ಬೆಂಗಳೂರು, ಅಕ್ಟೋಬರ್ 4, 2021 (www.justkannada.in): ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಿರುವ ಅನಕ್ಷರಸ್ಥರು ಶೀಘ್ರದಲ್ಲೇ ಓದುವುದು ಹಾಗೂ ಬರೆಯುವುದನ್ನು ಕಲಿಯಲಿದ್ದಾರೆ. ಈವರೆಗೆ ಹೆಬ್ಬೆಟ್ಟನ್ನು ಉಪಯೋಗಿಸುತ್ತಿದ್ದಂತಹ ಕೆಲವು ಜೈಲುವಾಸಿಗಳು ಇನ್ನು ಮುಂದೆ ಸಹಿಗಳನ್ನು ಹಾಕುವುದು ಹಾಗೂ ಪುಸ್ತಕಗಳನ್ನು ಓದುವ ಮಟ್ಟಕ್ಕೆ ಬೆಳೆಯಲಿದ್ದಾರೆ.
ಹೌದು. ಕಾರಾಗೃಹಗಳು ಹಾಗೂ ತಿದ್ದುಪಡಿ ಸೇವೆಗಳ ಇಲಾಖೆ, ಸಮೂಹ ಶಿಕ್ಷಣ ನಿರ್ದೇಶನಾಲಯದ ಸಹಯೋಗದೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವವರನ್ನು ಅಕ್ಷರಸ್ಥರನ್ನಾಗಿಸುವ ಹೊಸ ಸಾಕ್ಷರತಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಇಲಾಖೆಯು ಜೈಲಿನೊಳಗೇ ಇರುವಂತಹ ಕಲಿಸಲು ಆಸಕ್ತಿ ಇರುವಂತಹ ಸಾಕ್ಷರಸ್ಥರನ್ನು ಗುರುತಿಸಿ, ಓದು ಬರಹವನ್ನು ಕಲಿಸಲು ನೇಮಕ ಮಾಡಿದೆ.
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ೪,೫೦೦ ಕೈದಿಗಳಿದ್ದಾರೆ. ಒಟ್ಟು ೧,೧೦೦ ದೋಷಿಗಳ ಪೈಕಿ ೩೫೦ ದೋಷಿಗಳು ಸಾಕ್ಷರಸ್ಥರಾಗಿರುವುದನ್ನು ಪತ್ತೆ ಹಚ್ಚಲಾಯಿತು. ಈ ಜೈಲಿನ ಒಳಗಿರುವ ಎಲ್ಲರನ್ನೂ ಶಿಕ್ಷಿತರನ್ನಾಗಿಸುವ ಹಾಗೂ ಅವರ ಜೀವನವನ್ನು ಪರಿವರ್ತಿಸುವ ಗುರಿಯೊಂದಿಗೆ ಇಲಾಖೆಯು ಮೂರನೇ ತರಗತಿಯ ಪಠ್ಯಕ್ರಮದ ಪ್ರಾಥಮಿಕ ಕಲಿಕೆಯೊಂದಿಗೆ ಆರು ತಿಂಗಳ ಅವಧಿಯ ವಿಶೇಷ ಕೋರ್ಸ್ ನ ವ್ಯವಸ್ಥೆ ಮಾಡಿದೆ.
ಒಟ್ಟು ನೂರು ದೋಷಿಗಳನ್ನು 10 ಬ್ಯಾಚ್ಗಳಲ್ಲಿ ವಿಂಗಡಿಸಿ ಒಬ್ಬ ತರಬೇತುದಾರರನ್ನು ನೇಮಕ ಮಾಡಲಾಗಿದೆ. ಕಾರಾಗೃಹದ ಮುಖ್ಯ ವರಿಷ್ಠಾಧಿಕಾರಿ ರಘುನಾಥ್ ಪಿ. ಅವರು ಈ ಕುರಿತು ಮಾತನಾಡುತ್ತಾ, ಪರಪ್ಪನ ಅಗ್ರಹಾರದ ಒಳಗಿರುವ ದೋಷಿಗಳಲ್ಲಿ ವಾಣಿಜ್ಯ ಪದವಿ ಪಡೆದಿರುವವರು ಹಾಗೂ ಎಂಬಿಎ ಮಾಡಿರುವವರೂ ಸಹ ಇದ್ದಾರೆ. ಅಂತಹವರ 10 ದೋಷಿಗಳನ್ನು ಬೋಧಕರನ್ನಾಗಿ ಗುರುತಿಸಲಾಗಿದೆ ಎಂದರು.
