್ಕೆ ಆಗಿಲ್ಲ ಅವರು. ಇಡೀ ಕಾಂಗ್ರೆಸ್ ಸಿದ್ದರಾಮಯ್ಯಗೆ ಬಂಡೆಯಂತೆ ನಿಲ್ಲುತ್ತದೆ. ಬೈ ಎಲೆಕ್ಷನ್ ನಲ್ಲಿ ಜನ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಕುಮಾರಸ್ವಾಮಿ ಇದುವರೆಗೂ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ಕೆಲಸ. ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಸಿಪಿ ಯೋಗೇಶ್ವರ್ ಹೇಳಿರೋದು. ಜೆಡಿಎಸ್, ಬಿಜೆಪಿ ವಿರುದ್ಧ ಮತ ನೀಡುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಜನತೆ ಕುಮಾರಸ್ವಾಮಿಯವರಿಗೆ ಪಾಠ ಕಲಿಸುತ್ತಾರೆ ಎಂದರು.
ಜಾತಿಗಣತಿ ವರದಿಯನ್ನ ಜಾರಿ ಮಾಡಲೇಬೇಕು.
ಜಾತಿಗಣತಿ ವರದಿಯನ್ನ ಜಾರಿ ಮಾಡಲೇಬೇಕು. ಜಾತಿಗಣತಿ ವರದಿಯನ್ನ ಒಕ್ಕಲಿಗರು ಯಾಕೆ ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ. ನಾನು ಕೂಡ ಒಕ್ಕಲಿಗನಾಗಿ ಜಾತಿಗಣತಿ ವರದಿಯನ್ನ ಸ್ವೀಕಾರ ಮಾಡುತ್ತಿದ್ದೇನೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೂ ಜಾತಿಗಣತಿ ವರದಿಯಿಂದ ಲಾಭವಿದೆ. ಜಾತಿಗಣತಿ ವರದಿ ಬಗ್ಗೆ ದಯವಿಟ್ಟು ವಿರೋಧ ಮಾಡಬೇಡಿ. ಈಗ ನೀವು ಇದಕ್ಕೆ ಸಹಕಾರ ನೀಡದೆ ಇದ್ದರೆ ಮುಂದೆ ಜಾರಿ ಮಾಡಲು ಸಾಧ್ಯವಿಲ್ಲ. ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ರಾಜಕಾರಣ ಬೇಡ ಎಂದು ಲಕ್ಷ್ಮಣ್ ತಿಳಿಸಿದರು.
ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತೆ- ಎಂಎಲ್ ಸಿ ಡಾ.ತಿಮ್ಮಯ್ಯ
ಹಾಗೆಯೇ ಎಂಎಲ್ಸಿ ಡಾ.ತಿಮ್ಮಯ್ಯ ಮಾತನಾಡಿ, ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಜನಪರ ಯೋಜನೆಗಳಿಂದ ಜನ ಕಾಂಗ್ರೆಸ್ ಪರ ಇದ್ದಾರೆ. ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ಕ್ಷೇತ್ರ ಮೂರನ್ನೂ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಜೊತೆ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಕ್ಷೇತ್ರ ಈ ಬಾರಿ ಕಾಂಗ್ರೆಸ್ ವಶವಾಗೋದು ಗ್ಯಾರಂಟಿ. ಯಾಕೆಂದರೆ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸಿಪಿ ಯೋಗೇಶ್ವರ್ ಬಂದಿರುವುದರಿಂದ ನಮಗೆ ಸಾಕಷ್ಟು ಬಲ ಬಂದಿದೆ. ಸಿಪಿ ಯೋಗೇಶ್ವರ್ ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಅವರಿಗೆ ಸ್ವಾಗತ. ಅವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.
ಸಂಸದ ಯದುವೀರ್ ವಿರುದ್ಧ ಕಾಂಗ್ರೆಸ್ ಮುಖಂಡ ಶಿವಣ್ಣ ವಾಗ್ದಾಳಿ
ಸಂಸದ ಯದುವೀರ್ ಒಡೆಯರ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಶಿವಣ್ಣ, ಸಂಸದರಾಗಿ ಐದು ತಿಂಗಳಾಗಿದೆ ಮೈಸೂರು ಕೊಡಗು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಸಿಎಂ ರಾಜೀನಾಮೆ ಬಗ್ಗೆ ನೀವು ಮಾತನಾಡಿದ್ದೀರಾ. ನಿಮ್ಮ ಪಕ್ಕದಲ್ಲೇ ಕುಳಿತಿದ್ದ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಮಾತನಾಡಿ. 2020-21ರಲ್ಲಿ ನಡೆದ ಮುಡಾ ಸಭೆಯಲ್ಲಿ ಎಲ್ಲ ಪಕ್ಷದವರು ಭಾಗಿಯಾಗಿದ್ದರು. ಸಿಎಂ ಪತ್ನಿಗೆ ನೀಡಿದ ಸೈಟ್ ಸೇರಿದಂತೆ 240 ವಿಷಯಗಳಿಗೆ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಎಲ್ ನಾಗೇಂದ್ರರಿಗೆ ಮುಡಾ ಹಗರಣ ಬಗ್ಗೆ ಗೊತ್ತಿಲ್ಲವೇ. ಮುಡಾ ಹಗರಣದಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಪಾತ್ರ ಏನೆಂಬುದನ್ನ ತಿಳಿಸಿ. ನಂತರ ಸಿಎಂ ರಾಜೀನಾಮೆ ಕೇಳಿ. ಇಲ್ಲ ನೀವು ಸಂಸದ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ ಎಂದು ಕಿಡಿಕಾರಿದರು.
Key words: ED, CM Siddaramaiah, BJP, by-election, M. Laxman