ಮೈಸೂರು,ಫೆಬ್ರವರಿ,17,2023(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಬಳಿ ಇಡಿ,ಐಟಿ ಹೋಗಲು ಸಾಧ್ಯವೇ ಇಲ್ಲ ಹೀಗಾಗಿ ಪದೇ ಪದೇ ಸಿದ್ಧರಾಮಯ್ಯರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂ.ಲಕ್ಷ್ಮಣ್, ರಾಜ್ಯದಲ್ಲಿ ಅಶಾಂತಿ ಮೂಡಿಸಲು ಬಿಜೆಪಿಯಲ್ಲಿ ಮೂವರನ್ನು ನೇಮಕಗೊಳಿಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಬಂದು ಹೋದ ಮೇಲೆ ಈ ಬೆಳವಣಿಗೆ ಆಗಿದೆ. ಸಿಟಿ ರವಿ, ಅಶ್ವಥ್ ನಾರಾಯಣ್ ಹಾಗೂ ಈಶ್ವರಪ್ಪರನ್ನ ನೇಮಿಸಿದ್ದಾರೆ. ಆದ್ದರಿಂದಲೇ ಸಿದ್ದರಾಮಯ್ಯ ವಿರುದ್ಧ ಹೊಡಿ ಬಡಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಗೆ ಸಿದ್ದರಾಮಯ್ಯ ಎದುರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮನ್ನು ಕೊಲ್ಲಲಿ ಬಳಿಕ ಸಿದ್ದರಾಮಯ್ಯ ಬಳಿ ಹೋಗಲಿ. ಇಡಿ ಐಟಿ ಸಿದ್ದರಾಮಯ್ಯ ಬಳಿ ಹೋಗಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯರನ್ನ ಆಪರೇಷನ್ ಕಮಲ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಂತಿಮವಾಗಿ ಕೊಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಒಬ್ಬ ಉಪಮುಖ್ಯಮಂತ್ರಿ ಆಗಿದ್ದವರು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಚಟುವಟಿಕೆಗಳು ಇನ್ನುಮುಂದೆ ಹೆಚ್ಚಾಗಲಿದೆ. ಜನರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಪ್ಲಾನ್ ಮಾಡಿದೆ. ಮಂದಿನ ದಿನಗಳಲ್ಲಿ ಮೈಸೂರು ಬಂಧ್ ಮಾಡಲು ತೀರ್ಮಾನ ಮಾಡುತ್ತಿದ್ದೇವೆ ಎಂದರು.
ಹೊಡಿ, ಬಡಿ, ಕೊಲ್ಲಿ ಎಂಬುದು ಬಿಜೆಪಿ ರಕ್ತದಲ್ಲಿದೆ – ಡಾ.ಪುಷ್ಪಾ ಅಮರನಾಥ್ ಕಿಡಿ
ಸಚಿವ ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್ ಕಟ್ಟೋ ಕೆಲಸ ಮಾಡಿದ್ರೆ ಬಿಜೆಪಿ ಕೆಡುವೋ ಕೆಲಸ ಮಾಡುತ್ತಿದೆ. ಹೊಡಿ, ಬಡಿ, ಕೊಲ್ಲಿ ಎಂಬುದು ಬಿಜೆಪಿ ರಕ್ತದಲ್ಲಿದೆ ಇದು ಅಶ್ವಥ್ ನಾರಾಯಣ್ ಹೇಳಿಕೆ ಅಲ್ಲ ಇಡೀ ಬಿಜೆಪಿ ಹೇಳಿಕೆ. ಸಿದ್ದರಾಮಯ್ಯರನ್ನು ಮುಟ್ಟುವುದಿರಲಿ ನಮ್ಮನ್ನು ಮುಟ್ಟಿ ನೋಡಿ ಎಂದು ಹರಿಹಾಯ್ದರು
ಉನ್ನತ ಶಿಕ್ಷಣ ಸಚಿವರಿಗೆ ಮೊದಲು ಪ್ರಾಥಮಿಕ ಶಿಕ್ಷಣ ಅಗತ್ಯವಿದೆ. ಸಿಎಂ ಬೊಮ್ಮಾಯಿ ಈ ಕೂಡಲೇ ಇಂತಹ ವ್ಯಕ್ತಿಯನ್ನು ಸಂಪುಟದಿಂದ ಕೈಬಿಡಬೇಕು ಪುಷ್ಪಾ ಅಮರನಾಥ್ ಆಗ್ರಹಿಸಿದರು.
Key words: ED-IT – Siddaramaiah-repeated- attacks – target-M. Laxman.