100 ಜನರನ್ನು ಒಳಗೊಂಡ ಮೊದಲ ಬ್ಯಾಚ್ ನ ತರಬೇತಿ ಪೂರ್ಣಗೊಂಡ ನಂತರ, ಅದೇ ಬೋಧಕರ ಮಾರ್ಗದರ್ಶನದಡಿ ಈ ಕೋರ್ಸ್ ಅನ್ನು ಉಳಿದವರಿಗೂ ವಿಸ್ತರಿಸಲಾಗುವುದು.
“ಪ್ರಸ್ತುತ ಶಿಕ್ಷಣ ಇಲಾಖೆಯಿಂದ ದೋಷಿಗಳಿಗೆ ಬೋಧಕರಾಗಿ ಕೆಲಸ ಮಾಡುವವರಿಗೆ ಒಂದು ತರಬೇತಿ ಚಟುವಟಿಕೆ ನಡೆಯುತ್ತಿದೆ. ತರಬೇತಿ ಪೂರ್ಣಗೊಂಡ ನಂತರ, ಅಂದರೆ ಬಹುಶಃ ಮುಂದಿನ ವಾರದಿಂದ ಭೋದನಾ ತರಗತಿಗಳು ಆರಂಭವಾಗುತ್ತವೆ. ಸಮೀಕ್ಷೆಯೊಂದರಿಂದ ಪರಪ್ಪನ ಅಗ್ರಹಾರ ಕಾರಾಗೃಹದ ಒಳಗಿರುವ ಒಟ್ಟು ಅಪರಾಧಿಗಳ ಪೈಕಿ ೩೫೦ ದೋಷಿಗಳು ಸಂಪೂರ್ಣ ಅನಕ್ಷರಸ್ಥರಾಗಿದ್ದು, ಅವರೆಲ್ಲರೂ ಹೆಬ್ಬೆಟ್ಟಿನ ಗುರುತನ್ನು ನೀಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದರು.
ಕಾರಾಗೃಹಗಳ ಡಿಜಿ ಅಲೋಕ್ ಮೋಹನ್ ಅವರು ಈ ಹೆಬ್ಬೆಟ್ಟುಗಳಿಗೆ ಪ್ರಾಥಮಿಕ ಶಿಕ್ಷಣವನ್ನು ಕೊಡಿಸುವ ಮೂಲಕ ಅವರು ಕನಿಷ್ಠ ತಮ್ಮ ಸಹಿಗಳನ್ನು ಮಾಡುವಷ್ಟಾದರೂ ಅವರನ್ನು ತರಬೇತುಗೊಳಿಸಬೇಕು ಎಂದು ನಿರ್ಧರಿಸಿ ಈ ಸಾಕ್ಷರತಾ ಕಾರ್ಯಕ್ರಮದ ಉಪಕ್ರಮವನ್ನು ಕೈಗೊಂಡರಂತೆ.
ಇದರಿಂದ, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬೋಧನಾ ತರಬೇತಿಯನ್ನು ಪಡೆದುಕೊಳ್ಳಲು ಮುಂದೆ ಬಂದಿರುವ ಇತರೆ ದೋಷಿಗಳಿಗೂ ನೆರವಾಗುವುದರ ಜೊತೆಗೆ ಅವರಿಗೆ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತವೆ. ಒಮ್ಮೆ ಇವರೆಲ್ಲರೂ ಕಾರಾಗೃಹದಿಂದ ಬಿಡುಗಡೆಗೊಂಡ ನಂತರ, ಅವರು ತಮ್ಮ ಹೊಸ ಜೀವನ ಆರಂಭಿಸಲು, ಬೋಧಕ ವೃತ್ತಿಯಂತಹ ಅವರಿಗಿಷ್ಟವಾದಂತಹ ವಿವಿಧ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ನೆರವಾಗಬಲ್ಲದು,” ಎಂದು ರಘುನಾಥ್ ವಿವರಿಸಿದರು.
ಈ ಉಪಕ್ರಮವನ್ನು ಗಾಂಧಿ ಜಯಂತಿ ದಿನದಂದು, ಅಂದರೆ ಕಳೆದ ಶನಿವಾರದಂದು ಆರಂಭಿಸಲಾಯಿತು. ಆರು ತಿಂಗಳ ಕೋರ್ಸ್ ಪೂರ್ಣಗೊಂಡ ನಂತರ, ಎಲ್ಲಾ 100 ದೋಷಿಗಳೂ ಸಹ ಪ್ರಮಾಣಪತ್ರ ಪಡೆಯಲು ಒಂದು ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಬೋಧಕರಿಗೆ ಪ್ರಮಾಣಪತ್ರಗಳ ಜೊತಗೆ ಸರ್ಕಾರದ ವತಿಯಿಂದ ಅವರು ಒದಗಿಸುವ ಸೇವೆಗಳಿಗೆ ವೇತನವೂ ಲಭಿಸಲಿದೆಯಂತೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Education- Bangalore- parappana agrahara- prisoner